ADVERTISEMENT

‘ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡಿ‘ 

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 13:20 IST
Last Updated 16 ಜೂನ್ 2019, 13:20 IST
ನೂತನ ಸದಸ್ಯರನ್ನು ಜನ ಜಾಗೃತಿ ಸೇವಾ ಟ್ರಸ್ಟ್‌ ವತಿಯಿಂದ ಸನ್ಮಾನಿಸಲಾಯಿತು
ನೂತನ ಸದಸ್ಯರನ್ನು ಜನ ಜಾಗೃತಿ ಸೇವಾ ಟ್ರಸ್ಟ್‌ ವತಿಯಿಂದ ಸನ್ಮಾನಿಸಲಾಯಿತು   

ದೇವನಹಳ್ಳಿ: ‘ಪುರಸಭೆಗೆ ನೂತನವಾಗಿ ಚುನಾಯಿತರಾಗಿರುವ ಮಾದಿಗ ಸಮುದಾಯದ ವಾರ್ಡಿನ ಸದಸ್ಯರು ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಕೆಲಸ ಮಾಡಬೇಕು’ ಮುಖಂಡ ಎಂ.ಮೂರ್ತಿ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶ್ರೀ ಆದಿ ಜಾಂಬವ ಜನ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ, ಪುರಸಭೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಗೊಂಡ ಮಾದಿಗ ಸಮುದಾಯದ ನೂತನ ಸದಸ್ಯರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

‘ಮತದಾರರು ನಿಮ್ಮ ಮೇಲೆ ಹೆಚ್ಚಿನ ನಿರೀಕ್ಷೆ ಇಂದ ಮತ ನೀಡಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಶಿಕ್ಷಣ, ಆರೋಗ್ಯ, ಪರಿಸರ ಮತ್ತು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ADVERTISEMENT

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎಂ.ಎಂ.ಶ್ರೀನಿವಾಸ್ ಮಾತನಾಡಿ ‘ಮಾದಿಗ ಸಮುದಾಯದಲ್ಲಿ ಒಗ್ಗಟ್ಟು ಮೂಡಿಸುವ ಪ್ರಯತ್ನ ಮಾಡಬೇಕು. ಶೈಕ್ಷಣಿಕ, ರಾಜಕೀಯ, ಸಾಮಾಜಿಕವಾಗಿ ಅಭಿವೃದ್ಧಿಯಾಗಬೇಕು. ಟ್ರಸ್ಟ್‌ ಆರಂಭದಲ್ಲಿ ಅನೇಕ ಕ್ರಿಯಾ ಯೋಜನೆಗಳನ್ನು ರೂಪಿಸಲಾಗಿದೆ. ಬಡವರಿಗೆ ಆಸರೆ, ಅನಾಥರಿಗೆ ನೆರವು, ಬಡ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ, ವಿಕಲ ಚೇತನರಿಗೆ ಮತ್ತು ವಯೋವೃದ್ಧರಿಗೆ ಸಹಾಯಹಸ್ತ, ಪರಿಸರ ಮತ್ತು ಜಲಮೂಲ ರಕ್ಷಣೆಯಂತಹ ಸಾಮಾಜಿಕ ಕಳಕಳಿಯ ಸೇವೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದು ಹೇಳಿದರು.

‘10ನೇ ತರಗತಿಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಉನ್ನತ ವ್ಯಾಸಂಗ ಮಾಡುವ ಬಡ ಮಕ್ಕಳಿಗೆ ಪ್ರೋತ್ಸಾಹ ನೀಡಿ ಸಹಕರಿಸಲಾಗುತ್ತದೆ. ಮಹಿಳೆಯರಿಗೆ ಕಾನೂನು ಅರಿವು ಮೂಡಿಸಲಾಗುವುದು’ ಎಂದು ಹೇಳಿದರು.

ಟ್ರಸ್ಟ್‌ನ ಅಧ್ಯಕ್ಷ ಶಿವಾನಂದ ಮಾತನಾಡಿ ‘ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಯ್ಕೆಗೊಳ್ಳುವ ಮಾದಿಗ ಸಮುದಾಯವನ್ನು ಗುರುತಿಸಿ, ಸನ್ಮಾನಿಸಿ, ಕ್ರಿಯಾಶೀಲರಾಗಿ ಕೆಲಸ ಮಾಡುವಂತೆ ಪ್ರೇರೇಪಿಸಲಾಗುವುದು. ಸಮುದಾಯದ ಘನತೆ ಕಾಯ್ದುಕೊಳ್ಳಲು, ಆಯ್ಕೆಗೊಂಡಿರುವ ಸದಸ್ಯರು ಒತ್ತು ನೀಡಬೇಕು’ ಎಂದು ಹೇಳಿದರು.

ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಗುರಪ್ಪ ಮಾತನಾಡಿದರು.ಪುರಸಭಾ ನೂತನ ಸದಸ್ಯರಾದ ಮಂಜುಳಾ, ಎಂ.ಮೂರ್ತಿ, ಲಕ್ಷ್ಮಿ ಅಂಬರೀಷ್, ಬಾಲರಾಜ್‌ರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಖಜಾಂಚಿ ಎಲ್.ಮುನಿರಾಜು, ಟ್ರಸ್ಟ್ ನಿರ್ದೇಶಕರಾದ ಕಗ್ಗಲಹಳ್ಳಿ ಮೂರ್ತಿ, ವೆಂಕಟೇಶ್, ಮುನಿಯಮ್ಮ, ಯಲ್ಲಪ್ಪ, ನರಸಿಂಹಯ್ಯ, ಚಂದ್ರು, ನಾಗಾರ್ಜುನ, ಹೇಮಂತ್, ಹರೀಶ್, ಬಿ.ವಿ.ಮುನಿರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.