
ದೊಡ್ಡಬಳ್ಳಾಪುರ: ನೇಕಾರರಿಗೆ ರಾಜ್ಯ ಸರ್ಕಾರ ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ನೆರವಾಗುತ್ತಿದೆ. ಆದರೆ ನೇಯ್ಗೆ ಉದ್ಯಮ ತೀವ್ರ ಸಂಕಷ್ಟದಲ್ಲಿದ್ದು, ನೇಯ್ಗೆ ಉದ್ಯಮಕ್ಕೆ ಕಾಯಕಲ್ಪ ನೀಡುವಲ್ಲಿ ಸರ್ಕಾರದ ಪಾತ್ರ ಮುಖ್ಯ. ಈ ದಿಸೆಯಲ್ಲಿ ನೇಕಾರ ಸಂಘಟನೆಗಳು ಕಾರ್ಯೋನ್ಮುಖವಾಗಬೇಕು ಎಂದು ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ನೇಕಾರರ ಹೋರಾಟ ಸಮಿತಿಯ ರಜತ ಮಹೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರ ನೇಕಾರರಿಗೆ 10 ಎಚ್.ಪಿ ವರೆಗೂ ಉಚಿತ ವಿದ್ಯುತ್ ನೀಡಲಾಗುತ್ತಿದೆ. ವಿವಿಧೆಡೆಗಳಿಂದ ಬಂದು ನೇಕಾರಿಕೆಯನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳು ದೊಡ್ಡಬಳ್ಳಾಪುರದಲ್ಲಿ ಇವೆ. ನೇಯ್ಗೆ ಉದ್ಯಮದ ಮೇಲೆ ಇತರೆ ಉದ್ಯಮಗಳೂ ಅವಲಂಬಿಸಿದ್ದು, ಬಹಳಷ್ಟು ಉದ್ಯಮಗಳು ಸಂಕಷ್ಟದಲ್ಲಿವೆ. 25 ವರ್ಷಗಳ ಸುದೀರ್ಘ ಹೋರಾಟ ಮಾಡುವ ಮೂಲಕ ನೇಕಾರರಿಗೆ ಸರ್ಕಾರದಿಂದ ಸೌಲಭ್ಯ ದೊರೆಯುವಂತೆ ಮಾಡಿರುವುದು ಅಭಿನಂದನೀಯ ಎಂದರು.
ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು ಮಾತನಾಡಿ, 25 ವರ್ಷಗಳಿಂದ ಸಕ್ರಿಯವಾಗಿ ಹೋರಾಟ ಸಮಿತಿ ಕೆಲಸ ಮಾಡಿಕೊಂಡು ಬರುತ್ತಿದೆ. ಹೋರಾಟದ ಫಲವಾಗಿ ಮೊದಲು ರಿಯಾಯಿತಿ ವಿದ್ಯುತ್, ಈಗ 10 ಎಚ್.ಪಿ ವರೆಗೂ ಉಚಿತ ವಿದ್ಯುತ್, ನೇಕಾರರ ಬಿಲ್‌ಗಳಿಗೆ ಹೆಚ್ಚುವರಿ ಠೇವಣಿ ಹಿಂತೆಗೆತ, ನೇಕಾರರ ಸಾಲ ಮನ್ನಾ, ಆರೋಗ್ಯ ವಿಮೆ, ಮಗ್ಗಗಳಿಗೆ ಸಹಾಯಧನ, ನೇಕಾರರಿಗೆ ಗುರುತಿನ ಚೀಟಿ ವಿತರಣೆ ಮೊದಲಾಗಿ ಹೋರಾಟ ಸಮಿತಿ ಕೆಲಸ ಮಾಡಿದೆ ಎಂದರು.
ಬೆಳಗಾವಿಯಲ್ಲಿ ಅತಿವೃಷ್ಟಿಯಲ್ಲಿ ನೇಕಾರರಿಗೆ ನೆರವು ಸೇರಿದಂತೆ ರಕ್ತದಾನ ಶಿಬಿರ, ಕನ್ನಡಕ ವಿತರಣೆ ಕಾರ್ಯಗಳನ್ನು ನಡೆಸುತ್ತಿದೆ. ಪ್ರಸ್ತುತ ಬಿಕ್ಕಟ್ಟಿನಲ್ಲಿರುವ ರೇಪಿಯರ್ ಮಗ್ಗಗಳಲ್ಲಿ ವಿದ್ಯುತ್ ಮಗ್ಗಗಳ ಬಟ್ಟೆ ತಯಾರಿಕೆ ವಿರುದ್ಧ ಸಹ ದನಿ ಎತ್ತಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಸಿಪಿಎಂ ಮುಖಂಡ ಆರ್.ಚಂದ್ರತೇಜಸ್ವಿ ಮಾತನಾಡಿ, 40 ವರ್ಷಗಳಿಂದ ನೇಕಾರರ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸಿದ್ದೇವೆ. ಆದರೆ ಈಗಿರುವ ಬಿಕ್ಕಟ್ಟು ಗಂಭೀರವಾಗಿದೆ. ನೇಯ್ಗೆ ಉದ್ಯಮವಷ್ಟೇ ಅಲ್ಲದೇ ಸಣ್ಣ ಕೈಗಾರಿಕೆಗಳು ಬಿಕ್ಕಟ್ಟಿನಲ್ಲಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ಕ್ರಮ ವಹಿಸಬೇಕು ಎಂದರು.
ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿರುವ ನೇಕಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ನಗರಸಭಾ ಸದಸ್ಯ ಎಚ್.ಎಸ್.ಶಿವಶಂಕರ್, ಚಂದ್ರಮೋಹನ್, ರೂಪಿಣಿಮಂಜುನಾಥ್, ಶೀವಣ್ಣ, ಮಂಜುಳ, ಅಖಿಲೇಶ್, ದ್ರುವಕುಮಾರ್, ನೇಕಾರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ್, ಎಸ್.ವೇಣುಗೋಪಾಲ್, ಪದ್ಮಾವತಿ ಅಮರನಾಥ್, ಡಿ.ವಿ.ಜಗದೀಶ್, ಕೊಟ್ಟಗೆರೆ ಸುರೇಶ್, ರವಿಕುಮಾರ್, ಸಂಜೀವ್‌ಕುಮಾರ್, ಅನಿಲ್ ಕುಮಾರ್, ರಂಗನಾಥ್, ಕೆ.ಜಿ.ಗೋಪಾಲ್, ಕೃಷ್ಣಂ ರಾಜ್, ಎನ್.ಲೋಕೇಶ್, ರಮೇಶ್ ರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.