ADVERTISEMENT

ಬೆಳಗಾವಿ: ಕಪ್ಪು ಶಿಲೀಂಧ್ರ ಸಮಸ್ಯೆ ಉಲ್ಬಣ, 30 ಮಂದಿ ಸಾವು

30 ಮಂದಿಯನ್ನು ಸಾವಿಗೆ ದೂಡಿದ ಫಂಗಸ್

ಎಂ.ಮಹೇಶ
Published 25 ಜೂನ್ 2021, 15:33 IST
Last Updated 25 ಜೂನ್ 2021, 15:33 IST
ಕಪ್ಪು ಶಿಲೀಂಧ್ರ ಸಮಸ್ಯೆ-ಪ್ರಾತಿನಿಧಿಕ ಚಿತ್ರ
ಕಪ್ಪು ಶಿಲೀಂಧ್ರ ಸಮಸ್ಯೆ-ಪ್ರಾತಿನಿಧಿಕ ಚಿತ್ರ   

ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿರುವ ನಡುವೆಯೇ ಕಪ್ಪು ಶಿಲೀಂಧ್ರ ಸಮಸ್ಯೆ ಉಲ್ಬಣಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೋವಿಡ್‌–19ನಿಂದ ಗುಣಮುಖರಾದವರನ್ನು ಇದು ಬಾಧಿಸುತ್ತಿದೆ.

ಜಿಲ್ಲಾಡಳಿತ ನೀಡಿರುವ ವರದಿ ಪ್ರಕಾರ, ‘ಈವರೆಗೆ 306 ಕಪ್ಪು ಶಿಲೀಂಧ್ರ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 186 ಪ್ರಕರಣಗಳು ಬಿಮ್ಸ್‌ (ಜಿಲ್ಲಾಸ್ಪತ್ರೆ)ಯಲ್ಲಿ ಮತ್ತು ಉಳಿದವು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಲ್ಲಿ ಕಂಡುಬಂದಿವೆ. 118 ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 137 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 132 ಸೋಂಕಿತರು ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 30 ಮಂದಿ ಮರಣ ಹೊಂದಿದ್ದಾರೆ’.

ಕಪ್ಪು ಶಿಲೀಂಧ್ರ ಸಮಸ್ಯೆಯು ಜನರನ್ನು ಕಾಡುತ್ತಿರುವುದು ಅಂಕಿ ಅಂಶಗಳಿಂದ ದೃಢಪಡುತ್ತಿದೆ. ಬಿಮ್ಸ್‌ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸೇರಿ ನಿತ್ಯವೂ ಸರಾಸರಿ ನಾಲ್ಕೈದು ಮಂದಿ ಈ ಕಾಯಿಲೆಯಿಂದ ದಾಖಲಾಗುತ್ತಿದ್ದಾರೆ. ಜಿಲ್ಲೆಯಲ್ಲಿ ತಿಂಗಳ ಅಂತರದಲ್ಲೇ 30 ಮಂದಿಯನ್ನು ಈ ಶಿಲೀಂಧ್ರ ಬಲಿ ಪಡೆದಿದೆ.

ADVERTISEMENT

ಜಿಲ್ಲೆಯಲ್ಲಿ ಶುಕ್ರವಾರದವರೆಗೆ 72,619 ಮಂದಿ ಕೋವಿಡ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಅವರಲ್ಲಿ ಕೆಲವರಲ್ಲಿ ಕಪ್ಪು ಶಿಲೀಂಧ್ರ ಕಾಣಿಸಿಕೊಂಡಿದೆ.

ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದ ವ್ಯಕ್ತಿಯಲ್ಲಿ ಕಪ್ಪು ಶಿಲೀಂಧ್ರ ಸಮಸ್ಯೆ ದೃಢಪಟ್ಟಿತ್ತು. ಕೋವಿಡ್‌ 2ನೇ ಅಲೆಯು ಆರಂಭವಾದ ನಂತರ ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾಗುವರ ಸಂಖ್ಯೆ ಹೆಚ್ಚಳವಾಗಿದೆ. ಅವರ ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಎದುರಾಗಿತ್ತು. ಕೆಲ ದಿನಗಳಿಂದ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆ ಆಗಿರುವುದರಿಂದ ಕೊರೊನಾ ಸೋಂಕಿತರಿಗೆ ಮೀಸಲಿಟ್ಟ ಹಾಸಿಗೆಗಳನ್ನು ಈಗ ಕಪ್ಪು ಶಿಲೀಂಧ್ರ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿದೆ.

ವಿಶ್ಲೇಷಣೆ ನಡೆಯುತ್ತಿದೆ:

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಮ್ಸ್‌ ಪ್ರಭಾರ ವೈದ್ಯಕೀಯ ನಿರ್ದೇಶಕ ಡಾ.ಉಮೇಶ ಕುಲಕರ್ಣಿ, ‘30 ಮಂದಿಯೂ ಕಪ್ಪು ಶಿಲೀಂಧ್ರದ ಕಾರಣದಿಂದಲೇ ಮರಣ ಹೊಂದಿದರು ಎಂದು ಹೇಳುವುದಕ್ಕೆ ಬರುವುದಿಲ್ಲ. ಅದೂ ಒಂದು ಕಾರಣವಾಗಿದೆ ಎನ್ನಬಹುದು. ಅವರು ಮಧುಮೇಹ, ಕಿಡ್ನಿ, ಹೃದಯ ಸಂಬಂಧಿ ಮೊದಲಾದ ಗಂಭೀರ ಸಮಸ್ಯೆಗಳನ್ನು ಹೊಂದಿದ್ದರು. ಈ ನಿಟ್ಟಿನಲ್ಲಿ ತಜ್ಞ ವೈದ್ಯರು ವಿಶ್ಲೇಷಣೆ ನಡೆಸುತ್ತಿದ್ದಾರೆ. ಇನ್ನೂ ವರದಿ ಸಲ್ಲಿಕೆಯಾಗಿಲ್ಲ’ ಎಂದು ಮಾಹಿತಿ ನೀಡಿದರು.

‘ಸದ್ಯಕ್ಕೆ ಆಸ್ಪತ್ರೆಗೆ ನಿತ್ಯ 3–4 ಮಂದಿ ರೋಗಿಗಳು ದಾಖಲಾಗುತ್ತಿದ್ದಾರೆ. ಇಂಜೆಕ್ಷನ್‌ ಮೊದಲಾದವುಗಳಿಗೆ ಕೊರತೆ ಇಲ್ಲ. ಶುಕ್ರವಾರ ಬೆಳಿಗ್ಗೆವರೆಗೆ ನಮ್ಮಲ್ಲಿ 186 ಪ್ರಕರಣಗಳು ವರದಿಯಾಗಿವೆ. 79 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 118 ರೋಗಿಗಳಿಗೆ ಸರ್ಜರಿ ನೆರವೇರಿಸಲಾಗಿದೆ. 67 ಮಂದಿ ಗುಣಮುಖರಾಗಿದ್ದು ಬಿಡುಗಡೆ ಮಾಡಲಾಗಿದೆ. 26 ದಿನಗಳಲ್ಲಿ 100 ಕಪ್ಪು ಶಿಲೀಂದ್ರ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸಂಸ್ಥೆಯಲ್ಲಿ ಮೇ 26ರಂದು ಮೊದಲ ಪ್ರಕರಣ ವರದಿಯಾಗಿತ್ತು’ ಎಂದು ತಿಳಿಸಿದರು.

‘ಆರಂಭದಲ್ಲಿ ಸಿಬ್ಬಂದಿ ಕೊರತೆಯಿಂದ ದಿನಕ್ಕೆ 2ರಿಂದ 3 ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿತ್ತು. ಈಗ ಇದು 6ಕ್ಕೆ ಏರಿದೆ. 60 ರೋಗಿಗಳಿಗೆ ಕಣ್ಣಿನ ಬಳಿ ಸಮಸ್ಯೆ ಕಂಡುಬಂದಿದೆ. 35 ರೋಗಿಗಳಿಗೆ ಕಣ್ಣಿನ ಬಳಿ ಚುಚ್ಚುಮದ್ದು ನೀಡಿದ್ದು, ಅವರೆಲ್ಲರ ದೃಷ್ಟಿಯಲ್ಲಿ ಸುಧಾರಣೆ ಕಂಡುಬಂದಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.