ADVERTISEMENT

ವಿಜಯಪುರ | ಪುರಸಭೆ ಆಕ್ಷೇಪ: ರಸ್ತೆ ಕಾಮಗಾರಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 4:18 IST
Last Updated 21 ಜನವರಿ 2026, 4:18 IST
 ರಸ್ತೆ ವಿಸ್ತರಣೆ ಕಾಮಗಾರಿ ಸ್ಥಳ ಪರಿಶೀಲಿಸಿದ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್. 
 ರಸ್ತೆ ವಿಸ್ತರಣೆ ಕಾಮಗಾರಿ ಸ್ಥಳ ಪರಿಶೀಲಿಸಿದ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್.    

ವಿಜಯಪುರ (ದೇವನಹಳ್ಳಿ): ಪಟ್ಟಣದ ಶಿವಗಣೇಶ ಸರ್ಕಲ್‌ನಿಂದ ಶಿಡ್ಲಘಟ್ಟ ಕ್ರಾಸ್‌ವರೆಗೆ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳ ಆಕ್ಷೇಪದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದೆ.

ಪುರಸಭೆ ವ್ಯಾಪ್ತಿಯ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೊಂಡಿತ್ತು. ಇದಕ್ಕೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಪುರಸಭೆ ಅಧಿಕಾರಿಗಳು, ಸದಸ್ಯರು ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು.

ಸ್ಥಳ ಪರಿಶೀಲನೆ ವೇಳೆ ಕಾಮಗಾರಿ ನಡೆಯುತ್ತಿದ್ದನ್ನು ಕಂಡ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್, ಸದಸ್ಯರಾದ ಬೈರೇಗೌಡ, ನಂದಕುಮಾರ್, ರವಿಕುಮಾರ್, ಸಿ.ನಾರಾಯಣಸ್ವಾಮಿ ಹಾಗೂ ಸ್ಥಳೀಯ ನಿವಾಸಿಗಳು ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದರು. ಅಲ್ಲಿಗೆ ಕಾಮಗಾರಿ ಸ್ಥಗಿತಗೊಳಸಲಾಯಿತು.

ಪುರಸಭೆಯ ಕೋಟ್ಯಾಂತರ ಮೌಲ್ಯದ ಆಸ್ತಿ  ಒತ್ತುವರಿ ಹಾಗೂ ಒಂದೆ ಬದಿಗೆ ರಸ್ತೆ ವಿಸ್ತರಣೆಗೆ ಮುಂದಾಗಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಕ್ರಮ ಖಂಡಿಸಿ ಸೋಮವಾರ ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಇದು ರಾಜಕೀಯ ತಿರುವು ಪಡೆದುಕೊಂಡಿತು.

ರಸ್ತೆಯ ಮಧ್ಯೆ ಭಾಗದಿಂದ ಎರಡು ಬದಿಗೆ 11 ಮೀಟರ್ ರಸ್ತೆ ವಿಸ್ತರಣೆ ಕಾಮಗಾರಿ ನಡೆಸುವ ಬಗ್ಗೆ ಲೋಕೋಪಯೋಗಿ ಇಲಾಖೆಯ ನೋಟಿಸ್‌ನಲ್ಲಿ ತಿಳಿಸಿದೆ. ಅದರಂತೆ ಕಾಮಗಾರಿ ನಡೆಸಲು ಇಲಾಖೆಯ ಅಧಿಕಾರಿಗಳಿಗೆ ಪುರಸಭೆ ಅಧಿಕಾರಿಗಳು, ಸದಸ್ಯರು ಸೂಚಿಸಿದರು. ಈಗ ಪುರಸಭೆ ಆಸ್ತಿ ಒತ್ತುವರಿ ಹಾಗೂ ಒಂದೆ ಬದಿ ರಸ್ತೆ ವಿಸ್ತರಣೆ ನಡೆದಿತ್ತು. ಆ ಕಾಮಗಾರಿಗೆ ತಡೆ ಬಿದ್ದಿದ್ದು, ಸ್ಥಳೀಯ ನಿವಾಸಿಗಳ ಆತಂಕ ದೂರವಾಗಿದೆ.

ಲೋಕೋಪಯೋಗಿ ಅಧಿಕಾರಿಗಳಿಗೆ ಮುಜುಗರ ರಸ್ತೆ ವಿಸ್ತರಣೆ ಕಾಮಗಾರಿಗೆ ಸಂಬಂಧಿಸಿದಂತೆ ಪುರಸಭೆ ಹಾಗೂ ಸ್ಥಳೀಯ ನಿವಾಸಿಗಳಿಂದ ಮಾಹಿತಿ ಮುಚ್ಚಿಟ್ಟು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾಮಗಾರಿ ಆರಂಭಿಸಿದ್ದರು. ಪುರಸಭೆಯ ಆಸ್ತಿಯನ್ನು ರಸ್ತೆಗಾಗಿ ಒತ್ತುವರಿ ಪಡಿಸಿಕೊಳ್ಳುತ್ತಿರುವ ಕುರಿತು ಮಂಗಳವಾರ ಪುರಸಭೆಯಲ್ಲಿ ಅಧ್ಯಕ್ಷರು ಉಪಾಧ್ಯಕ್ಷರು ಅಧಿಕಾರಿಗಳ ಸಮ್ಮುಖದಲ್ಲಿ ಹಲವು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇಲಾಖೆಯ ತಿಳುವಳಿಕೆ ಪತ್ರದಲ್ಲಿ ಕಾನೂನು ಉಲ್ಲಂಘಸಿರುವ ಬಗ್ಗೆ ಎಲ್ಲರ ಎದುರು ಬಹಿರಂಗಗೊಂಡಾಗ ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮುಜಗರಕ್ಕೆ ಒಳಗಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT