ADVERTISEMENT

ಅಶ್ವಿನಿ ಮಳೆಯ ಸಿಂಚನ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 7:02 IST
Last Updated 26 ಏಪ್ರಿಲ್ 2013, 7:02 IST

ಬೆಳಗಾವಿ: ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ಗುರುವಾರ ಅಶ್ವಿನಿ ಮಳೆಯ ಸಿಂಚನವಾಯಿತು.ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ದಟ್ಟವಾಗಿ ಮೋಡ ಕವಿದು, ವಾತಾವರಣವು ತೀವ್ರ ಬಿಸಿಯಿಂದ ಕೂಡಿತ್ತು. ಸುಮಾರು 4.30ರ ಹೊತ್ತಿಗೆ ನಗರದಲ್ಲಿ ತುಂತುರು ಮಳೆ ಆರಂಭವಾಯಿತು. ಕೆಲ ಕಾಲ ಸುರಿದ ಮಳೆಯಲ್ಲಿಯೇ ವಾಹನ ಸವಾರರು ನೆನೆದುಕೊಂಡು ಸಾಗುತ್ತಿರುವುದು ಕಂಡು ಬಂತು.

ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ, ಬೈಲಹೊಂಗಲ ತಾಲ್ಲೂಕಿನ ತಿಗಡಿ, ಸಂಪಗಾಂವದಲ್ಲೂ ಮಳೆ ಸುರಿದಿದೆ.ಚಿಕ್ಕೋಡಿ ವರದಿ: ಚಿಕ್ಕೋಡಿ ಪಟ್ಟಣ ಹಾಗೂ ಪರಿಸರದಲ್ಲಿ ಗುರುವಾರ ಸಂಜೆ ಸಾಧಾರಣವಾಗಿ ಸುರಿದ ಅಶ್ವಿನಿ ಮಳೆ ತಂಪಿನ ಸಿಂಚನ ಮೂಡಿಸಿತು.

ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಎಂದಿನಿಂತೆ ಬೆಳಿಗ್ಗೆಯಿಂದ ಸುಡು ಬಿಸಿಲು ಇತ್ತು. ಸಂಜೆ 4 ಗಂಟೆಯಿಂದ ಅಲ್ಲಲ್ಲಿ ಮೋಡ ಕಟ್ಟಿದ ವಾತಾವರಣ ನಿರ್ಮಾಣಗೊಂಡು ಸಂಜೆ 6-20ರ ವೇಳೆಗೆ ಹನಿಯಾಗಿ ಧರೆಗೆ ಇಳಿಯಿತು. ಅನಿರೀಕ್ಷಿತವಾಗಿ ಆಗಮಿಸಿದ ಅಶ್ವಿನಿ ಮಳೆ ಕಳೆದೆರೆಡು ತಿಂಗಳುಗಳಿಂದ ಕಡುಬೇಸಿಗೆ ಬಿಸಿಲಿನ ತಾಪದಿಂದ ಬಸವಳಿದಿರುವ ಜನರಲ್ಲಿ ಅಶ್ವಿನಿ ಮಳೆ ಆಶಾಭಾವನೆ ಚಿಗುರಿಸಿದೆ. ಮೊದಲ ಮಳೆಯ ಆಗಮನದಿಂದ ಸಂತಸಗೊಂ ಡಿದ್ದಾರೆ.

ಗ್ರಾಮೀಣ ಪ್ರದೇಶದಲ್ಲೂ ಮಳೆ ರಾಯನ ಆಗಮನದ ಮುನ್ಸೂಚನೆ ದೊರಕುತ್ತಿದ್ದಂತೆಯೇ ಕೃಷಿಕರ ಮುಖ ದಲ್ಲಿ ಮಂದಹಾಸ ಮೂಡಿತ್ತು.
ಭೀಕರ ಬರಗಾಲದಿಂದ ಜನಜಾನುವಾರುಗಳ ಕುಡಿಯುವ ನೀರಿನ ಅಭಾವದಿಂದ ತತ್ತರಿಸಿರುವ ಜನರು ಹಳ್ಳಕೊಳ್ಳ ತುಂಬಿ ಹರಿಯುವಂತೆ ನಾಲ್ಕಾರು ಮಳೆಗಳು ಸುರಿಯಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಚನ್ನಮ್ಮನ ಕಿತ್ತೂರು ವರದಿ: ಕಿತ್ತೂರು ಸೇರಿದಂತೆ ಸುತ್ತಲಿನ ಕೆಲ ಗ್ರಾಮಗಳಲ್ಲಿ ಗುರುವಾರ ಸಂಜೆ ಉತ್ತಮ ಮಳೆಯಾಗಿದೆ.3.45ಕ್ಕೆ ಆರಂಭವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಗಾಳಿಯಿಂದ ಕೂಡಿದ್ದ ರಭಸದ ಮಳೆಯು, ಬೇಸಿಗೆಯಿಂದ ತತ್ತರಿಸಿಹೋಗಿದ್ದ ಸಾರ್ವಜನಿಕರಿಗೆ ತಂಪಿನ ಅನುಭವ ನೀಡಿತು.

ಚರಂಡಿ ಮತ್ತು ರಸ್ತೆ ತುಂಬ ನೀರು ಹರಿದಿದ್ದರಿಂದ ಅವು ಸ್ವಚ್ಛಗೊಂಡು ಲಕ, ಲಕ ಹೊಳೆದವು.ಕುಲವಳ್ಳಿ, ಹೊನ್ನಾಪುರ, ಮಲ್ಲಾಪುರ ಗ್ರಾಮಗಳಲ್ಲಿಯೂ ಉತ್ತಮ ಮಳೆಯಾದ ವರದಿಗಳು ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.