ಸಮೀಕ್ಷೆ ನಡೆಸುತ್ತಿರುವ ಶಿಕ್ಷಕರು
ವಿಜಯಪುರ (ದೇವನಹಳ್ಳಿ): ರಾಜ್ಯ ಸರ್ಕಾರದ ಶೈಕ್ಷಣಿಕ– ಆರ್ಥಿಕ ಸಮೀಕ್ಷೆಯಿಂದಾಗಿ ಸಮೀಕ್ಷೆದಾರರಾಗಿ ನಿಯೋಜನೆಗೊಂಡಿರುವ ಶಿಕ್ಷರಿಗೆ ದಸರಾ ರಜೆಯ ಖುಷಿ ಇಲ್ಲದೆ ರಜೆಯ ಮುಗಿಯುತ್ತಿದೆ.
ಸಮೀಕ್ಷೆ ಆರಂಭದ ಕೆಲ ದಿನಗಳ ಕಾಲ ನೆಟವರ್ಕ್ ಸಮಸ್ಯೆ, ಆ್ಯಪ್‍ನಲ್ಲಿ ನಮೂದಿಸಿದ ಮಾಹಿತಿಯು ಸಬ್ ಮೀಟ್ ಆಗದಿರುವುದು ಸೇರಿದಂತೆ ತಾಂತ್ರಿಕ ದೋಷ, ಪಟ್ಟಣ ಪ್ರದೇಶದಲ್ಲಿ ಮನೆಗಳ ಹುಡುಕಾಟ, ಮೇಲಾಧಿಕಾರಿಗಳ ಒತ್ತಡ.. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಸಮೀಕ್ಷೆದಾರರು ಅನುಭವಿಸಿದ್ದಾರೆ. ಈಗ ಸಮೀಕ್ಷೆಯನ್ನೂ ಬೇಗ ಪೂರ್ಣಗೊಳಿಸುವ ಸೂಚನೆಯನ್ನು ಮೇಲಾಧಿಕಾರಿಗಳು ನೀಡಿದ್ದಾರೆ. ಹೀಗಾಗಿ ರಜೆ ಖುಷಿ ಇಲ್ಲದೆ ಒತ್ತಡದಲ್ಲಿ ಸಮೀಕ್ಷೆ ಪೂರ್ಣಗೊಳಿಸು ಭರದಲ್ಲಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ರೈತರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವುದರಿಂದ ಸಮೀಕ್ಷೆ ನಡೆಸಲು ಹಗಲಿನ ವೇಳೆ ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರಾತ್ರಿಯ ವೇಳೆ ಮನೆಮನೆಗೆ ಹೋಗಿ ಸಮೀಕ್ಷೆ ನಡೆಸುವುದೆ ಶಿಕ್ಷಕರಿಗೆ ಸವಾಲಾಗಿ ಪರಿಣಮಿಸಿದೆ. ರಾತ್ರಿ ಸಮೀಕ್ಷೆ ವೇಳೆ ಸಮೀಕ್ಷೆದಾರರಿಗೆ ನಾಯಿ ಕಡಿತ ಭಯ ಆವರಿಸಿದೆ.
ಬಿಪಿಎಲ್ ಕಡಿತದ ಆತಂಕ
ಸಮೀಕ್ಷೆಗೆ ಗಣತಿದಾರರು ಬಂದು ವೈಯಕ್ತಿಕ ವಿವರಗಳನ್ನು ಕೇಳುವ ಸಮಯದಲ್ಲಿ ಆದಾಯದ ಮಾಹಿತಿ ನೀಡಿದರೆ ತಮಗಿರುವ ಬಿಪಿಎಲ್ ಕಾರ್ಡ್ ರದ್ದು ಗೊಳಿಸಲಾಗುತ್ತದೆ ಎಂಬ ಆತಂಕ ಹೆಚ್ಚಿನ ಜನರಲ್ಲಿದೆ. ಆದಾಯ ಹೆಚ್ಚು ಕಾಣಿಸಿಕೊಂಡರೆ ಸರ್ಕಾರದಿಂದ ಸಿಗುವ ಸವಲತ್ತುಗಳಿಗೆ ಕತ್ತರಿ ಬೀಳುವ ಆತಂಕಕ್ಕೆ ಒಳಗಾಗಿದ್ದಾರೆ.
ಪ್ರಸ್ತುತ 5 ಗ್ಯಾರೆಂಟಿಗಳನ್ನು ಸರ್ಕಾರ ನೀಡುತ್ತಿದ್ದು, ಅದರಲ್ಲಿ ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಬಹುತೇಕ ಫಲಾನುಭವಿಗಳಿಗೆ ತಲುಪುತ್ತಿದೆ. ಈಗ ಸಮೀಕ್ಷೆಯಲ್ಲಿ ಆರ್ಥಿಕವಾಗಿ ಸಧೃಡವಾಗಿರುವ ಕುಟುಂಬ ಎಂದು ಸಾಬೀತಾದರೆ ತಮಗೆ ಸಿಗುತ್ತಿರುವ ಯೋಜನೆಗಳಿಗೆ ಎಲ್ಲಿ ಕತ್ತರಿ ಬೀಳುತ್ತದೆ ಎಂಬುದು ಜನರಲ್ಲಿ ಆತಂಕ ಮನೆ ಮಾಡಿದೆ.
ಮೇಲಧಿಕಾರಿಗಳ ಒತ್ತಡ
ದಿನಕ್ಕೆ 15 ಮನೆ ಸಮೀಕ್ಷೆ ಮಾಡುವ ಗುರಿ ನೀಡಿದ್ದಾರೆ. ಅವಿಭಕ್ತ ಕುಟುಂಬದ ಒಂದು ಮನೆ ಸಮೀಕ್ಷೆ ಪೂರ್ಣಗೊಳಿಸಲು ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ. ಸಮೀಕ್ಷೆಗಾಗಿ ಬೆಳಿಗ್ಗೆ 8 ಗಂಟೆಗೆ ಮನೆ ಬಿಟ್ಟರೆ ರಾತ್ರಿ 9 ಗಂಟೆ ಮನೆ ಸೇರುತ್ತಿದ್ದೇವೆ. ಗುರಿ ಸಾಧಿಸದಿದ್ದರೆ ಶಿಕ್ಷಕರಿಗೆ ಮೇಲಾಧಿಕಾರಿಗಳು ಒತ್ತಡ ತರುತ್ತಿದ್ದಾರೆ ಎಂದು ಹೆಸರು ಹೇಳದ ಇಚ್ಛಿಸದ ಶಿಕ್ಷಕ ಗಣತಿದಾರರೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.