ADVERTISEMENT

ಬಿಜೆಪಿ ವಕ್ತಾರ ಸುಲಿಗೆಕೋರ: ಪಾಲಿಕೆ ಅಧಿಕಾರಿ ಆರೋಪ

ಹಣಕ್ಕಾಗಿ ಬ್ಲ್ಯಾಕ್‌ಮೇಲ್‌: ಲೋಕಾಯುಕ್ತಕ್ಕೆ ಪತ್ರ ಬರೆದ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 19:55 IST
Last Updated 16 ಅಕ್ಟೋಬರ್ 2019, 19:55 IST
ರಮೇಶ್‌
ರಮೇಶ್‌   

ಬೆಂಗಳೂರು: ಅಧಿಕಾರಿಗಳು ಹಾಗೂ ರಾಜಕೀಯ ನಾಯಕರ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಬಿಜೆಪಿ ನಗರ ಘಟಕದ ವಕ್ತಾರರ ವಿರುದ್ಧವೇ ಪಾಲಿಕೆ ಅಧಿಕಾರಿಯೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಪಾಲಿಕೆಯ ಟ್ರಾಫಿಕ್‌ ಎಂಜಿನಿಯರಿಂಗ್‌ ಕೋಶದ (ಟಿಇಸಿ) ಅಧಿಕಾರಿಗಳ ವಿರುದ್ಧ ಹಾಗೂ ಈ ಹಿಂದೆ ರಸ್ತೆ ಮೂಲಸೌಕರ್ಯ ವಿಭಾಗದ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಆಗಿದ್ದ ಬಿ.ಎಸ್‌.ಪ್ರಹ್ಲಾದ್‌ ವಿರುದ್ಧ ಎನ್.ಆರ್‌.ರಮೇಶ್‌ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಸಂಬಂಧ ಲೋಕಾಯುಕ್ತ ಸಂಸ್ಥೆಯಲ್ಲೂ ಮೊಕದ್ದಮೆ ದಾಖಲಾಗಿದ್ದು, ಇದಕ್ಕೆ 2019ರ ಜು.18ರಂದು ಪ್ರತಿಕ್ರಿಯೆ ನೀಡಿರುವ ಪ್ರಹ್ಲಾದ್‌, 'ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸುವ ಹಾಗೂ ಅಧಿಕಾರಿಗಳ ವಿರುದ್ಧ ಎಸಿಬಿ, ಲೋಕಾಯುಕ್ತ ಹಾಗೂ ಸಿಐಡಿಗೆ ದೂರು ನೀಡುವುದನ್ನೇ ಚಾಳಿ ಮಾಡಿಕೊಂಡಿರುವ ರಮೇಶ್‌ ಆಣತಿಯಂತೆ ಈ ದೂರು ದಾಖಲಾಗಿದೆ ಎಂದು ಬಲವಾಗಿ ನಂಬಿದ್ದೇನೆ. ಎಸಿಬಿ, ಲೋಕಾಯುಕ್ತ ಹಾಗೂ ಸಿಐಡಿಗಳಲ್ಲಿ ಇಂತಹ ದೂರುಗಳನ್ನು ಏಕೆ ದಾಖಲಿಸಲಾಗುತ್ತದೆ ಎಂಬುದು ಸಾಮಾನ್ಯ ಜನರಿಗೂ ಸುಲಭದಲ್ಲೇ ಅರ್ಥವಾಗುತ್ತದೆ’ ಎಂದು ಹೇಳಿದ್ದಾರೆ.

ರಮೇಶ್‌ ಅವರು ಆಗಾಗ ಇಂತಹ ದೂರುಗಳನ್ನು ದಾಖಲಿಸುವುದರ ಹಿಂದಿನ ಉದ್ದೇಶಗಳನ್ನು ವಿವರಿಸಿರುವ ಅವರು, ‘ಸಿವಿಲ್‌ ಗುತ್ತಿಗೆದಾರರಾದ ಮಂಜುನಾಥ್‌ ಮತ್ತು ಸತೀಶ್‌ ಮತ್ತು ಇನ್ನೊಬ್ಬ ಗುತ್ತಿಗೆದಾರನ ಹೆಸರಿನಲ್ಲಿ ಎನ್‌.ಆರ್‌.ರಮೇಶ್‌ ಅವರು ಬಿಬಿಎಂಪಿ ಕಾಮಗಾರಿಗಳನ್ನು ನಡೆಸುತ್ತಾರೆ. ಈ ಮೇಲೆ ಉಲ್ಲೇಖಿಸಿರುವ ಗುತ್ತಿಗೆದಾರರಿಗೇ ಕಾಮಗಾರಿಗಳ ಗುತ್ತಿಗೆ ನೀಡುವಂತೆ ಬೇಡಿಕೆ ಸಲ್ಲಿಸಲು ರಮೇಶ್‌ ಅವರು ಅನೇಕ ಕಾರ್ಯಪಾಲಕ ಎಂಜಿನಿಯರ್‌ಗಳನ್ನು ಸಂಪರ್ಕಿಸಿದ್ದಾರೆ. ಕಾರ್ಯಪಾಲಕ ಎಂಜಿನಿಯರ್‌ಗಳನ್ನು ಅದಕ್ಕೆ ಒಪ್ಪದಿದ್ದಾಗ ಬ್ಲ್ಯಾಕ್‌ಮೇಲ್‌ ಮಾಡಲು ಆಯುಕ್ತರ ಅಧೀನದ ತಾಂತ್ರಿಕ ಮತ್ತು ಜಾಗೃತ ಕೋಶ (ಟಿವಿಸಿಸಿ), ಎಸಿಬಿ, ಲೋಕಾಯುಕ್ತ ಹಾಗೂ ಸಿಐಡಿಯಲ್ಲಿ ಈ ರೀತಿಯ ದೂರುಗಳನ್ನು ದಾಖಲಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ADVERTISEMENT

‘ರಮೇಶ್‌ ಅವರು ಅಕ್ರಮ ಕಟ್ಟಡಗಳ ಮಾಲೀಕರಿಂದಲೂ ಹಣ ವಸೂಲಿ ಮಾಡುತ್ತಾರೆ’ ಎಂಬ ಗಂಭೀರ ಆರೋಪವನ್ನು ಬಿ.ಎಸ್‌. ಪ್ರಹ್ಲಾದ್‌ ಮಾಡಿದ್ದಾರೆ.

‘ವಾರ್ಡ್‌ ನಂ 167ರಲ್ಲಿ (ಯಡಿಯೂರು ವಾರ್ಡ್‌) ಅಕ್ರಮ ಕಟ್ಟಡಗಳು ಹಾಗೂ ಕಟ್ಟಡ ನಿಯಮ ಉಲ್ಲಂಘನೆ ಪ್ರಕರಣಗಳು ಭಾರಿ ಸಂಖ್ಯೆಯಲ್ಲಿವೆ. ತನಿಖೆ ಮಾಡಿದ್ದೇ ಆದರೆ ಕಟ್ಟಡದ ಗುತ್ತಿಗೆದಾರರಿಂದ ಹಾಗೂ ದೊಡ್ಡ ಬಿಲ್ಡರ್‌ಗಳಿಂದ ಭಾರಿ ಹಣ ವಸೂಲಿ ಮಾಡುವುದರ ಹಿಂದೆ ರಮೇಶ್‌ ಅವರ ಕೈವಾಡ ಇರುವುದು ಬೆಳಕಿಗೆ ಬರಬಹುದು. ವಾರ್ಡ್‌ ನಂ. 167ರ ಎಲ್ಲ ಕಾಮಗಾರಿಗಳನ್ನು ಮಂಜುನಾಥ್‌ ಎಂಬ ಗುತ್ತಿಗೆದಾರನಿಗೆ ಮಾತ್ರ ನೀಡಿರುವ ಹಿಂದಿರುವ ಸತ್ಯ ಸಂಗತಿಯ ಬಗ್ಗೆಯೂ ತನಿಖೆ ನಡೆಸಬೇಕು’ ಎಂದು ಪ್ರಸ್ತುತ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಆಗಿರುವ ಪ್ರಹ್ಲಾದ್‌ ಒತ್ತಾಯಿಸಿದ್ದಾರೆ.

‘ಟಿಇಸಿ ಕಾಮಗಾರಿಗಳ ಕುರಿತು ಬಿಬಿಎಂಪಿಯ ಟಿವಿಸಿಸಿ ನಡೆಸುತ್ತಿರುವ ತನಿಖೆ ಪ್ರಗತಿಯಲ್ಲಿದೆ. ಅನಾಮಧೇಯ ದೂರುಗಳು ನಿಷ್ಪ್ರಯೋಜಕ. ಇಂತಹ ದೂರುಗಳು ಅಧಿಕಾರಿಗಳ ನೈತಿಕ ಬಲವನ್ನು ಕುಗ್ಗಿಸುತ್ತವೆ. ಅವರ ಕಠಿಣ ಶ್ರಮಕ್ಕೆ ಬೆಲೆ ಇಲ್ಲದಂತೆ ಮಾಡುತ್ತವೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವಾರದ ಹಿಂದೆ ಟಿಇಸಿ ಕಾಮಗಾರಿಗಳ ತನಿಖೆಯನ್ನು ಎಸಿಬಿಗೆ ಒಪ್ಪಿಸಿದ ಬಳಿಕ ಈ ಬೆಳವಣಿಗೆಗಳು ನಡೆದಿವೆ. ಗಣೇಶ್‌ ಸಿಂಗ್‌ ಅವರ ಹೆಸರಿನಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.

‘ನಾನು ಬ್ಲ್ಯಾಕ್‌ಮೇಲ್‌ ಮಾಡುತ್ತೇನೆ ಎಂದರೆ ಯಾರೂ ನಂಬುವುದಿಲ್ಲ’

ಬ್ಲ್ಯಾಕ್‌ಮೇಲ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್‌, ‘ಇದುವರೆಗಿನ ನನ್ನ ಬದ್ಧತೆಯನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ. ಅದೇ ರೀತಿ ನಾನು ಬದುಕಿದ್ದೇನೆ. ಒಮ್ಮೆ ಶಾಸಕ ಸತೀಶ್ ರೆಡ್ಡಿ ಅವರ ಸಂಬಂಧಿಯಾಗಿರುವ ಸ್ವಾಗತ್‌ ಚಿತ್ರಮಂದಿರದ ಮಾಲೀಕ ಕೃಷ್ಣಾ ರೆಡ್ಡಿ ಹಾಗೂ ಎಸ್‌.ಕೆ.ನಟರಾಜ್‌ (ಮಾಜಿ ಮೇಯರ್‌) ಅವರು ವಾರ್ಡ್‌ನ ಕಟ್ಟಡ ವಿನ್ಯಾಸ ನಕ್ಷೆಯಲ್ಲಿ ಉಲ್ಲಂಘನೆ ಸಂಬಂಧ ನನ್ನಿಂದ ಅನುಕೂಲ ಮಾಡಿಸಿಕೊಳ್ಳಲು ₹ 20 ಲಕ್ಷದೊಂದಿಗೆ ಮನೆಗೆ ಬಂದಿದ್ದರು. ಆತ ನನ್ನ ಮನೆಯಲ್ಲಿ ಬಟ್ಟೆ ಬಿಚ್ಚಿ ಕುಳಿತುಕೊಳ್ಳುವಂತೆ ಮಾಡಿದ್ದೆ. ನಂತರ ಎಸ್‌.ಕೆ.ನಟರಾಜ್‌ ಅವರು ಅಂಗಲಾಚಿ ಆತನನ್ನು ಕರೆದೊಯ್ದರು. ನಾನು ಬಿಬಿಎಂಪಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತೇನೆ ಎಂದರೆ ಯಾರೂ ನಂಬುವುದಿಲ್ಲ’ ಎಂದರು.

‘ಎಲ್ಲಕ್ಕಿಂತ ಮುಖ್ಯವಾಗಿ ಆ ಅಧಿಕಾರಿ ಒಬ್ಬ ಭ್ರಷ್ಟ ಹಾಗೂ ಆತ ಲೋಕಾಯುಕ್ತಕ್ಕೆ ಸಲ್ಲಿಸಿರುವ ಪ್ರತಿಕ್ರಿಯೆಯನ್ನೇ ಲೋಕಾಯುಕ್ತರು ಪ್ರಶ್ನೆ ಮಾಡಿದ್ದಾರೆ. ಸಮರ್ಪಕವಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಉತ್ತಮ ಫಲಿತಾಂಶಗಳು ಬರಲಿ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಅವರಲ್ಲಿ ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.