ADVERTISEMENT

‘ಕತ್ತಿ’ ಸಾಮ್ರಾಜ್ಯದಲ್ಲಿ ಪಾಟೀಲ ‘ವರಸೆ’!

ಮಾಜಿ ಸಚಿವರಿಬ್ಬರ ಹಣಾಹಣಿಗೆ ಸಜ್ಜಾದ ಹುಕ್ಕೇರಿ ಕ್ಷೇತ್ರ; ಪರಸ್ಪರ ಆರೋಪ– ಪ್ರತ್ಯಾರೋಪದ ಸುರಿಮಳೆ

ಎಂ.ಮಹೇಶ
Published 5 ಮೇ 2018, 9:28 IST
Last Updated 5 ಮೇ 2018, 9:28 IST
‘ಕತ್ತಿ’ ಸಾಮ್ರಾಜ್ಯದಲ್ಲಿ ಪಾಟೀಲ ‘ವರಸೆ’!
‘ಕತ್ತಿ’ ಸಾಮ್ರಾಜ್ಯದಲ್ಲಿ ಪಾಟೀಲ ‘ವರಸೆ’!   

ಹುಕ್ಕೇರಿ (ಬೆಳಗಾವಿ ಜಿಲ್ಲೆ): ರಾಜಕಾರಣದ ಅನುಭವಿಗಳು, ಮಾಜಿ ಸಚಿವರಾದ ಬಿಜೆಪಿ ಉಮೇಶ ಕತ್ತಿ ಹಾಗೂ
ಕಾಂಗ್ರೆಸ್‌ನ ಎ.ಬಿ. ಪಾಟೀಲ ನಡುವಿನ ನೇರ ಹಣಾಹಣಿಗೆ ಹುಕ್ಕೇರಿ ವಿಧಾನಸಭಾ ಕ್ಷೇತ್ರ ಸಾಕ್ಷಿಯಾಗಿದೆ. ಇಲ್ಲಿ ಅಭಿವೃದ್ಧಿ ವಿಷಯಗಳ ಚರ್ಚೆಗಿಂತ, ವೈಯಕ್ತಿಕ ನೆಲೆಯಲ್ಲಿನ ಆರೋಪ–ಪ್ರತ್ಯಾರೋಪಗಳೇ ಹೆಚ್ಚಾಗಿ ಕಂಡುಬರುತ್ತಿವೆ.

ತಂದೆ, ಸಹಕಾರಿ ಧುರೀಣ ವಿಶ್ವನಾಥ ಮಲ್ಲಪ್ಪ ಕತ್ತಿ ನಿಧನದಿಂದ ತೆರವಾದ ಸ್ಥಾನಕ್ಕೆ 1985ರಲ್ಲಿ ನಡೆದ
ಉಪಚುನಾವಣೆಯಲ್ಲಿ ಆಯ್ಕೆಯಾಗಿದ್ದ ಕತ್ತಿ, ಸತತ 9ನೇ ಚುನಾವಣೆ (2 ಉಪಚುನಾವಣೆ ಸೇರಿ) ಎದುರಿಸುತ್ತಿ
ದ್ದಾರೆ. 7 ಬಾರಿ ಗೆದ್ದಿದ್ದಾರೆ. ಒಮ್ಮೆ ಸೋತಿದ್ದಾರೆ. ಈಗ, 8ನೇ ಗೆಲುವಿಗಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. 2004ರಲ್ಲಿ ಬಿಜೆಪಿಯ ಶಶಿಕಾಂತ ನಾಯಿಕ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ಉಳಿದಂತೆ, ಜನತಾ ಪಕ್ಷದಿಂದ 1, ಜನತಾದಳದಿಂದ 2, ಸಂಯುಕ್ತ ಜನತಾದಳ, ಜೆಡಿಎಸ್‌ನಿಂದ ತಲಾ 1, ಬಿಜೆಪಿಯಿಂದ 2 ಬಾರಿ ಗೆಲುವಿನ ರುಚಿ ಸವಿದಿದ್ದಾರೆ. ಇವರ ಗೆಲುವಿನ ಓಟಕ್ಕೆ ಬ್ರೇಕ್‌  ಹಾಕುವುದಕ್ಕಾಗಿ ತಂತ್ರ ರೂಪಿಸಿರುವ ಕಾಂಗ್ರೆಸ್‌ ಎ.ಬಿ. ಪಾಟೀಲ ಅವರನ್ನು ಕಣಕ್ಕಿಳಿಸಿದೆ.

ಸರ್ಕಾರದ ಕಾರ್ಯಕ್ರಮಗಳು: ಸಂಕೇಶ್ವರ ಕ್ಷೇತ್ರವಿದ್ದಾಗ ಮೂರು ಬಾರಿ ಗೆದ್ದಿರುವ ಪಾಟೀಲರು, 2008ರಲ್ಲಿ ಕತ್ತಿ
ವಿರುದ್ಧ ಸೋತಿದ್ದರು. ಈ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವ ಅವರು, ರಾಜ್ಯ ಸರ್ಕಾರ ಜಾರಿಗೊಳಿಸಿರುವ ಜನಪರ ಕಾರ್ಯಕ್ರಮಗಳು ನೆರವಾಗಲಿವೆ, ಕ್ಷೇತ್ರದಲ್ಲಿನ ಆಡಳಿತ ವಿರೋಧಿ ಅಲೆ ಇದ್ದು ಅದು ನೆರವಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

ADVERTISEMENT

2008ರಲ್ಲಿಯೇ ನಡೆದ ಉಪಚುನಾವಣೆ ಹಾಗೂ 2013ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಚುನಾವಣಾ ರಾಜ
ಕಾರಣದಿಂದ ದೂರ ಉಳಿದಿದ್ದರು. 10 ವರ್ಷದ ನಂತರ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ, ಜನರೊಂದಿಗೆ ಹೆಚ್ಚಿನ ಒಡನಾಟ ಹೊಂದಿರಲಿಲ್ಲ ಎನ್ನುವ ಅಭಿಪ್ರಾಯ ಇದ್ದು, ಅವರಿಗೆ ಕೊಂಚ ಪರಿಣಾಮ ಬೀರುವ ಸಾಧ್ಯತೆ ಇದೆ.ಸಕ್ಕರೆ ಕಾರ್ಖಾನೆಗಳು, ಸಹಕಾರಿ ಸಂಘ–ಸಂಸ್ಥೆಗಳು ಹಾಗೂ ವಿದ್ಯುತ್‌ ಸಹಕಾರಿ ಸಂಘದ ಮೇಲೆ ಸಂಪೂರ್ಣ ‘ಹಿಡಿತ’ ಹೊಂದಿರುವ ಉಮೇಶ ಕತ್ತಿ–ರಮೇಶ ಕತ್ತಿ ಸಹೋದರರು ಪಕ್ಷಕ್ಕಿಂತ ಹೆಚ್ಚಿನದಾಗಿ ತಮ್ಮದೇ ಆದ ಸಾಮ್ರಾಜ್ಯ ನಿರ್ಮಿಸಿಕೊಂಡಿದ್ದಾರೆ. ಜನರಿಗೆ ಸುಲಭವಾಗಿ ಸಿಗುತ್ತಾರೆ ಎನ್ನುವ ಅಭಿಪ್ರಾಯಗಳಿವೆ. ಹಲವು ವರ್ಷಗಳಿಂದಲೂ ಇಲ್ಲಿ ರಾಜಕಾರಣ ಮಾಡುತ್ತಿರುವ ಅವರಿಗೆ ಮತದಾರರ ನಾಡಿಮಿಡಿತದ ಅರಿವಿದೆ. ಅಲ್ಲದೇ, ಅಭಿವೃದ್ಧಿ ಕೆಲಸಗಳು ಕೈಹಿಡಿಯಲಿವೆ ಎಂಬ ಭರವಸೆಯಲ್ಲಿದ್ದಾರೆ. ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ.

ಕಬ್ಬು ಬೆಳೆಗಾರರ ಪ್ರೀತಿ: ತಾವು ಸಾರಥಿಯಾಗಿರುವ ಹೀರಾ ಶುಗರ್ಸ್‌ ಹಾಗೂ ವಿಶ್ವನಾಥ ಶುಗರ್ಸ್‌ ಕಾರ್ಖಾನೆ
ಯಲ್ಲಿ ಟನ್‌ ಕಬ್ಬಿಗೆ ₹ 3,000 ಬೆಲೆ ಘೋಷಣೆ ಮಾಡಿ, ಕಬ್ಬು ಬೆಳೆಗಾರರ ಪ್ರೀತಿ ಗಳಿಸಲು ಯತ್ನಿಸಿದ್ದಾರೆ. ಅವರ ಸಹೋದರ ರಮೇಶ ಕತ್ತಿ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿದ್ದಾರೆ. ಇದು ಅವರಿಗೆ ಪ್ಲಸ್‌ ಆಗಲಿದೆ ಎನ್ನಲಾಗುತ್ತಿದೆ.

ಇಲ್ಲಿ ಜೆಡಿಎಸ್‌ ಪ್ರಭಾವ ಅಷ್ಟೇನಿಲ್ಲ. ಕಾಂಗ್ರೆಸ್‌ನ ಇಮಾಂಹುಸೇನ್‌ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ
ಇದ್ದಾರೆ. ಇದರಿಂದ ಕಾಂಗ್ರೆಸ್‌ಗೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಏನೂ ಇಲ್ಲ. ಈ ನಡುವೆ, ಅವರನ್ನು ಪಕ್ಷದಿಂದ ಉಚ್ಚಾಟನೆಯನ್ನೂ ಮಾಡಲಾಗಿದೆ.

ಸಹಕಾರಿ ಸೊಸೈಟಿಗಳಲ್ಲಿ ರೈತರು ಪಡೆದಿದ್ದ ₹ 50ಸಾವಿರದವರೆಗಿನ ಸಾಲಮನ್ನಾ ಮಾಡಿದ್ದು ನಾವು ಎಂದು ಕಾಂಗ್ರೆಸ್‌, ಜೆಡಿಎಸ್‌ ನಾಯಕರೂ ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ರೈತರ ಆಶೀರ್ವಾದ ಯಾರಿಗೆ ಎನ್ನು
ವುದು ಮೇ 15ರಂದು ಸ್ಪಷ್ಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.