ADVERTISEMENT

ಯೋಜನೆ ಜಾರಿಗೆ ಬದ್ಧತೆ ಅಗತ್ಯ: ಉದಾಸಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 10:50 IST
Last Updated 7 ಏಪ್ರಿಲ್ 2012, 10:50 IST

ಚನ್ನಮ್ಮನ ಕಿತ್ತೂರು: ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ನೂತನ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಲು ಸಾಧ್ಯ~ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಎಂ. ಉದಾಸಿ ಅಭಿಪ್ರಾಯಪಟ್ಟರು.

ಕಿತ್ತೂರು ಪಟ್ಟಣಕ್ಕೆ ಹೊಸದಾಗಿ ಮಂಜೂರಾದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಉಪ ವಿಭಾಗೀಯ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

`ನಗರ ಹಾಗೂ ಗ್ರಾಮೀಣ ಬದುಕಿನ ಅಂತರ ತಗ್ಗಬೇಕು. ನಗರ ವಾಸಿಗಳ ಸಮಾನ ಜೀವನ ಮಟ್ಟ ಗ್ರಾಮಾಂತರ ಪ್ರದೇಶದ ನಾಗರಿಕರಿಗೂ ದೊರೆಯಬೇಕು ಎಂಬ ಆಶಯವೇ ಬಿಜೆಪಿ ನೇತೃತ್ವ ಸರಕಾರದ ಮಹತ್ತರ ಸಾಧನೆಗೆ ಕಾರಣವಾಗಿದೆ~ ಎಂದರು.

`ಬಡ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮೀ, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ರೈತರಿಗೆ ಪುಕ್ಕಟೆ ವಿದ್ಯುತ್, ವೃದ್ಧರಿಗೆ ಪಿಂಚಣಿ ಮೊತ್ತ ಹೆಚ್ಚಳದಂತಹ ಜನಪರ ಕಾರ್ಯಕ್ರಮಗಳಿಂದಾಗಿ ರಾಷ್ಟ್ರದಲ್ಲಿಯೇ ಅಭಿವೃದ್ಧಿಯಲ್ಲಿ ರಾಜ್ಯ ಎರಡನೇ ಸ್ಥಾನ ಪಡೆದುಕೊಂಡಿದೆ. ಇದು ಕೂಡ ಕೇಂದ್ರದ ಯುಪಿಎ ನೇತೃತ್ವ ಸರಕಾರದ ಮೌಲ್ಯಮಾಪನದಿಂದ ದೃಢಪಟ್ಟಿದೆ. ಸರ್ವಋತು ಸಂಚಾರ ರಸ್ತೆ, ನೀರಾವರಿ ಯೋಜನೆಗಳಿಗೂ ಹೆಚ್ಚು ಗಮನ ನೀಡಲಾಗುತ್ತಿದೆ~ ಎಂದು ಉದಾಸಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸುರೇಶ ಮಾರಿಹಾಳ ಮಾತನಾಡಿ, ಕೆಇಬಿ ಉಪವಿಭಾಗ ಕಚೇರಿ ಮಂಜೂರು ಮಾಡಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದರು. ಅದ್ದೂರಿ ಕಿತ್ತೂರು ಉತ್ಸವ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವಿಧೇಯಕ ಸ್ವರೂಪ ನೀಡುವಲ್ಲಿ ಸಚಿವ ಉದಾಸಿ ಅವರ ಪ್ರಯತ್ನವೂ ಕಾರಣವಾಗಿದೆ ಎಂದು ಸ್ಮರಿಸಿದ ಮಾರಿಹಾಳ ಬೀಡಿ-ಬೆಳವಣಿಕೆ ರಸ್ತೆ ಮತ್ತು ಎಂ. ಕೆ. ಹುಬ್ಬಳ್ಳಿ-ಬೈಲಹೊಂಗಲ ರಸ್ತೆ ಸುಧಾರಣೆಗೆ ಅನುದಾನ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ತಾ. ಪಂ. ಸದಸ್ಯ ದಿನೇಶ ವಳಸಂಗ ಮಾತನಾಡಿ. `ಕಿತ್ತೂರನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಸರ್ಕಾರ  ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧ್ಯಕ್ಷ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾ. ಪಂ. ಅಧ್ಯಕ್ಷೆ ಸುವರ್ಣ ಹಣಜಿ, ಜಿ. ಪಂ. ಸದಸ್ಯರಾದ ಬಿ. ಸಿ. ಪಾಟೀಲ, ಯಲ್ಲಪ್ಪ ವಕ್ಕುಂದ, ತಾ. ಪಂ. ಸದಸ್ಯ ಸುರೇಶ ದೇವರಮನಿ, ಜಿ. ಪಂ. ಮಾಜಿ ಉಪಾಧ್ಯಕ್ಷ ಚನಬಸಪ್ಪ ಮೊಕಾಶಿ, ಬೆಳಗಾವಿ ಲೋಕೋಪಯೋಗಿ ಇಲಾಖೆ ವೃತ್ತ ಅಧೀಕ್ಷಕ ಎಂಜಿನಿಯರ್ ವಿನಾಯಕ ಸೂಗೂರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಸದಸ್ಯರು ಪಾಲ್ಗೊಂಡಿದ್ದರು.

ಬೆಳಗಾವಿ ವಿಭಾಗದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎನ್. ಪಿ. ನಾಯಕ ಸ್ವಾಗತಿಸಿದರು. ಕಿತ್ತೂರು ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ಆರ್. ಎಸ್. ಬಳೋಲ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.