ADVERTISEMENT

ಮಳೆ ನಿರೀಕ್ಷೆಯಲ್ಲೂ ಬಿತ್ತನೆಗೆ ಸಜ್ಜು

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 6:15 IST
Last Updated 9 ಜುಲೈ 2012, 6:15 IST

ಗೋಕಾಕ: ಮುಂಗಾರು ಮುನಿಸಿದ್ದು ತಾಲ್ಲೂಕಿನ ಕೃಷಿ ಚಟುವಟಿಕೆಗಳು ನಿಧಾನಗತಿಯಿಂದ ಸಾಗಿವೆ. ಶೇ. 85ರಷ್ಟು ಕೃಷಿ ಭೂಮಿಯನ್ನು ಬರಗಾಲದ ಛಾಯೆ ಆವರಿಸಿದ್ದು, ಪ್ರಸಕ್ತ ವರ್ಷದಲ್ಲಿ ಶೇ 30ರಷ್ಟು ಬಿತ್ತನೆ ಕಾರ್ಯ ನಡೆದಿದೆ. ಇನ್ನುಳಿದ ಶೇ. 70ರಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಯದೇ ಕೃಷಿಕ ಒಮ್ಮೆ ಭೂಮಿ ತಾಯಿಯತ್ತ ಮತ್ತು ಇನ್ನೊಮ್ಮೆ ಗಗನದ ಕಡೆ ನೋಡುತ್ತ ದಿನಗಳೆಯುವ ದುಃಸ್ಥಿತಿ ಎದುರಾಗಿದೆ.

ಮಳೆಯ ಪ್ರಮಾಣ ಕಡಿಮೆ: ತಾಲ್ಲೂಕಿ ನಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಅಗತ್ಯಕ್ಕಿಂತ ಕಡಿಮೆ ಮಳೆಯಾಗಿದೆ. ಮಳೆಯ ಪ್ರಮಾಣ ವಾರ್ಷಿಕ ಸರಾಸರಿ  567.6 ಮಿ.ಮೀ.  ಆದರೆ  ಕಳೆದ ವರ್ಷ 527ಮಿ.ಮೀ ಮಾತ್ರ ಮಳೆಯಾಗಿತ್ತು. ಈ ವರ್ಷವೂ ಕೂಡಾ ಮಳೆಗಾಲದ ಒಂದು ತಿಂಗಳ ಅವಧಿ ಗತಿಸಿದೆ. ನಿರ್ದಿಷ್ಟ ಪ್ರಮಾಣ ಮಳೆ ಸುರಿಯದೇ ಆತಂಕದ ಪರಿಸ್ಥಿತಿ ಎದುರಾಗಿದೆ.

ಜುಲೈ ಒಂದು ವಾರ ಕಳೆದರೂ ಕೇವಲ  6ಮಿ.ಮೀ ಮಳೆಯಾಗಿದ್ದು ರೈತರ ಚಿಂತೆ ಇಮ್ಮಡಿಗೊಂಡಿದೆ.
ಜನವರಿಯಲ್ಲಿ 2.5 ಮಿ.ಮೀ,  ಫೆಬ್ರುವರಿಯಿಂದ ಮೇ ತಿಂಗಳ ಕೊನೆಯ ತನಕ ಕೇವಲ 66 ಮಿ.ಮೀ., ಜೂನ್ 61  ಮಿ.ಮೀ.,   ಜುಲೈನಲ್ಲಿ 79  ಮಿ.ಮೀ.,  ಆಗಸ್ಟ್‌ನಲ್ಲಿ 60.1  ಮಿ.ಮೀ.,  ಸೆಪ್ಟೆಂಬರ್‌ನಲ್ಲಿ 96.3  ಮಿ.ಮೀ.,  ಅಕ್ಟೋಬರ್‌ನಲ್ಲಿ 112.7  ಮಿ.ಮೀ.,  ನವೆಂಬರ್‌ನಲ್ಲಿ ಮತ್ತು ಡಿಸೆಂಬರ್ ತಿಂಗಳಲ್ಲಿ ಸರಾಸರಿ 8.7  ಮಿ.ಮೀ., ಮಳೆಯಾದರೆ ಮಾತ್ರ ತಾಲ್ಲೂಕಿನ ಕೃಷಿ ಚಟುವಟಿಕೆಗಳು ಪೂರ್ಣಗೊಳ್ಳಲು ಸಾಧ್ಯ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಆರ್.ಜಿ. ನಾಗಣ್ಣವರ.


ಜುಲೈ ಮೊದಲ ವಾರದ ಕೊನೆಯ ತನಕ ವಾಡಿಕೆಯ ಮಳೆಯಾಗಿಲ್ಲ. ತಾಲ್ಲೂಕಿನ ಅಂಕಲಗಿ ಮತ್ತು ಸುತ್ತ- ಮುತ್ತಲಿನ ಪ್ರದೇಶದಲ್ಲಿ ಅಲ್ಪ-ಸ್ಪಲ್ಪ ಮಳೆಯಾಗಿರುವ ಹಿನ್ನೆಲೆಯಲ್ಲಿ ಸೋಯಾಬಿನ್, ಹತ್ತಿ, ಮುಂಗಾರು ಜೋಳವನ್ನು ಬಿತ್ತನೆ ಮಾಡಿರುವ ಕೃಷಿಕ, ಇನ್ನುಳಿದ ಪ್ರದೇಶಗಳ ಕೃಷಿಕರು ಬಿತ್ತನೆ ಕಾರ್ಯದಲ್ಲಿ ಭಾಗಿಗಳಾಗದೇ ಆಗಸದತ್ತ ಮುಖ ಮಾಡಿ ಕುಳಿತಿದ್ದಾರೆ ಎಂದು ನಾಗಣ್ಣವರ ಅತ್ಯಂತ ವಿಷಾದದಿಂದ ಮಾಹಿತಿ ನೀಡಿದ್ದಾರೆ.

ಜುಲೈ 15ರೊಳಗೆ ವಾಡಿಕೆಯ ಮಳೆ ಸುರಿದರೆ ಸೂರ್ಯಕಾಂತಿ, ಗೋವಿನ ಜೋಳ ಮತ್ತು ದ್ವಿದಳ ಧಾನ್ಯಗಳಾದ ಅಲಸಂದಿ ಮತ್ತು ತೊಗರೆ ಬಿತ್ತನೆ ಮಾಡಬಹುದು. ಆದರೆ ಜುಲೈ ಕೊನೆಯವರೆಗೂ ಮುಂಗಾರಿನ ಮುನಿಸು ಮುಂದುವರಿದರೆ ಕೃಷಿಕನಿಗೆ ಕನಿಷ್ಠ ಆದಾಯ ನೀಡಬಹುದಾದ ಬೆಳೆಗಳ ಬಿತ್ತನೆ ಅವಧಿ ಮುಕ್ತಾಯಗೊಳ್ಳುತ್ತದೆ. ಆಗಸ್ಟ್‌ನಲ್ಲಿ ಸೂರ್ಯಕಾಂತಿ ಹಾಗೂ ಗೋವಿನ ಜೋಳವನ್ನು ಬಿತ್ತನೆ ಮಾಡಬಹು ದಾಗಿದ್ದರೂ ಗೋವಿನ ಜೋಳ ಕಡಿಮೆ ಇಳುವರಿ ನೀಡುವ ಸಾಧ್ಯತೆ ಹೆಚ್ಚು.

ವಾಡಿಕೆಯ ಮಳೆಯಾಗದ ಹಿನ್ನೆಲೆ ಯಲ್ಲಿ ಅಂತರ್ಜಲ ಕುಸಿತಗೊಂಡು ಕಬ್ಬು ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆಗಳು ತೇವಾಂಶದ ಕೊರತೆಯನ್ನು ಎದುರಿಸುತ್ತಿವೆ.

ತಾಲ್ಲೂಕಿನಾದ್ಯಂತ ಮುಂಗಾರು ಹಂಗಾಮಿನಲ್ಲಿ  ಸರಾಸರಿ 88 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವ ಗುರಿ ಹೊಂದಲಾಗಿತ್ತು. ಆದರೆ ಪ್ರಸ್ತುತವಾಗಿ 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ  ಮಾತ್ರ ಬಿತ್ತನೆ  ಸಾಧ್ಯವಾಗಿದೆ. ಇದರಲ್ಲಿ 32 ಸಾವಿರ ಹೆಕ್ಟೇರ್ ಪ್ರದೇಶ ಕಬ್ಬು ಬೆಳೆಯನ್ನು ಹೊಂದಿದ್ದರೆ, ಇನ್ನುಳಿದ ಒಂದು ಸಾವಿರ  ಹೆಕ್ಟೇರ್‌ಪ್ರದೇಶದಲ್ಲಿ ಇನ್ನಿತರ ಬೆಳೆಗಳ ಬಿತ್ತನೆ ಕಾರ್ಯ ಮಂದ ಗತಿಯಿಂದ ಸಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 60 ಸಾವಿರ  ಹೆಕ್ಟೇರ್ ಪ್ರದೇಶ ಬಿತ್ತನೆ ಕಾರ್ಯ ಪೂರ್ಣಗೊಂಡಿತ್ತು. ಅಂದರೆ, ಈ ಬಾರಿ ಕಳೆದ ವರ್ಷದ ಅರ್ಧದಷ್ಟು ಮಾತ್ರ ಬಿತ್ತನೆಯಾಗಿದೆ.

ಬಿತ್ತನೆಗೆ ಸರ್ಕಾರ ತಾಲ್ಲೂಕಿನ ಸುಮಾರು 12 ಕೇಂದ್ರಗಳಲ್ಲಿ ಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡಿದೆ. ಜೂನ್ ಮಧ್ಯಬಾಗದಲ್ಲಿ ಸೋಯಾಬಿನ್ ಬೀಜವನ್ನು ಖರೀದಿಸಿದ್ದನ್ನು ಹೊರತುಪಡಿಸಿ ಉಳಿದ ಬೀಜಗಳ ಖರೀದಿ  ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ.

ಜುಲೈ ಮೊದಲ ವಾರ ಗತಿಸಿದೆ. ಮಳೆರಾಯ ಮುನಿಸಿನಿಂದ ಬೇಗನೆ ಹೊರಬಂದು ಕೃಷಿಕರು ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ನೆರವಾಗಲಿ ಎಂಬುದೇ ಕೃಷಿ ಇಲಾಖೆಯ ಹಾರೈಕೆಯಾಗಿದೆ ಎನ್ನುತ್ತಾರೆ ಇಲ್ಲಿಯ ಸಹಾಯಕ ಕೃಷಿ ನಿರ್ದೇಶಕರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.