ADVERTISEMENT

ಸೌತೆ ಬೆಲೆ ಕುಸಿತ;‌ ರೈತರಿಗೆ ಸಂಕಷ್ಟ

ತೋಟಗಾರಿಕೆ ಬೆಳೆಗಳಿಗೆ ಮಾರು ಹೋದ ಬೆಳೆಗಾರರಿಗೆ ಕೈಕೊಟ್ಟ ಅದೃಷ್ಟ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 5:55 IST
Last Updated 5 ಏಪ್ರಿಲ್ 2018, 5:55 IST

ಚಿಕ್ಕೋಡಿ: ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿಯೊಂದಿಗೆ ಅಧಿಕ ಆದಾಯ ಪಡೆಯುವ ಉದ್ದೇಶದಿಂದ ಸೌತೆಕಾಯಿ, ಟೊಮೆಟೊ ಬೆಳೆದ ಕೃಷಿಕರು ಈಗ ಬೆಲೆ ಕುಸಿತದಿಂದ ಕಣ್ಣೀರು ಸುರಿಸುವಂತಾಗಿದೆ. ಇದರಿಂದ ಹಾಕಿದ ಬಂಡವಾಳವೂ ಕೈ ಸೇರದೇ ರೈತರು ಪರದಾಡುವಂತಾಗಿದೆ.

ಕಬ್ಬು, ತಂಬಾಕು, ಗೋವಿನಜೋಳ ಮೊದಲಾದ ವಾಣಿಜ್ಯ ಬೆಳೆಗಳನ್ನು ಬಿಟ್ಟು ತೋಟಗಾರಿಕೆ ಬೆಳೆಗಳಿಗೆ ಮಾರು ಹೋದ ರೈತರಿಗೆ ಮತ್ತೆ ಅದೃಷ್ಟ ಕೈ ಕೈಕೊಟ್ಟಿದೆ. ಬೇಸಿಗೆಯ ಆರಂಭದಲ್ಲಿಯೇ ದರ ಕುಸಿತದ ಹೊಡೆತದಿಂದ ರೈತರು ಚಿಂತಿತರಾಗಿದ್ದಾರೆ.

ತಾಲ್ಲೂಕಿನಲ್ಲಿ ಕಬ್ಬು, ತಂಬಾಕು ಮತ್ತು ಸೋಯಾ ಅವರೆ ಮೊದಲಾದ ವಾಣಿಜ್ಯ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಆದರೆ, ಈ ಕೃಷಿ ಉತ್ಪನ್ನಗಳಿಗೆ
ನಿರೀಕ್ಷಿತ ಬೆಲೆ ಸಿಗದ್ದರಿಂದ ತರಕಾರಿ, ಹೂವು, ಹಣ್ಣು, ಹಂಪಲು, ಮೆಣಸಿನಕಾಯಿ, ಟೊಮೆಟೊ, ಡೊಣ್ಣೆ ಮೆಣಸಿನಕಾಯಿ, ಈರುಳ್ಳಿ ಬೆಳೆಯಲು ಹೆಚ್ಚಿನ ಸಂಖ್ಯೆ ರೈತರು ಒಲವು ತೋರಿದ್ದರು. ಆದರೆ, ಈ ಬೆಳೆಗಳ ಬೆಲೆಯೂ ನೆಲ ಕಚ್ಚಿ ರೈತರಲ್ಲಿ ನಿರಾಶೆ ಮೂಡಿಸಿದೆ.

ADVERTISEMENT

‘ಕಳೆದ ಸಾಲಿನಲ್ಲಿ ಜಿಪ್ಸಿ ಸವತೆಕಾಯಿ ಕೆ.ಜಿ.ಗೆ ₹ 22ರಿಂದ ₹ 25ಕ್ಕೆ ಮಾರಾಟವಾಗಿತ್ತು. ಆದರೆ, ಈಗ ಕೇವಲ ₹ 4ರಿಂದ ₹ 5ಕ್ಕೆ ಮಾರಾಟವಾಗುತ್ತಿದ್ದು, ಇದರಿಂದ ರೈತರು ಬೇಸತ್ತು ಹೋಗಿದ್ದಾರೆ. ಕನಿಷ್ಠ ಪಕ್ಷ ಕಿಲೋಗೆ ₹ 30ಕ್ಕೆ ಮಾರಾಟವಾದರೆ ಮಾತ್ರ ಲಾಭವಾಗುತ್ತದೆ. ಈಗ ಹಾಕಿದ ಬಂಡವಾಳವೂ ಕೈ ಸೇರುತ್ತಿಲ್ಲ. ಇದರಿಂದ ಸವತೆ ಕೃಷಿಯಿಂದಲೂ ಹಿಂದೆ ಸರಿಯುವಂತಾಗಿದೆ’ ಎಂದು ಯಕ್ಸಂಬಾದ ಕೃಷಿಕ ಅನಿಲ ಬಾಗೇವಾಡಿ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.