ADVERTISEMENT

ಬೆಳಗಾವಿ: 82 ಕೋವಿಡ್ ಕೇರ್ ಕೇಂದ್ರ, 1,100ಕ್ಕೂ ಹೆಚ್ಚಿನ ಹಾಸಿಗೆಗೆ ಕ್ರಮ

ಎಂ.ಮಹೇಶ
Published 16 ಜುಲೈ 2020, 13:37 IST
Last Updated 16 ಜುಲೈ 2020, 13:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚುತ್ತಿರುವುದರಿಂದ ಜಿಲ್ಲಾಡಳಿತದಿಂದ ಚಿಕಿತ್ಸಾ ಸೇವೆ ಒದಗಿಸುವುದಕ್ಕಾಗಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಒಟ್ಟು 82 ಕೋವಿಡ್ ಕೇರ್‌ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ.

ಕೋವಿಡ್–19 ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲಿ ಹೊರಗಿನಿಂದ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡುವುದಕ್ಕೆ ಬಳಸಲಾಗಿದ್ದ ಕೇಂದ್ರಗಳನ್ನು ಈಗ ಕೋವಿಡ್ ಕೇರ್‌ ಕೇಂದ್ರಗಳಿಗೆ ಉಪಯೋಗಿಸಲಾಗುತ್ತಿದೆ.

ಮೊರಾರ್ಜಿ ದೇಸಾಯಿ, ಜವಾಹರಲಾಲ್‌ ನವೋದಯ ಮೊದಲಾದ ವಸತಿ ಶಾಲೆಗಳಲ್ಲಿ ಹಾಸಿಗೆ ಹಾಗೂ ವೈದ್ಯಕೀಯ ಸಲಕರಣೆಗಳ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿ 1,100ಕ್ಕೂ ಹೆಚ್ಚಿನ ಹಾಸಿಗೆಗಳು ಲಭ್ಯವಾಗುವಂತೆ ಮಾಡುವ ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಂದಿದೆ. ಸಮರ್ಪಕ ಅನುಷ್ಠಾನಕ್ಕಾಗಿ ಆಯಾ ಭಾಗದ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕೆಲವೇ ದಿನಗಳಲ್ಲಿ ಎಲ್ಲ ಕೇಂದ್ರಗಳಲ್ಲೂ ಆರೈಕೆ ಪ್ರಕ್ರಿಯೆ ಆರಂಭವಾಗಲಿದೆ.

ADVERTISEMENT

ಒತ್ತಡ ತಗ್ಗಿಸಲು

ಪ್ರಸ್ತುತ ಕೋವಿಡ್–19 ದೃಢಪಟ್ಟವರನ್ನು ಜಿಲ್ಲಾ ಕೇಂದ್ರದಲ್ಲಿರುವ ಬಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಇಲ್ಲಿಗೆ ಒತ್ತಡ ಜಾಸ್ತಿಯಾಗುತ್ತಿದೆ. ಹೀಗಾಗಿ, ಪರಿಸ್ಥಿತಿ ನಿರ್ವಹಿಸುವುದಕ್ಕೋಸ್ಕರ ಸರ್ಕಾರದ ಸೂಚನೆ ಪ್ರಕಾರ ಹೆಚ್ಚುವರಿ ಕೇಂದ್ರಗಳನ್ನು ಸ್ಥಾ‍ಪಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತ್ಯೇಕ ಕೊಠಡಿಗಳನ್ನು ಸಜ್ಜುಗೊಳಿಸಲಾಗುವುದು. ಒಂದು ಕೊಠಡಿಯಲ್ಲಿ ಇಬ್ಬರಿಂದ ಮೂವರು ಚಿಕಿತ್ಸೆ ಪಡೆಯುವ ವ್ಯವಸ್ಥೆ ಮಾಡಲಾಗುತ್ತಿದೆ. ಊಟೋಪಚಾರ, ಪ್ರತ್ಯೇಕ ಶೌಚಾಲಯ ಮೊದಲಾದ ಮೂಲಸೌಲಭ್ಯ ಕಲ್ಪಿಸಲಾಗುತ್ತಿದೆ.

ಅಗತ್ಯ ವ್ಯವಸ್ಥೆ

‘ರೋಗ ಲಕ್ಷಣವಿಲ್ಲದಿದ್ದರೂ ಕೋವಿಡ್–19 ಪಾಸಿಟಿವ್ ಬಂದವರಿಗೆ ಈ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುವುದು. ಲಕ್ಷಣಗಳಿರುವ ಹಾಗೂ ಗಂಭೀರ ಸ್ಥಿತಿ ಇರುವವರನ್ನು ಮಾತ್ರ ಬಿಮ್ಸ್‌ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಲಾಗಿದೆ. ರೋಗ ಲಕ್ಷಣ ಇಲ್ಲದವರಿಗೆ ಆಯಾ ಭಾಗದಲ್ಲೇ ಶುಶ್ರೂಷೆ ದೊರೆಯುವಂತೆ ಆಗಬೇಕು ಎನ್ನುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ವಸತಿ ಶಾಲೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕೊರೊನಾ ಸೋಂಕು ಪಸರಿಸದಂತೆ ತಡೆಯುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಡಿಎಚ್‌ಒ ಡಾ.ಶಶಿಕಾಂತ ವಿ.ಮುನ್ಯಾಳ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದು ಹೆಚ್ಚುವರಿ ವ್ಯವಸ್ಥೆಯಾಗಿದೆ. ಎಲ್ಲ ತಾಲ್ಲೂಕುಗಳಲ್ಲೂ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕೇಂದ್ರಗಳಲ್ಲಿ ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿ, ‘ಡಿ’ ಗ್ರೂಪ್ ನೌಕರರನ್ನು ನಿಯೋಜಿಸಲಾಗುವುದು. ಪಿಪಿಇ ಕಿಟ್‌ಗಳು ಸೇರಿದಂತೆ ಅಗತ್ಯ ಪರಿಕರಗಳು, ಔಷಧಿಗಳು ಮೊದಲಾದ ವ್ಯವಸ್ಥೆಗಳನ್ನು ಮಾಡಲಾಗುವುದು. ಇದಲ್ಲದೇ, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಪ್ರತ್ಯೇಕವಾಗಿ ಹಾಸಿಗೆಗಳನ್ನು ಸಜ್ಜುಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.