
ವಿಜಯಪುರ(ದೇವನಹಳ್ಳಿ): ಪಟ್ಟಣದ ಹೊರವಲಯದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಸುರಿದಿದ್ದ ಕಟ್ಟಡ ತ್ಯಾಜ್ಯ, ಅನುಪಯುಕ್ತ ವಸ್ತು, ಪ್ಲಾಸ್ಟಿಕ್ ಹಾಗೂ ಕಸದ ರಾಶಿಯನ್ನು ತೆರವುಗೊಳಿಸುವ ಕಾರ್ಯವನ್ನು ಪುರಸಭೆಯಿಂದ ಆರಂಭಿಸಲಾಗಿದೆ.
ಪಟ್ಟಣದ ಹೊರವಲಯದ ಚನ್ನರಾಯಪಟ್ಟಣ ಬೈಪಾಸ್ ರಸ್ತೆ, ಮಂಡಿಬೆಲೆ ರಸ್ತೆ, ಚಿಕ್ಕಬಳ್ಳಾಪುರ ಮುಖ್ಯರಸ್ತೆಯ ವಿಜಯಪುರ ಅಮಾನಿಕೆರೆ ಏರಿ, ಶಿಡ್ಲಘಟ್ಟ ಕ್ರಾಸ್ ಮೂಲಕ ನಾಗರಬಾವಿ ರಸ್ತೆ, ಕೋಲಾರ ಮುಖ್ಯರಸ್ತೆ, ದೇವನಹಳ್ಳಿ ಮುಖ್ಯರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ರಾಶಿ ಗೋಚರಿಸುತ್ತಿದ್ದು, ಇದಕ್ಕೆ ಪುರಸಭೆ ಅಧಿಕಾರಿಗಳು ಕಡಿವಾಣ ಹಾಕಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದ್ದವು.
ರಸ್ತೆ ಇಕ್ಕೆಲಗಳಲ್ಲಿ ಸುರಿದ ತ್ಯಾಜ್ಯದಿಂದ ಅಸಹ್ಯಕರವಾದ ವಾತಾವರಣ ಸೃಷ್ಟಿಯಾಗಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಿತ್ತು. ಇದರಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು.
ಈ ಕುರಿತು ನವೆಂಬರ್ 16 ರಂದು ‘ರಸ್ತೆ ಇಕ್ಕೆಲಗಳಲ್ಲಿ ಕಸದ ರಾಶಿ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟಿಸಿತ್ತು. ವರದಿ ಬಂದ ಬಳಿಕ ಎಚ್ಚೆತ್ತುಕೊಂಡ ಪುರಸಭೆಯು ರಸ್ತೆಯ ಇಕ್ಕೆಲಗಳಲ್ಲಿ ಸುರಿದಿರುವ ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದೆ.
ತ್ಯಾಜ್ಯ ತೆರವುಗೊಳಿಸಿದ ಜಾಗದಲ್ಲಿ ಅಡ್ಡಲಾಗಿ ತ್ಯಾಜ್ಯ ಸುರಿಯದಂತೆ ಗ್ರೀನ್ ಶೆಡ್ ನೆಟ್ ಕಟ್ಟಲಾಗಿದೆ. ಸ್ಥಳದಲ್ಲಿ ಕಸ ಹಾಕುವುದನ್ನು ನಿಷೇಧಿಸಲಾಗಿದೆ. ಕಸ ಹಾಕುವವರಿಗೆ ₹500 ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ಫಲಕ ಅವಳವಡಿಸಲಾಗಿದೆ.
ಪಟ್ಟಣದ ಪ್ರತಿ ವಾರ್ಡ್‍ಗೂ ಪುರಸಭೆಯಿಂದ ಕಸ ಸಂಗ್ರಹಿಸುವ ವಾಹನ ಕಳುಹಿಸಲಾಗುತ್ತಿದೆ. ಕಸ ನೀಡದೇ ಇರುವವರು ಎಲ್ಲೆಂದರಲ್ಲಿ ಕಸ ಸುರಿಯುತ್ತಿದ್ದು, ಇಂತವರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸಲಾಗುವುದು. ಪಟ್ಟಣದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ರೀತಿಯಲ್ಲಿ ಕ್ರಮ ವಹಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್ ತಿಳಿಸಿದರು.
ತ್ಯಾಜ್ಯ ಸುರಿದವರಿಗೆ ದಂಡ ವಿಜಯಪುರದ ಹೊರವಲಯದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಸುರಿದಿರುವ ತ್ಯಾಜ್ಯ ತೆರವುಗೊಳಿಸಲಾಗುತ್ತಿದೆ. ರಸ್ತೆ ಬದಿಗಳಲ್ಲಿ ತ್ಯಾಜ್ಯ ಸುರಿಯದಂತೆ ಸಾರ್ವಜನಿಕರಿಗೆ ಪುರಸಭೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ತ್ಯಾಜ್ಯ ಸುರಿಯುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುವುದು.ಸತ್ಯನಾರಾಯಣ್ ಪುರಸಭೆ ಮುಖ್ಯಾಧಿಕಾರಿ ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.