ADVERTISEMENT

ಬೆಳಗಾವಿ: 13 ತಿಂಗಳಲ್ಲಿ 57 ರೈತರ ಆತ್ಮಹತ್ಯೆ; 21 ಕುಟುಂಬಗಳಿಗಳಿಗಷ್ಟೇ ಪರಿಹಾರ

ಎಂ.ಮಹೇಶ
Published 31 ಮೇ 2021, 19:30 IST
Last Updated 31 ಮೇ 2021, 19:30 IST
   

ಬೆಳಗಾವಿ: ಜಿಲ್ಲೆಯಲ್ಲಿ 2020–21ನೇ ಸಾಲಿನಲ್ಲಿ 51 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಕೃಷಿ ಇಲಾಖೆಯಲ್ಲಿ ವರದಿಯಾಗಿದೆ.

32 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 21 ಕುಟುಂಬಗಳಿಗಷ್ಟೆ ಪರಿಹಾರ ಚೆಕ್‌ ವಿತರಿಸಲಾಗಿದೆ. 2 ಎಫ್‌ಎಸ್‌ಎಲ್ ವರದಿ ಬರಬೇಕಿದೆ. ಇತರ ಕಾರಣಗಳಿಂದ 14 ಅರ್ಜಿಗಳನ್ನು ಬಾಕಿ ಇಡಲಾಗಿದೆ. 3 ತಿರಸ್ಕೃತಗೊಂಡಿವೆ.

ಈ ಸಾಲಿನಲ್ಲಿ ಅಂದರೆ ಏಪ್ರಿಲ್‌ನಿಂದ ಮೇ 28ರವರೆಗೆ ಬೈಲಹೊಂಗದಲ್ಲಿ ನಾಲ್ವರು ಹಾಗೂ ಅಥಣಿ ತಾಲ್ಲೂಕಿನಲ್ಲಿ ಇಬ್ಬರು ಸೇರಿ 6 ಮಂದಿ ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ADVERTISEMENT

ಜಾಗೃತಿ, ಸರ್ಕಾರದ ಪ್ರೋತ್ಸಾಹ ಯೋಜನೆಗಳು ಮೊದಲಾದವುಗಳ ಹೊರತಾಗಿಯೂ ರೈತರ ಆತ್ಮಹತ್ಯೆ ಪ್ರಕರಣಗಳು ನಿಲ್ಲುತ್ತಿಲ್ಲ. ಪ್ರತಿ ವರ್ಷವೂ ಒಂದಿಲ್ಲೊಂದು ಕಾರಣದಿಂದ ಸಂಕಷ್ಟ ಅನುಭವಿಸುತ್ತಿರುವ ಅನ್ನದಾತರು ಸಾವಿನ ಮನೆಯ ಕದ ತಟ್ಟುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.

ಕಡಿಮೆಯಾಗಿದೆ, ನಿಂತಿಲ್ಲ:ಜಿಲ್ಲಾಡಳಿತದ ಮಾಹಿತಿ ಪ್ರಕಾರ, 2017–18ರಲ್ಲಿ 95 ಪ್ರಕರಣಗಳು ವರದಿ ಆಗಿದ್ದವು. ಈ ಪೈಕಿ 79 ಪ್ರಕರಣಗಳಲ್ಲಿ ಆಯಾ ರೈತರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ಕೊಡಲಾಗಿತ್ತು. 2018–19ರಲ್ಲಿ 98 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 75 ಕುಟುಂಬಗಳಿಗೆ ಪರಿಹಾರ ಕೊಡಲಾಗಿದೆ. 14 ಅರ್ಜಿಗಳು ತಿರಸ್ಕೃತವಾಗಿದ್ದವು. ಅಥಣಿ, ಗೋಕಾಕ ಹಾಗೂ ಸವದತ್ತಿ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬಂದಿದ್ದವು.

2019–20ನೇ ಸಾಲಿನಲ್ಲಿ 80 ಪ್ರಕರಣಗಳು ವರದಿಯಾಗಿದ್ದವು. ಅನ್ನದಾತರ ಸಂಕಷ್ಟಗಳಿಗೆ ಕೊನೆಯೇ ಇಲ್ಲದಂತಾಗಿರುವುದು ಅಂಕಿ–ಅಂಶಗಳಿಂದ ದೃಢವಾಗುತ್ತಿದೆ. 2020–21ನೇ ಸಾಲಿನಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿದೆಯೇ ಹೊರತು, ರೈತರ ಆತ್ಮಹತ್ಯೆ ನಿಂತಿಲ್ಲ.

ಪರಿಹಾರಕ್ಕೂ ಪರಿಶೀಲನೆ:ಪರಿಹಾರ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ವಿವಿಧ ಹಂತಗಳಲ್ಲಿ ಪರಿಶೀಲಿಸಿದ ಬಳಿಕವಷ್ಟೇ ಪರಿಗಣಿಸಲಾಗುತ್ತದೆ. ಪರಿಹಾರ ನೀಡಲಾದ ಪ್ರಕರಣಗಳನ್ನು ಮಾತ್ರವೇ ಸಾಲದ ಬಾಧೆಯಿಂದ ಮೃತಪಟ್ಟವರು ಎಂದು ಸರ್ಕಾರ ‘ಲೆಕ್ಕ’ ನೀಡುತ್ತಿದೆ.

ಅತಿವೃಷ್ಟಿ, ಅನಾವೃಷ್ಟಿ, ನೆರೆ, ಬೆಳೆ ನಷ್ಟದಿಂದ ಆದ ಆರ್ಥಿಕ ನಷ್ಟ, ಸಾಲದ ಬಾಧೆ, ಬೆಳೆಗೆ ಸಮರ್ಪಕ ಬೆಲೆ ಸಿಗದಿರುವುದು, ಸಾಲ ಕೊಟ್ಟವರಿಂದ ಬರುವ ಕಿರುಕುಳ ರೂಪದ ಒತ್ತಡ, ನೋಟಿಸ್‌ಗಳಿಂದ ಮರ್ಯಾದೆಗೆ ಅಂಜಿ ಅನ್ನದಾತರು ಸಾವಿನ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಇದರಿಂದ ಅವರ ಕುಟುಂಬಗಳು ಬೀದಿಗೆ ಬೀಳುತ್ತಿವೆ. ವರದಿಯಾಗದ ಮತಷ್ಟು ಪ್ರಕರಣಗಳೂ ಇವೆ. ರೈತರು ಸ್ವಾವಲಂಬಿಯಾಗಿ ಬದುಕಲು ಬೇಕಾದ ವಾತಾವರಣವನ್ನು ಸರ್ಕಾರಗಳು ನಿರ್ಮಾಣ ಮಾಡದಿರುವುದು ಇದಕ್ಕೆ ಕಾರಣವಾಗುತ್ತಿದೆ ಎನ್ನುತ್ತಾರೆ ರೈತ ಹೋರಾಟಗಾರರು.

ಹೋದ ವರ್ಷವೂ ನೆರೆ ಹಾಗೂ ಅತಿವೃಷ್ಟಿ ರೈತರನ್ನು ಕಾಡಿತು. ಸಾವಿರಾರು ಎಕರೆ ಬೆಳೆ ನಾಶವಾಗಿ ಅವರಿಗೆ ನಷ್ಟವಾಗಿತ್ತು. ಇನ್ನೇನು ಸುಧಾರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಕೋವಿಡ್ ಲಾಕ್‌ಡೌನ್‌ ಕಾರಣದಿಂದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಫಸಲು ಮಾರಲಾಗಲಿಲ್ಲ. ಇದರಿಂದ ಬಹಳಷ್ಟು ಮಂದಿ ಕೈಸುಟ್ಟುಕೊಂಡಿದ್ದರು.

‘ನೆರೆ ಅಥವಾ ಅತಿವೃಷ್ಟಿಯಾದಾಗ ಎಷ್ಟು ಬೆಳೆ ಹಾನಿಯಾಗಿದೆಯೋ ಅಷ್ಟಕ್ಕೂ ಪರಿಹಾರ ನೀಡಬೇಕು. ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸುವವರಿಗೆ ನಿಯಮದಂತೆ ಹಣ ಪಾವತಿಗೆ ಕ್ರಮ ವಹಿಸಬೇಕು. ಆಗ ಆತ್ಮಹತ್ಯೆ ಪ್ರಕರಣಗಳನ್ನು ತಡೆಯಬಹುದು’ ಎಂದು ರೈತ ಸಂಘದ ಸಂಚಾಲಕ ಚೂನಪ್ಪ ಪೂಜಾರಿ ಒತ್ತಾಯಿಸಿದರು.

***

ಪ್ರತಿ ವರ್ಷವೂ ಸರ್ಕಾರದ ಸೂಚನೆ ನಡುವೆಯೂ ಸಾಲ ವಸೂಲಾತಿ ಕಿರಿಕಿರಿಗಳು ಮತ್ತು ನೋಟಿಸ್‌ ಕೊಟ್ಟು ಬೆದರಿಸುವುದು ನಿಂತಿಲ್ಲ. ರೈತರಿಗೆ ಹೊಸ ಸಾಲ ಸಿಗುತ್ತಿಲ್ಲ. ಕೃಷಿ ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ನಮ್ಮ ಗೋಳು ಕೇಳುತ್ತಿಲ್ಲ

-ಸಿದಗೌಡ ಮೋದಗಿ,ಅಧ್ಯಕ್ಷರು, ಭಾರತೀಯ ಕೃಷಿ ಸಮಾಜ (ಸಂಯುಕ್ತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.