ADVERTISEMENT

ಒಬ್ಬ ಮಹಿಳೆಯಿಂದ ಏನು ಮಾಡಲು ಸಾಧ್ಯ? ಎದುರಾಳಿ ಅಭ್ಯರ್ಥಿ ವಿರುದ್ಧ ಎಂಟಿಬಿ ಟೀಕೆ

ಬಿ.ಎನ್.ಬಚ್ಚೇಗೌಡ, ಹೆಬ್ಬಾಳ ಶಾಸಕ ಬೈರತಿ ಸುರೇಶ್ ಕೊಡುಗೆ ಶೂನ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:41 IST
Last Updated 1 ಡಿಸೆಂಬರ್ 2019, 13:41 IST
   

ಸೂಲಿಬೆಲೆ: ‘ಗ್ರಾಮದ ಜನರು ಉಪ ಚುನಾವಣೆಯಲ್ಲಿ ಮತ ಹಾಕಿ ಗೆಲ್ಲಿಸಿ ಶಾಸಕನಾಗಿ ಆಯ್ಕೆ ಮಾಡಿದರೆ, ಇಲ್ಲಿ 25 ಎಕರೆ ಜಮೀನಿನಲ್ಲಿ ಸೈಟುಗಳನ್ನು ಮಾಡಿ ಬಡವರಿಗೆ ವಿತರಿಸುತ್ತೇನೆ. ಇದು ಸುಳ್ಳು ಭರವಸೆ ಅಲ್ಲ. ನಾನು ಛಲವಾದಿ. ಮಾಡಬೇಕು ಎಂದ ಕೆಲಸವನ್ನು ಸಾಧಿಸಿ ತೋರಿಸುತ್ತೇನೆ’ ಎಂದು ಹೊಸಕೋಟೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿದರು.

ಸೂಲಿಬೆಲೆ ಗ್ರಾಮದ ವಾಲ್ಮೀಕಿ ವೃತ್ತದಲ್ಲಿ ಗುರುವಾರ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು.

‘ಗ್ರಾಮಕ್ಕೆ 24 ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ. ₹ 4 ಕೋಟಿ ಅಭಿವೃದ್ಧಿ ಕೆಲಸವನ್ನು ಸೂಲಿಬೆಲೆ ಗ್ರಾಮಕ್ಕೆ ಮಾಡಲಾಗಿದೆ. ಶಾಸಕನಾಗಿ ಕ್ಷೇತ್ರಕ್ಕೆ ಇಷ್ಟು ಅಭಿವೃದ್ಧಿ ಆಗಿದೆ ಅಂದರೆ ಮುಂದೆ ಗೆದ್ದು ಮಂತ್ರಿಯಾದರೆ ಕ್ಷೇತ್ರಕ್ಕೆ ಹೆಚ್ಚಿನ ಅಭಿವೃದ್ಧಿ ಆಗುತ್ತದೆ ಎಂಬುದನ್ನು ಮತದಾರರು ಆಲೋಚಿಸಬೇಕು’ ಎಂದರು.

ADVERTISEMENT

‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ಕಾರದಿಂದ ಬೇಕಾದಷ್ಟು ಹಣವನ್ನು ಕ್ಷೇತ್ರದ ಅಭಿವೃದ್ಧಿಗೆ ಮಂಜೂರು ಮಾಡುತ್ತಾರೆ. ಅವರಿಗೆ ಕೋಟಿ ನಮಸ್ಕಾರ’ ಎಂದರು.

ಮಹಿಳೆಯಿಂದ ಏನಾಗುತ್ತೆ: ‘ಹೊಸಕೋಟೆ ಕ್ಷೇತ್ರದಲ್ಲಿ ಪ್ರತಿ ನಿತ್ಯ 12 ಗಂಟೆ ಕೆಲಸ ಮಾಡಿದರೂ ನನ್ನಿಂದಲೇ ಸುಧಾರಿಸಲು ಕಷ್ಟವಾಗುತ್ತಿದೆ. ಇನ್ನು ಮಹಿಳೆಯಿಂದ ಏನು ಅಭಿವೃದ್ಧಿ ಮಾಡಲು ಸಾಧ್ಯ’ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರನ್ನು ಟೀಕಿಸಿದರು.

‘ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ಮೂರು ತಿಂಗಳಿಗೊಮ್ಮೆಯೂ ತಿರುಗಿ ನೋಡುವುದಿಲ್ಲ. ಕ್ಷೇತ್ರದ ಅಭಿವೃದ್ಧಿಯೂ ಆಗಿಲ್ಲ ಎಂದು ಅಲ್ಲಿನ ಜನ ದೂರುತ್ತಿದ್ದಾರೆ. ಇಂತಹವರ ಆಸೆ ಆಮಿಷಗಳಿಗೆ ಬಲಿಯಾಗಬೇಡಿ’ ಎಂದು ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ವಿರುದ್ಧ ಕಿಡಿ ಕಾರಿದರು.

‘ಹೊಸಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಐದು ಬಾರಿ ಶಾಸಕ ಮತ್ತು ಮಂತ್ರಿಯಾಗಿಬಿ.ಎನ್.ಬಚ್ಚೇಗೌಡ ಹಾಗೂ ಬೆಂಡಿಗಾನಹಳ್ಳಿ ಕುಟುಂಬದವರು ಹೊಸಕೋಟೆ ಕ್ಷೇತ್ರಕ್ಕೆ ಏನು ಅಭಿವೃದ್ಧಿ ಮಾಡಿದ್ದಾರೆ’ ಎಂದು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.