ADVERTISEMENT

ಯಾವುದೇ ಪಕ್ಷ ಸೇರುವ ಆತುರವಿಲ್ಲ: ಶರತ್ ಬಚ್ಚೇಗೌಡ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 12:51 IST
Last Updated 14 ಡಿಸೆಂಬರ್ 2019, 12:51 IST
ಹೊಸಕೋಟೆ ಕ್ಷೇತ್ರದ ನೂತನ ಶಾಸಕ ಶರತ್ ಬಚ್ಚೇಗೌಡ ಅವರಿಗೆ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು
ಹೊಸಕೋಟೆ ಕ್ಷೇತ್ರದ ನೂತನ ಶಾಸಕ ಶರತ್ ಬಚ್ಚೇಗೌಡ ಅವರಿಗೆ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು   

ಸೂಲಿಬೆಲೆ:‘ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಿ 4-5 ದಿನಗಳಾಗಿವೆ. ನಮಗೆ ಯಾವುದೇ ಪಕ್ಷಗಳಿಗೆ ಸೇರುವ ಆತುರ ಇಲ್ಲ.ನನ್ನನ್ನು ನಂಬಿ ಶಾಸಕನಾಗಿ ಆಯ್ಕೆ ಮಾಡಿದ ತಾಲ್ಲೂಕಿನ ಮತದಾರರ ಹಾಗೂ ಮುಖಂಡರ ಸಲಹೆಗಳ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರದ ಹೆಜ್ಜೆ ಇಡಲಾಗುವುದು’ಎಂದು ಹೊಸಕೋಟೆ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಹೇಳಿದರು.

ಸೂಲಿಬೆಲೆ ಹೋಬಳಿಯ ಬೆಂಡಿಗಾನಹಳ್ಳಿ ಗ್ರಾಮದಲ್ಲಿ ಮಾಧ್ಯಮದವರ ಜತೆ ಮಾತನಾಡಿ, ‘ಕಾಂಗ್ರೆಸ್ ಪಕ್ಷಕ್ಕೆ ಸೇರುವ ಬಗ್ಗೆ ವದಂತಿ ಹರಡಿಸಲಾಗಿದೆ. ಆದರೆ, ಕಾಂಗ್ರೆಸ್ ಪಕ್ಷದ ಮುಖಂಡರು ನನ್ನನ್ನು ಸಂಪರ್ಕಿಸಿಲ್ಲ. ಪಕ್ಷ ಸೇರ್ಪಡೆ ವಿಚಾರವಾಗಿ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ’ ಎಂದರು.

‘ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು ನಮ್ಮ ಕುಟುಂಬದ ಸದಸ್ಯರು ಇದ್ದ ಹಾಗೆ. ಉಪ ಚುನಾವಣೆಯ ಫಲಿತಾಂಶದ ಹಿನ್ನೆಲೆ, ಅವರ ಆಶೀರ್ವಾದ ಪಡೆದುಕೊಳ್ಳುವ ಸಲುವಾಗಿ ಭೇಟಿ ಮಾಡಿದ್ದೇನೆ. ಶಾಸಕನ ಸ್ಥಾನ ಹಾಗೂ ಪಾಲ್ಗೊಳ್ಳುವಿಕೆಯ ಬಗ್ಗೆ ಸಲಹೆ ಪಡೆದುಕೊಂಡಿದ್ದೇನೆ. ರಾಜಕೀಯ ಹಾಗೂ ಪಕ್ಷ ಸೇರುವ ವಿಚಾರವನ್ನು ಚರ್ಚೆ ಮಾಡಿಲ್ಲ’ ಎಂದು ಹೇಳಿದರು.

ADVERTISEMENT

‘ನನಗೆ ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರವಾಗಿ ಯಾರೂ ಆಹ್ವಾನ ನೀಡಿಲ್ಲ. ಯಾವುದೇ ಚರ್ಚೆ ನಡೆದಿಲ್ಲ. ಪ್ರಮಾಣವಚನ ಪ್ರಕ್ರಿಯೆಯ ನಂತರ ಕಾರ್ಯಕರ್ತರ ಜತೆ ಚರ್ಚಿಸಿ ಮುಂದಿನ ನಡೆ ನಿರ್ಧರಿಸಲಿದ್ದೇನೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ, ಪೂಜೇನ ಅಗ್ರಹಾರ ಚಂದ್ರೇಗೌಡ ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.