ADVERTISEMENT

ಕೋವಿಡ್ ಲಸಿಕೆ ನೀಡಿಕೆ: ಮೊದಲಿಗೆ 30 ಸಾವಿರ ‘ಯೋಧ’ರಿಗೆ

ಬೆಳಗಾವಿ: ‘ಆರೋಗ್ಯ ಸೇವಕ’ರಿಗೆ ಆದ್ಯತೆ

ಎಂ.ಮಹೇಶ
Published 25 ನವೆಂಬರ್ 2020, 19:30 IST
Last Updated 25 ನವೆಂಬರ್ 2020, 19:30 IST
ಬೆಳಗಾವಿಯ ಜಿಲ್ಲಾಸ್ಪತ್ರೆ
ಬೆಳಗಾವಿಯ ಜಿಲ್ಲಾಸ್ಪತ್ರೆ   

ಬೆಳಗಾವಿ: ಕೋವಿಡ್–19 ಲಸಿಕೆ ಬಂದರೆ ಅದನ್ನು, ಜಿಲ್ಲೆಯಾದ್ಯಂತ ಕೊರೊನಾ ಯೋಧರಾಗಿ ಮುಂಚೂಣಿಯಲ್ಲಿ ನಿಂತು ಜನರ ಆರೋಗ್ಯ ಕಾಪಾಡುವುದಕ್ಕಾಗಿ ಕಾರ್ಯನಿರ್ವಹಿಸಿದ 30ಸಾವಿರಕ್ಕೂ ಹೆಚ್ಚಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಲು ಯೋಜಿಸಲಾಗಿದೆ.

ಸರ್ಕಾರದ ಸೂಚನೆಯಂತೆ, ಮೊದಲ ಹಂತದಲ್ಲಿ ‘ಆರೋಗ್ಯ ಸೇವಾ ಸಿಬ್ಬಂದಿ’ಯನ್ನು ಲಸಿಕೆಗೆ ಆಯ್ಕೆ ಮಾಡಲಾಗುತ್ತಿದೆ. ಇದಕ್ಕಾಗಿ ಆರೋಗ್ಯ ಇಲಾಖೆಯಿಂದ ಸಿಬ್ಬಂದಿಯ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಎಲ್ಲಾ ಹಂತದ ಸಿಬ್ಬಂದಿಯನ್ನೂ ಇದರಲ್ಲಿ ಪರಿಗಣಿಸಲಾಗುತ್ತಿದೆ.

ಜಿಲ್ಲೆಯಲ್ಲಿ 176 ಅಲೋಪತಿ ಹಾಗೂ 9 ಆಯುಷ್ ಸೇರಿ 185 ಸರ್ಕಾರಿ ಆರೋಗ್ಯ ಸಂಸ್ಥೆಗಳಿವೆ. 1,517 ಖಾಸಗಿ ಆಸ್ಪತ್ರೆಗಳು ಇಲಾಖೆಯ ನಿಯಮಗಳ ಪ್ರಕಾರ ನೋಂದಾಣಿಯಾಗಿವೆ. ಇವುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಯ ಮಾಹಿತಿಯನ್ನೂ ಇಲಾಖೆಯಿಂದ ಸಂಗ್ರಹಿಸಲಾಗುತ್ತಿದೆ. ಈ ಪೈಕಿ ಈವರೆಗೆ 1,502 ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಯ ಮಾಹಿತಿ ಕ್ರೋಢೀಕರಿಸಲಾಗಿದೆ. ಕೂಡಲೇ ವಿವರ ಒದಗಿಸುವಂತೆ ಉಳಿದ 15 ಆಸ್ಪತ್ರೆಗಳವರಿಗೂ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಯಾರ‍್ಯಾರಿಗೆ?

ವೈದ್ಯರು, ತಜ್ಞ ವೈದ್ಯರು, ಸ್ಟಾಫ್‌ ನರ್ಸ್‌ಗಳು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಹಿರಿಯ ಪುರುಷ ಆರೋಗ್ಯ ಸಹಾಯಕರು, ಫಾರ್ಮಾಸಿಸ್ಟ್‌ಗಳು, ಸ್ವಚ್ಛತಾ ಸಿಬ್ಬಂದಿ, ಲ್ಯಾಬ್ ಟೆಕ್ನೀಷಿಯನ್‌ಗಳು, ವೈದ್ಯಕೀಯ ಕಾಲೇಜುಗಳ ಸಿಬ್ಬಂದಿ ಮತ್ತು ಅಲ್ಲಿನ ವಿದ್ಯಾರ್ಥಿಗಳು, ಸಂಶೋಧಕರು, ನರ್ಸಿಂಗ್ ಕಾಲೇಜುಗಳ ಸಿಬ್ಬಂದಿ ಮತ್ತು ಅಲ್ಲಿನ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆಯುಷ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಆಂಬುಲೆನ್ಸ್‌ಗಳ ನೌಕರರು, ವಾಹನಗಳ ಚಾಲಕರು, ಆಶಾ ಮತ್ತು ಅಂಗನವಾಡಿಗಳ ಕಾರ್ಯಕರ್ತೆಯರು, ಮೇಲ್ವಿಚಾರಕರು, ಸಿಡಿಪಿಒಗಳು ಹೀಗೆ... ‘ಆರೋಗ್ಯ ಸೇವೆ’ಗೆ ಸಂಬಂಧಿಸಿದವರಿಗೆ ಆದ್ಯತೆ ಮೇರೆಗೆ ಲಸಿಕೆ ದೊರೆಯಲಿದೆ ಎಂದು ಮಾಹಿತಿ ನೀಡಿವೆ.

ಇವರಲ್ಲಿ ಬಹುತೇಕರು ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಅವರನ್ನು ಶುಶ್ರೂಷೆ ಮಾಡಿದ್ದಾರೆ. ಬಹುತೇಕರನ್ನು ಸಾವಿನ ದವಡೆಯಿಂದ ತಪ್ಪಿಸಿದ್ದಾರೆ. ಅಲ್ಲದೇ, ಹೆಚ್ಚಿನ ರಿಸ್ಕ್‌ ತೆಗೆದುಕೊಂಡಿದ್ದಾರೆ. ಹೀಗಾಗಿ, ಅವರ ಕೆಲಸವನ್ನು ಗೌರವಿಸುವ ಕಾರ್ಯವನ್ನು ಸರ್ಕಾರ ಈ ಮೂಲಕ ಮಾಡುತ್ತಿದೆ ಎನ್ನಲಾಗುತ್ತಿದೆ.

ಪೌರಕಾರ್ಮಿಕರು, ಪೊಲೀಸರಿಗೆ ಈಗಿಲ್ಲ

ಕೋವಿಡ್ ಭೀತಿಯ ನಡುವೆಯೂ ಮತ್ತು ಯಾವುದೇ ಪಿಪಿಇ ಕಿಟ್‌ಗಳನ್ನು ಧರಿಸಿದೆ ನಗರ, ಪಟ್ಟಣ ಹಾಗೂ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಕಾರ್ಯದಲ್ಲಿ ಭಾಗಿಯಾಗಿದ್ದ ಪೌರಕಾರ್ಮಿಕರು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಗಲಿರುಳೂ ಕೆಲಸ ಮಾಡಿದ ಪೊಲೀಸರಿಗೆ ಲಸಿಕೆ ನೀಡಲು ಮೊದಲ ಹಂತದಲ್ಲಿ ಪರಿಗಣಿಸಲಾಗುತ್ತಿಲ್ಲ.

ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಿದ ನಂತರ, ಪೌರಕಾರ್ಮಿಕರು ಮತ್ತು ಪೊಲೀಸರನ್ನು ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕೊರೊನಾ ವಿರುದ್ಧದ ಯುದ್ಧದಲ್ಲಿ ಮುಂಚೂಣಿ ಯೋಧರಾಗಿದ್ದವರ ಕುಟುಂಬದವರನ್ನು ಮೊದಲ ಹಂತದಲ್ಲಿ ಪರಿಗಣಿಸಿಲ್ಲ. ಮನವಿ ಇತ್ತಾದರೂ, ಲಸಿಕೆ ಲಭ್ಯತೆ ಆಧರಿಸಿ ಅದನ್ನು 2ನೇ ಹಂತದಲ್ಲಿ ಪರಿಗಣಿಸಲಾಗುವುದು ಎಂದು ಸರ್ಕಾರದಿಂದ ತಿಳಿಸಲಾಗಿದೆ.

ಜಿಲ್ಲೆಯಲ್ಲಿ 53 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ಎಲ್ಲರಿಗೂ ಲಸಿಕೆ ಸಿಗಬೇಕಾದರೆ ವರ್ಷಗಳೇ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

* ಕೋವಿಡ್ ಲಸಿಕೆ ಬಂದರೆ ಸಂಗ್ರಹಕ್ಕೆ ಮತ್ತು ವಿತರಣೆಗೆ ಜಿಲ್ಲೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಮೊದಲಿಗೆ ಆರೋಗ್ಯ ಸೇವಾ ಸಿಬ್ಬಂದಿಗೆ ನೀಡಲಾಗುವುದು.

–ಡಾ.ಎಸ್.ವಿ. ಮುನ್ಯಾಳ, ಡಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.