ದೊಡ್ಡಬಳ್ಳಾಪುರ: ತಾಲ್ಲೂಕಿಗೆ ಬೇಕಿರುವುದು ಎತ್ತಿನಹೊಳೆ ಹಾಗೂ ಕಾವೇರಿ ನೀರು ಹೊರತು, ಬೆಂಗಳೂರಿನಲ್ಲಿ ಶುದ್ಧೀಕರಿಸಿರುವ ವೃಷಾಭಾವತಿಯ ನೀರು ಅಲ್ಲ. ವೃಷಾಭಾವತಿ ನೀರಾವರಿ ಯೋಜನೆ ವಿರುದ್ಧ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳು 15 ದಿನಗಳಲ್ಲಿ ನಿರ್ಣಯ ಅಂಗೀಕರಿಸಿ ನೀಡುವಂತೆ ಶಾಸಕ ಧೀರಜ್ ಮುನಿರಾಜು ಮನವಿ ಮಾಡಿದರು.
ನಗರದ ಡಾ.ಬಾಬುಜಗಜೀವನ್ ರಾಮ್ ಭವನದಲ್ಲಿ ಶನಿವಾರ ನಡೆದ ಗ್ರಾಮ ಪಂಚಾಯಿತಿ, ನಗರ ಸಭೆ ಚುನಾಯಿತ ಜನಪ್ರತಿನಿಧಿಗಳ, ವಿವಿಧ ಸಂಘಟನೆ ಮುಖಂಡರ ಹಾಗೂ ಸಾರ್ವಜನಿಕರ ಸಮಾಲೋಚನ ಸಭೆಯಲ್ಲಿ ಮಾತನಾಡಿದರು.
ಸ್ಥಳೀಯ ರೈತರ ವಿರೋಧದ ನಡುವೆಯು ಈಗಾಗಲೇ ನೆಲಮಂಗಲ ತಾಲ್ಲೂಕಿನ ಕೆರೆಗಳಿಗೆ ವೃಷಾಭಾವತಿ ನೀರು ಹರಿಸುವ ಯೋಜನೆಯ ಕಾಮಗಾರಿಗೆ ಉಪಮುಖ್ಯಮಂತ್ರಿ ಗುದ್ದಲಿ ಪೂಜೆ ನರೆವೇರಿಸಿದ್ದಾರೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಕೆರೆ ಹಾಗೂ ಅರಳುಮಲ್ಲಿಗೆ ಕೆರೆಗಳಿಗೂ ಬೆಂಗಳೂರಿನಲ್ಲಿ ಹರಿಯುವ ವೃಷಾಭಾವತಿ ನೀರನ್ನು ಶುದ್ಧೀಕರಿಸಿ ಹರಿಸುವ ಕಾಮಗಾರಿಯ ಸಮಗ್ರ ಯೋಜನಾವರದಿ ಸಿದ್ಧವಾಗುತ್ತಿದೆ. ಇದಕ್ಕೆ ಸ್ಥಳೀಯರು ಜನಪ್ರತಿನಿಧಿಗಳು ಮತ್ತು ಜನರು ಪ್ರತಿರೋಧ ತೋರಬೇಕು ಎಂದು ಹೇಳಿದರು.
ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವೃಷಾಭಾವತಿ ನೀರನ್ನು ತಾಲ್ಲೂಕಿನ ಕೆರೆಗಳಿಗೆ ಹರಿಸುವ ಯೋಜನೆ ವಿರುದ್ಧ ನಿರ್ಣಯ ಅಂಗೀಕರಿಸಿ ನೀಡಿದರೆ ವಿಧಾನ ಸಭೆಯ ಮುಂಗಾರು ಅಧಿವೇಷನದಲ್ಲಿ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ನಮ್ಮ ತಾಲ್ಲೂಕಿಗೆ ಬೆಂಗಳೂರಿನ ಕೊಚ್ಚೆ ನೀರಾಗಿರುವ ವೃಷಾಭಾವತಿ ನೀರು ಹರಿಸುವ ಹಾಗೂ ಬಿಬಿಎಂಪಿ ಕಸ ತಂದು ಸುರಿಯುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಯಾವುದೇ ತರಹದ ಹೋರಾಟಕ್ಕೂ ತಾಲ್ಲೂಕಿನ ಜನ ಸಿದ್ಧ. ಇಲ್ಲದಿದ್ದರೆ ನಮ್ಮ ಮಕ್ಕಳ ಬದುಕು ಕರಾಳವಾಗಲಿದೆ.ತಿ.ರಂಗರಾಜು, ರೈತ, ಚಿಕ್ಕತುಮಕೂರು ಗ್ರಾಮ.
ಎತ್ತಿನಹೊಳೆ ಯೋಜನೆಯಲ್ಲಿ ತಾಲ್ಲೂಕಿನ ಸಾಸಲು ಹೋಬಳಿಯ ಏಳು ಕೆರೆಗಳಿಗೆ ಮಾತ್ರ ನೀರು ತುಂಬಿಸುವ ಯೋಜನೆ ಇದೆ. ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟಿರುವ ತಾಲ್ಲೂಕಿನ 28 ಕೆರೆಗಳಿಗೂ ಎತ್ತಿನಹೊಳೆ ನೀರು ತುಂಬಿಸಬೇಕು.
ಸರ್ವಪಕ್ಷ ನಿಯೋಗ ಭೇಟಿ:ನಗರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಕಾವೇರಿ ನೀರು ಹರಿಸುವ ಪೈಪ್‌ಲೈನ್ ಹಾಕಲಾಗಿದೆ. ಇದೇ ಪೈಪ್‌ಲೈನ್ ಮೂಲಕ ನಗರಸಭೆ ವ್ಯಾಪ್ತಿಗೆ ಹಾಗೂ ಕೈಗಾರಿಕಾ ಪ್ರದೇಶದಲ್ಲಿನ ದೊಡ್ಡತುಮಕೂರು, ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೂ ಕಾವೇರಿ ನೀರು ಸರಬರಾಜು ಮಾಡಬೇಕು. ಈ ಬಗ್ಗೆ ತಾಲ್ಲೂಕಿನ ಸರ್ವ ಪಕ್ಷ ನಿಯೋಗವನ್ನು ರಾಜ್ಯ ನೀರಾವರಿ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿಗೆ ಕರೆದೊಯ್ದು ಮನವಿ ಮಾಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.