ADVERTISEMENT

₹4.41 ಕೋಟಿ ವಂಚನೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 15:36 IST
Last Updated 5 ಏಪ್ರಿಲ್ 2022, 15:36 IST
ಭವ್ಯಹರೇನ್ ದೇಸಾಯಿ
ಭವ್ಯಹರೇನ್ ದೇಸಾಯಿ   

ಬೆಳಗಾವಿ: ತಾನು ಕೆಲಸ ಮಾಡುತ್ತಿದ್ದ ಕಂಪನಿಗೆ ₹ 4.41 ಕೋಟಿ ವಂಚಿಸಿದ್ದ ಆರೋಪದ ಮೇಲೆ ವ್ಯಕ್ತಿಯನ್ನು ಇಲ್ಲಿನ ಸಿಇಎನ್‌ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಮುಂಬೈನ ಮಸ್ಕತಿ ಮಹಲ್ ನಿವಾಸಿ ಭವ್ಯಹರೇನ್ ದೇಸಾಯಿ (25) ಬಂಧಿತ ಆರೋಪಿ. ತಮ್ಮ ಕಸ್ಟಡಿಗೆ ಪಡೆದುಕೊಂಡು 10 ದಿನಗಳಿಂದ ವಿಚಾರಣೆ ನಡೆಸಿದ ಸಿಇಎನ್‌ ಠಾಣೆ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಮಂಗಳವಾರ ಹಾಜರುಪಡಿಸಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಆರೋಪಿಯನ್ನು ಕಾರಾಗೃಹಕ್ಕೆ ಕಳುಹಿಸಲಾಗಿದೆ.

ತಾಲ್ಲೂಕಿನ ದೇಸೂರದ ಎಂ.ಜಿ. ಆಟೊಮೋಟಿವ್‌ ಬಸ್ ಅಂಡ್ ಕೋಚ್‌ ಕಂಪನಿಯ ಪ್ರಕಾಶ ಸರ್ವಿ ಎನ್ನುವವರು ಮಾರ್ಚ್‌ 12ರಂದು ದೂರು ನೀಡಿದ್ದರು. ತಮ್ಮ ಎಂ.ಜಿ. ಸಮೂಹದ ಫೈನಾನ್ಸಿಯಲ್‌ ಕಂಟ್ರೋಲರ್ ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕ ಭವ್ಯಹರೇನ್‌, ಸುಳ್ಳು ದಾಖಲೆ ಪತ್ರಗಳನ್ನು ಸೃಷ್ಟಿಸಿ ಕಂಪನಿಯಿಂದ ಆರ್‌ಟಿಜಿಎಸ್ ಮೂಲಕ ₹ 4.41 ಕೋಟಿಯನ್ನು ಪಡೆದುಕೊಂಡಿದ್ದಾರೆ. ಕೊಡಬೇಕಾದ ಕಂಪನಿಗಳಿಗೆ ಹಣವನ್ನು ಕೊಡದೆ, ಕಂಪನಿಗೂ ಮರಳಿಸದೆ ತನ್ನ ಮತ್ತು ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.

ADVERTISEMENT

ಪ್ರಕರಣ ದಾಖಲಿಸಿಕೊಂಡ ಸಿಇಎನ್‌ ಅಪರಾಧ ಠಾಣೆ ಪೊಲೀಸರು, ವಿಮಾನನಿಲ್ದಾಣಗಳು ಸೇರಿದಂತೆ ವಿವಿಧೆಡೆ ಮಾಹಿತಿ ನೀಡಿದ್ದರು. ಇದನ್ನು ಆಧರಿಸಿ, ಮಾರ್ಚ್‌ 24ರಂದು ಶಾರ್ಜಾಕ್ಕೆ ತೆರಳಲು ಮುಂಬೈ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಹೋಗಿದ್ದ ಆರೋಪಿಯನ್ನು ಅಲ್ಲಿನ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇಲ್ಲಿನ ಪೊಲೀಸರು ಮಾರ್ಚ್‌ 25ರಂದು ಮುಂಬೈಗೆ ತೆರಳಿ ಬಂಧಿಸಿ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದಿದ್ದರು.

ಸಿಇಎನ್ ಠಾಣೆ ಇನ್‌ಸ್ಪೆಕ್ಟರ್‌ ಬಿ.ಆರ್. ಗಡ್ಡೇಕರ ನೇತೃತ್ವದ ತಂಡ ವಿಚಾರಣೆ ನಡೆಸಿದೆ. ಆರೋಪಿಯ ಖಾತೆಗಳನ್ನು ಫ್ರೀಜ್ (ಸ್ಥಗಿತ) ಮಾಡಲಾಗಿದೆ. ಆತನಿಂದ ₹ 2.65 ಕೋಟಿ ಜಪ್ತಿ ಮಾಡಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.