ADVERTISEMENT

ಆನೇಕಲ್:  12 ಸಾವಿರ ಹೊಸ ಮತದಾರರ ಸೇರ್ಪಡೆ

ವಿವಿಧ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2022, 22:30 IST
Last Updated 24 ಡಿಸೆಂಬರ್ 2022, 22:30 IST
ಆನೇಕಲ್‌ನ ವಿವಿಧ ಮತಗಟ್ಟೆಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಗತಿ ಪರಿಶೀಲಿಸಿದರು
ಆನೇಕಲ್‌ನ ವಿವಿಧ ಮತಗಟ್ಟೆಗಳಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಗತಿ ಪರಿಶೀಲಿಸಿದರು   

ಆನೇಕಲ್:ತಾಲ್ಲೂಕಿನ ವಿವಿಧ ಮತಗಟ್ಟೆಗಳಿಗೆ ಶನಿವಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಗತಿ ಪರಿಶೀಲಿಸಿ ಸಾರ್ವಜನಿಕರ ಅಹವಾಲು ಆಲಿಸಿದರು.

ಬಳಿಕ ಮಾತನಾಡಿದ ಅವರು, ತಾಲ್ಲೂಕಿನಲ್ಲಿ 12 ಸಾವಿರ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಅರ್ಹ ಮತದಾರರು ಮತಪಟ್ಟಿಯಿಂದ ಹೊರಗುಳಿಯಬಾರದು. ಹಾಗಾಗಿ, ಮನೆ ಮನೆಗೆ ಭೇಟಿ ನೀಡಿ ಮತದಾರರ ಸೇರ್ಪಡೆ, ಮಾರ್ಪಾಡು, ತಿದ್ದುಪಡಿ, ಹೆಸರು ತೆಗೆದು ಹಾಕಲು ಅನುಸರಿಸುತ್ತಿರುವ ಕ್ರಮಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಆನೇಕಲ್‌, ಅತ್ತಿಬೆಲೆ, ಚಂದಾಪುರ, ಬೊಮ್ಮಸಂದ್ರ ಪುರಸಭೆ, ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿ ಮತಗಟ್ಟೆ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಶೀಲನೆ ನಡೆಸಲಾಗಿದೆ. ವಿವಿಧ ವಾರ್ಡ್‌ಗಳ ಮನೆಗಳಿಗೆ ಭೇಟಿ ಮಾಡಿ ಮನೆ ಮನೆ ಸಮೀಕ್ಷೆ ಕೈಗೊಂಡಿರುವ ಕ್ರಮಗಳ ಮಾಹಿತಿ ಪಡೆಯಲಾಗಿದೆ ಎಂದರು.

ADVERTISEMENT

ತಾಲ್ಲೂಕಿನಲ್ಲಿ 22 ಸಾವಿರ ಮತದಾರರನ್ನು ತೆಗೆದುಹಾಕಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ‘ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎರಡು, ಮೂರು ಮತಗಟ್ಟೆಗಳಲ್ಲಿ ಒಬ್ಬರೇ ವ್ಯಕ್ತಿಯ ಮತಗಳಿದ್ದುದ್ದನ್ನು ಪರಿಶೀಲಿಸಿ ಒಂದು ಕಡೆ ಮಾತ್ರ ಉಳಿಸಿ ಉಳಿದ ಮತಗಟ್ಟೆಗಳಲ್ಲಿ ತೆಗೆದು ಹಾಕಲಾಗಿದೆ. ಹೆಸರು ತೆಗೆದು ಹಾಕಿರುವ ವ್ಯಕ್ತಿಗಳು ಸಮರ್ಪಕ ದಾಖಲೆ ನೀಡಿದರೆ ಈಗಲೂ ಸೇರಿಸಲು ಅವಕಾಶವಿದೆ’ ಎಂದು ಸ್ಪಷ್ಟಪಡಿಸಿದರು.

ಒಬ್ಬರೇ ವ್ಯಕ್ತಿ ಪುನರಾರ್ವತನೆಯಾಗದಂತೆ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗಿದೆ. ಹಾಗಾಗಿ, ಅರ್ಹ ವ್ಯಕ್ತಿಗಳಲ್ಲಿದ್ದರೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಚುನಾವಣಾಧಿಕಾರಿಗೆ ಸೂಚಿಸಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ 18 ವರ್ಷ ಪೂರ್ಣಗೊಂಡವರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಆನ್‌ಲೈನ್‌ ಮೂಲಕವೂ ಹೆಸರು ಸೇರ್ಪಡೆ ಮಾಡಬಹುದಾಗಿದೆ ಎಂದರು.

ತಹಶೀಲ್ದಾರ್‌ ಶಿವಪ್ಪ ಎಚ್‌. ಲಮಾಣಿ ಮಾತನಾಡಿ, ಆನೇಕಲ್‌ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಮತಗಟ್ಟೆಗಳಲ್ಲೂ ಬೂತ್‌ ಮಟ್ಟದ ಅಧಿಕಾರಿಗಳು ಲಭ್ಯವಿದ್ದು ಮನೆ ಮನೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಯ ಪರಿಷ್ಕರಣೆ ಮಾಡುತ್ತಿದ್ದಾರೆ. ಅವರಿಗೆ ತರಬೇತಿ ನೀಡಿ ಮಾಹಿತಿ ಕಿಟ್‌ ನೀಡಲಾಗಿದೆ ಎಂದು ತಿಳಿಸಿದರು.

ಹೆಬ್ಬಗೋಡಿ ನಗರಸಭೆ ಪೌರಾಯುಕ್ತ ನರಸಿಂಹಮೂರ್ತಿ, ಆನೇಕಲ್‌ ಪುರಸಭಾ ಮುಖ್ಯಾಧಿಕಾರಿ ಮಂಜುನಾಥ್‌, ರಾಜಸ್ವ ನಿರೀಕ್ಷಕ ಮಹೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.