ADVERTISEMENT

ಬ್ಯಾಂಕ್ ಖಾತೆಯಿಂದ ₹ 10 ಲಕ್ಷ ಸೆಳೆದು ವಂಚನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 9:10 IST
Last Updated 12 ಜೂನ್ 2021, 9:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ವ್ಯಕ್ತಿಯೊಬ್ಬರಬ್ಯಾಂಕ್ ಖಾತೆಗೆ ಒಂದಲ್ಲ, ಎರಡಲ್ಲ 102 ಬಾರಿ ಕನ್ನ ಹಾಕಿ ಬರೋಬ್ಬರಿ ₹ 10 ಲಕ್ಷ ಸೆಳೆದುಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ತಾಲ್ಲೂಕಿನ ಕಂಗ್ರಾಳಿ ಕೆ.ಎಚ್. ಗ್ರಾಮದ ನಿವಾಸಿ ಯಲ್ಲಪ್ಪ ನಾರಾಯಣ ಜಾಧವ ಹಣ ಕಳೆದುಕೊಂಡವರು. ಅವರು ಬಿಎಸ್‌ಎನ್‌ಎಲ್‌ ನಿವೃತ್ತ ನೌಕರ ಎಂದು ತಿಳಿದುಬಂದಿದೆ. ಇಲ್ಲಿನ ಸಿಇಎನ್‌ (ಸೈಬರ್, ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್) ಅಪರಾಧ ಠಾಣೆಗೆ ದೂರು ನೀಡಿದ ನಂತರ ವಂಚನೆ ಪ್ರಕರಣ ಬಯಲಾಗಿದೆ.

‘ಬ್ಯಾಂಕ್‌ ಖಾತೆಯ ಕೆವೈಸಿ (ನಿಮ್ಮ ಗ್ರಾಹಕರ ಬಗ್ಗೆ ತಿಳಿಯಿರಿ) ಅಪ್‌ಡೇಟ್ ಮಾಡುವುದಾಗಿ ದಾಖಲೆ ಪಡೆದು ಹಣ ವಂಚಿಸಲಾಗಿದೆ. ಈಚೆಗೆ 09339281627 ಸಂಖ್ಯೆಯಿಂದ ನನ್ನ ಮೊಬೈಲ್‌ ಫೋನ್‌ಗೆ ಕರೆ ಬಂದಿತ್ತು. ಸ್ವೀಕರಿಸಿದಾಗ, ಖಾತೆಯ ಕೆವೈಸಿ ಅಪ್‌ಡೇಟ್‌ಗಾಗಿ ಆಧಾರ್ ಕಾರ್ಡ್‌, ಬ್ಯಾಂಕ್ ಪಾಸ್‌ಬುಕ್‌ ಪ್ರತಿಯನ್ನು ವಾಟ್ಸ್‌ಆ್ಯಪ್ ಮಾಡುವಂತೆ ಆ ವ್ಯಕ್ತಿ ತಿಳಿಸಿದ್ದರು. ಲಿಂಕ್‌ ಒಂದನ್ನು ಕಳುಹಿಸಿ ಅದನ್ನು ಕ್ಲಿಕ್ ಮಾಡುವಂತೆಯೂ ಕೇಳಿದ್ದರು. ಆಗ, ಬಂದ ಒಟಿಪಿ (ಒನ್‌ ಟೈಂ ಪಾಸ್‌ವರ್ಡ್‌) ಕೂಡ ಪಡೆದುಕೊಂಡಿದ್ದರು. ನಂತರ ಕ್ರಮೇಣ ₹ 10 ಲಕ್ಷವನ್ನು ಸೆಳೆದಿದ್ದಾರೆ’ ಎಂದು ಯಲ್ಲಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಬರೋಬ್ಬರಿ 102 ಬಾರಿ ಹಣ ಸೆಳೆದಿದ್ದರೂ ಗ್ರಾಹಕರು ಬ್ಯಾಂಕ್‌ಗೆ ಮಾಹಿತಿ ನೀಡದಿರುವುದು ಅಚ್ಚರಿ ಮೂಡಿಸಿದೆ. ಪ್ರಕರಣದ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.