ಬೆಳಗಾವಿ: `ರೈಲ್ವೆ ಬಜೆಟ್‌ನಿಂದ ಬಹಳಷ್ಟು ನಿರೀಕ್ಷಿಸಿದ್ದ ಬೆಳಗಾವಿ ಜಿಲ್ಲೆಗೆ ನಿರಾಸೆಯಾಗಿದೆ. ಹೊಸ ಮಾರ್ಗ ಹಾಗೂ ಹೊಸ ರೈಲುಗಳ ಓಡಾಟದ ಬೇಡಿಕೆಗಳಿಗೆ ಸ್ಪಂದನೆ ಸಿಕ್ಕಿಲ್ಲ. ಬಹು ನಿರೀಕ್ಷಿತ ಬೆಳಗಾವಿ-ಧಾರವಾಡ (ಕಿತ್ತೂರು ಮಾರ್ಗ) ಯೋಜನೆಗೆ ಅನುಮೋದನೆ ನೀಡದೇ ಯೋಜನಾ ಆಯೋಗಕ್ಕೆ ಒಪ್ಪಿಸಿರುವುದು ನಿರಾಸೆ ಮೂಡಿಸಿದೆ~ ಎಂದು ಸಂಸದರಾದ ಸುರೇಶ ಅಂಗಡಿ ಹಾಗೂ ರಮೇಶ ಕತ್ತಿ ತಿಳಿಸಿದ್ದಾರೆ.
`ಈಗಾಗಲೇ ಬೆಲೆ ಏರಿಕೆಯಿಂದ ತೀವ್ರ ತೊಂದರೆ ಎದುರಿಸುತ್ತಿರುವ ಜನ ಸಾಮಾನ್ಯರಿಗೆ ಮತ್ತಷ್ಟು ಹೊರೆಯಾಗುವಂತೆ ರೈಲು ಪ್ರಯಾಣ ದರ ಏರಿಸಿರುವುದೇ ಸಚಿವರ ಸಾಧನೆಯಾಗಿದೆ~ ಎಂದು ಅವರು ವ್ಯಂಗ್ಯವಾಡಿದ್ದಾರೆ.
`ರೈಲ್ವೆ ಇಲಾಖೆಯು ಹಣಕಾಸಿನ ತೊಂದರೆ ಎದುರಿಸುತ್ತಿದೆ ಎಂದಿರುವುದು ಸರ್ಕಾರದ ದಿವಾಳಿತನವನ್ನು ತೋರಿಸುತ್ತದೆ. ಕೇಂದ್ರ ಸರ್ಕಾರದಿಂದ ಯಾವುದೇ ಹೊಸ ಯೋಜನೆ ನಿರೀಕ್ಷಿಸಲು ಸಾಧ್ಯವಿಲ್ಲದಂತಾಗಿದೆ~ ಎಂದು ಟೀಕಿಸಿದ್ದಾರೆ.
ಬೆಳಗಾವಿ-ಮುಂಬೈ, ಬೆಳಗಾವಿ-ಬೆಂಗಳೂರು ಇಂಟರಸಿಟಿ ಸೇರಿದಂತೆ ಹೊಸ ರೈಲುಗಳಿಗಾಗಿ ರೈಲ್ವೆ ಟ್ರ್ಯಾಕ್ ನಿರ್ಮಾಣಕ್ಕೆ ಮಾಡಿದ್ದ ಮನವಿಗೆ ಸ್ಪಂದಿಸಿಲ್ಲ ಎಂದು ದೂರಿದ್ದಾರೆ.
`ಕುಡಚಿ-ಬಾಗಲಕೋಟೆ ಹೊಸ ರೈಲ್ವೆ ಲೈನ್ ನಿರ್ಮಿಸಲು ಭೂಸ್ವಾಧೀನಕ್ಕೆ ಬೇಕಾದ ಅನುದಾನ ನೀಡಿಲ್ಲ. ಹೀಗಾಗಿ ಭೂಸ್ವಾಧೀನ ಸಾಧ್ಯವಾಗಿಲ್ಲ. ಕರಾಡ- ಬೆಳಗಾವಿ ಯೋಜನೆ ಸರ್ವೆಗೆ ಈ ಹಿಂದೆ ಆದೇಶ ನೀಡಲಾಗಿತ್ತು. ಆದರೆ ಈ ಬಾರಿ ಅದರ ಪ್ರಸ್ತಾಪವೇ ಇಲ್ಲ~ ಎಂದು ಟೀಕಿಸಿದ್ದಾರೆ.
ಮೀರಜ್-ಬೆಳಗಾವಿ, ಮೀರಜ್-ಲೊಂಡಾ ಮಾರ್ಗದ ರೈಲುಗಳ ಬೋಗಿ ಹೆಚ್ಚಳಕ್ಕೂ ಸ್ಪಂದಿಸಿಲ್ಲ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.