ADVERTISEMENT

ಸಮೇತನಹಳ್ಳಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ: ಕಸ ಮುಕ್ತ ಪಂಚಾಯಿತಿಗೆ ಪಣ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 4:31 IST
Last Updated 3 ಫೆಬ್ರುವರಿ 2026, 4:31 IST
ತಿರುಮಶೆಟ್ಟಿಹಳ್ಳಿ ಸರ್ಕಲ್ ಬಳಿ ಸ್ವಚ್ಚತಾ ಆಂದೋಲನದ ಜಾಥಾ ನಡೆಸಿ ಜಾಗೃತಿ ಮೂಡಿಸುವ ಸಂದರ್ಭ
ತಿರುಮಶೆಟ್ಟಿಹಳ್ಳಿ ಸರ್ಕಲ್ ಬಳಿ ಸ್ವಚ್ಚತಾ ಆಂದೋಲನದ ಜಾಥಾ ನಡೆಸಿ ಜಾಗೃತಿ ಮೂಡಿಸುವ ಸಂದರ್ಭ   

ತಿರುಮಶೆಟ್ಟಿಹಳ್ಳಿ(ಹೊಸಕೋಟೆ): ತಾಲ್ಲೂಕಿನ ಸಮೇತನಹಳ್ಳಿ ಪಂಚಾಯಿತಿಯನ್ನು ಕಸ ಮುಕ್ತ ಪಂಚಾಯಿತಿಯಾಗಿಸುವ ಕಾರ್ಯಕ್ರಮಕ್ಕೆ ತಿರುಮಶೆಟ್ಟಿಹಳ್ಳಿಯಲ್ಲಿ ಚಾಲನೆ ನೀಡಲಾಯಿತು.

ಕಸ ಸುರಿಯುವ ಜಾಗಗಳಲ್ಲಿ ಸೆನ್ಸಾರ್ ಆಧಾರಿತ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಶಾಸಕ ಶರತ್‌ ಬಚ್ಚೇಗೌಡ ಚಾಲನೆ ನೀಡಿದರು. ತಿರುಮ ಶೆಟ್ಟಿಹಳ್ಳಿ ಪೋಲಿಸ್ ಠಾಣೆಯಿಂದ ‌ಸಮೇತನಹಳ್ಳಿ ಗ್ರಾಮದವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಜಾಗೃತಿ ಮೂಡಿಸಲಾಯಿತು.

ಸಮೇತನಹಳ್ಳಿಯಲ್ಲಿ ಅಧಿಕಾರಿಗಳೊಂದಿಗೆ ಶಾಸಕ ಮನೆ ಮನೆಗೆ ತೆರಳಿ ಒಣಕಸ ಮತ್ತು ಹಸಿಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಡಬ್ಬಿಗಳನ್ನು ವಿತರಣೆ ಮಾಡಿ ಜಾಗೃತಿ ಮೂಡಿಸಿದರು.

ADVERTISEMENT

ಈ ವೇಳೆ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ಸಮೇತನಹಳ್ಳಿ ಗ್ರಾಮ ಪಂಚಾಯಿತಿಯನ್ನು ಕಸ ಮುಕ್ತ ಪಂಚಾಯಿತಿಯಾಗಿಸಲು ದಿಟ್ಟ ಹೆಜ್ಜೆ ಇಡಲಾಗಿದೆ. ₹30 ಲಕ್ಷ ಮೌಲ್ಯದ ನಾಲ್ಕು ಕಸ ಸಂಗ್ರಹ ವಾಹನಗಳಿಗೆ ಚಾಲನೆ ನೀಡಲಾಗಿದೆ. ಹಸಿ ಕಸವನ್ನು ಹಸಿರು ಡಬ್ಬಿ ಹಾಗೂ ಒಣ ಕಸವನ್ನು ಕೆಂಪು ಡಬ್ಬಿಯಲ್ಲಿ ಮನೆಯಿಂದಲೇ ಪ್ರತ್ಯೇಕಗೊಳಿಸಿ ಕಸ ಸಂಗ್ರಹಿಸುವ ವಾಹನಗಳಿಗೆ ನೀಡಬೇಕು. ಮನೆ, ಮಳಿಗೆ ಕಸವನ್ನು ರಸ್ತೆ ಬದಿ ಸುರಿಯಬಾರದು ಎಂದು ತಿಳಿಸಿದರು. 

ನಂತರ ತಿರುಮಶೆಟ್ಟಿಹಳ್ಳಿ ಮತ್ತು ಸಮೇತನಹಳ್ಳಿ ಗ್ರಾಮದಲ್ಲಿ ಕಸದ ವಾಹನಗಳ ಜೊತೆ ಜಾಥಾ ನಡೆಸಲಾಯಿತು. ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕಿಸಿ ಪ್ರತಿದಿನ ನಿಮ್ಮ ಮನೆ ಬಾಗಿಲಿಗೆ ಬರುವ ಕಸ ಸಂಗ್ರಹ ವಾಹನಕ್ಕೆ ನೀಡಿ ಕಸಮುಕ್ತ ಪಂಚಯಿತಿಯನ್ನಾಗಿಸಲು ಸಹಕಾರಿಸಬೇಕೆಂದು ಮನವಿ ಮಾಡಲಾಯಿತು. ಪಂಚಾಯಿತಿ ವ್ಯಾಪ್ತಿಯ ಪ್ರಮುಖ ಸ್ಥಳಗಳು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಎಲ್ಲೆಂದರಲ್ಲಿ ಕಸ ಸುರಿದರೆ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.

ತಾಲೂಕು ಪಂಚಾಯಿತಿ ಇಓ ಮುನಿಯಪ್ಪ, ತಿರುಮಲೆ ಶೆಟ್ಟಿಹಳ್ಳಿ ಪೋಲಿಸ್ ಠಾಣೆ ಇನ್‌ಸ್ಪೆಕ್ಟರ್‌ ಸುಂದರ್, ಹೊಸಕೋಟೆ ಯೋಜನಾ ಪ್ರಾಧಿಕಾರದ ಸದಸ್ಯ ಕೊರಳೂರು ಸುರೇಶ್ ಗೌಡ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಮುತ್ಕೂರು ಮುನಿರಾಜು, ಮಾಜಿ ಅಧ್ಯಕ್ಷ ಮುತ್ಸಂದ್ರ ಬಾಬುರೆಡ್ಡಿ, ಮುಖಂಡರಾದ ಬೋಧನ ಹೊಸಹಳ್ಳಿ ಪ್ರಕಾಶ್, ಸಮೇತನಹಳ್ಳಿ ಸೊಣ್ಣಪ್ಪ, ಕೆ.ಮಲ್ಲಸಂದ್ರ ಶೇಷಪ್ಪ, ಸಮೇತನಹಳ್ಳಿ ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ್, ಸಿಬ್ಬಂದಿ ನಾಗರಾಜ್, ರಾಜೇಶ್, ಮಹೇಶ್ ಆರಾಧ್ಯ ಹಾಜರಿದ್ದರು.

ಸ್ವಚ್ಚತಾ ಆಂದೋಲನದ ಜಾಥಾ
ಜಾಗೃತಿ ಫಲಕ ಇಡಿದು ಸ್ವಚ್ಚತಾ ಆಂದೋಲನದ ಜಾಥಾ ನಡೆಸಿದ ಸಂದರ್ಭ
ತಿರುಮಶೆಟ್ಟಿಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಕಸದ ಬುಟ್ಟಿ ಪಂಚಾಯಿತಿ ವತಿಯಿಂದ ವಿತರಿಸಿದ ಸಂದರ್ಭ
ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 15 ಬ್ಲಾಕ್‌ಸ್ಪಾಟ್ ಗುರುತಿಸಿದ್ದು ನಿಯಮ ಮೀರಿ ಎಲ್ಲೆಂದರಲ್ಲಿ ಕಸ ಸುರಿದರೆ ಫ್‌ಐಆರ್ ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು
ಪ್ರಸಾದ್ ಪಿಡಿಒ ಸಮೇತನಹಳ್ಳಿ
ಗ್ರಾಮಗಳ ನೈರ್ಮಲ್ಯ ಕಾಪಾಡುವುದು ಕೇವಲ ಸ್ಥಳೀಯ ಆಡಳಿತದ ಜವಾಬ್ದಾರಿಯಲ್ಲ. ಬದಲಾಗಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಸುತ್ತಲಿನ ಪರಿಸರ ಎಷ್ಟು ಆರೋಗ್ಯವಾಗಿರುತ್ತೋ ಅಷ್ಟೇ ನಾವು ಕೂಡ ಆರೋಗ್ಯದಿಂದ ಇರುತ್ತೇವೆ
ಶರತ್ ಬಚ್ಚೇಗೌಡ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.