ಹೊಸಕೋಟೆ: ಪಾರಂಪರಿಕ ಕಾಯಕ ಸಮುದಯಗಳು ಕಾಲಕ್ಕೆ ತಕ್ಕಂತೆ ತಮ್ಮ ಕುಲ ಕಸುಬು ಪರಿವರ್ತಿಸಿಕೊಳ್ಳಬೇಕು. ಇಲ್ಲದಿದ್ದರೆ ಅವು ಜಡವಾಗುತ್ತವೆ. ವಿಶ್ವಕರ್ಮರ ಕೌಶಲ್ಯಭರಿತ ಜ್ಞಾನ ಬೇರೆ ಯಾವ ಸಮುದಯಗಳಲ್ಲೂ ಇಲ್ಲ. ನೀವು ವಿದ್ಯಾವಂತರಾದರೆ ಮತ್ತಷ್ಟೂ ಸಮಾಜಕ್ಕೆ ಕೊಡುಗೆ ನೀಡಬಹುದು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕಿನ ವಿಶ್ವಕರ್ಮ ಸಮುದಾಯದ 10ನೇ ವರ್ಷದ ವಿಶ್ವಕರ್ಮ ಜಯಂತ್ಯುತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅರಸೊತ್ತಿಗೆ ಸಂದರ್ಭದಲ್ಲಿ ಯುದ್ದಕ್ಕೆ ಬೇಕಾದ ಶಸ್ತ್ರಾಸ್ತ್ರ ತಯಾರಿಕೆ, ದೊಡ್ಡ ಭವನ, ದೇವಾಲಯ, ಮೂರ್ತಿಶಿಲ್ಪಗಳ ನಿರ್ಮಾಣಕ್ಕೆ ವಿಶ್ವಕರ್ಮರ ಪಾತ್ರ ಬಹುದೊಡ್ಡದು. ಆಗ ಉನ್ನತ ಸ್ಥಾನಮಾನ ಗಳಿಸುತ್ತಿದ್ದರು. ಆದರೆ ಇಂದು ಪ್ರಜಾಪಾಲನೆಯ ಸರ್ಕಾರಗಳು ಆಸ್ತಿತ್ವದಲ್ಲಿರುವ ಕಾರಣ ನಿಮ್ಮಲ್ಲಿನ ಪ್ರತಿಭೆ ಪ್ರಸ್ತುತ ಸಮಾಜಕ್ಕೆ ಉಪಯೋಗ್ಯವಾಗುವ ರೀತಿ ಬದಲಾಗಬೇಕು ಎಂದು ಸಲಹೆ ನೀಡಿದರು.
ನಗರ ಅಥವಾ ಕಸಬಾ ಹೋಬಳಿಯಲ್ಲಿ ಸೂಕ್ತ ಸ್ಥಳ ಮಂಜೂರು ಮಾಡಿ, ಸಮುದಾಯ ಭವನ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ನಾಡಿನ ದೇಗುಲ, ಕಲೆ ಮತ್ತು ವಾಸ್ತುಶಿಲ್ಪಕ್ಕೆ ವಿಶ್ವಕರ್ಮ ಸಮಯದಾಯ ಜೀವತುಂಬಿದೆ. ಆದರೆ ಇಂತಹ ಸಮುದಾಯ ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿರುವುದು ದುರಂತ ಎಂದು ಸೂಲಿಬೆಲೆ ಹೋಬಳಿಯ ಉಪ ತಹಶೀಲ್ದಾರ್ ಚೈತ್ರಾ ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಮುದಾಯದ ಮುಖಂಡರಾದ ಆನಂದ ಚಾರ್ಯ, ರಾಷ್ಟೀಯ ಹಬ್ಬಗಳ ಸಮಿತಿಯ ತಾಲ್ಲೂಕು ಘಟಕದ ಪದಾಧಿಕಾರಿಗಳು, ತಾಲ್ಲೂಕಿನ ವಿಶ್ವಕರ್ಮ ಸಮುದಾಯದ ನಾಗರೀಕರು,ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.