ADVERTISEMENT

‘ಆರತಿ’ ಕಲ್ಯಾಣಕ್ಕೆ ಗಣ್ಯರ ಹಾರೈಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2019, 15:22 IST
Last Updated 25 ಮೇ 2019, 15:22 IST
ಬೆಳಗಾವಿಯಲ್ಲಿ ನಡೆದ ಆರತಿ–ಶ್ರೀನಿವಾಸ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿದ್ದರು
ಬೆಳಗಾವಿಯಲ್ಲಿ ನಡೆದ ಆರತಿ–ಶ್ರೀನಿವಾಸ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿದ್ದರು   

ಬೆಳಗಾವಿ: ಇಲ್ಲಿನ ಗಂಗಮ್ಮ ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದಲ್ಲಿ ಶನಿವಾರ ನಡೆದ ಅಪರೂಪದ ಕಾರ್ಯಕ್ರಮ ಗಮನಸೆಳೆಯಿತು. ವಿವೇಕಾನಂದ ಪ್ರತಿಷ್ಠಾನದವರು ನಡಸುತ್ತಿರುವ ಈ ಕೇಂದ್ರದಲ್ಲಿದ್ದ ಯುವತಿಯ ಮದುವೆಯ ಆರತಕ್ಷತೆ ಕಾರ್ಯಕ್ರಮ ಭಾವನಾತ್ಮಕ ಸನ್ನಿವೇಶಗಳನ್ನು ಸೃಷ್ಟಿಸಿತು.

20 ವರ್ಷಗಳ ಹಿಂದೆ ಸಂಸ್ಥೆಗ ಸಿಕ್ಕ ‘ಆರತಿ’ ನವ ವಧುವಾಗಿ ಸಂಭ್ರಮದಲ್ಲಿದ್ದರು. ಶ್ರೀನಿವಾಸ ದೇಶಪಾಂಡೆ ಎಂಬ ಸಾಫ್ಟ್‌ವೇರ್‌ ಉದ್ಯೋಗಿಯೊಂದಿಗೆ ಮೇ 21ರಂದು ಧಾರವಾಡದಲ್ಲಿ ಸಪ್ತಪದಿ ತುಳಿದಿದ್ದ ಅವರು, ಆರತಕ್ಷತೆಯಲ್ಲಿ ಸಮಾಜದ ಹಲವು ಕ್ಷೇತ್ರಗಳ ಗಣ್ಯರ ಆಶೀರ್ವಾದ ಪಡೆದರು.

ಸರ್ಕಾರದಿಂದ ಮಾನ್ಯತೆ ಪಡೆದ ಈ ಕೇಂದ್ರದಲ್ಲಿ ಅನಾಥ ಮಕ್ಕಳನ್ನು ಸಾಕಿ–ಸಲುಹಿ ಶಿಕ್ಷಣ ನೀಡುತ್ತಾರೆ. ವಯಸ್ಕರಾದ ನಂತರ ಮದುವೆಯನ್ನೂ ಮಾಡಿಕೊಡುತ್ತಾರೆ. ‘ಮಕ್ಕಳನ್ನು ಸಾಕಿ, ಶಿಕ್ಷಣ ಕೊಡಲಾಗುತ್ತದೆ. ಇಲ್ಲಿನ ಮಕ್ಕಳನ್ನು ದತ್ತು ಪಡೆಯುವವರೂ ಇದ್ದಾರೆ’ ಎಂದು ಟ್ರಸ್ಟಿ ವಿಜಯಕುಮಾರ ಕುಚನೂರೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ADVERTISEMENT

‘ಇಲ್ಲಿ ಬೆಳೆದವರಿಗೆ ಉದ್ಯೋಗ ಕೊಡಿಸುವುದು, ಮದುವೆ ಮಾಡಿ ಕೊಟ್ಟು ಜೀವನ ಗಟ್ಟಿಗೊಳಿಸುವ ಜವಾಬ್ದಾರಿಯೂ ನಮ್ಮದೇ. ಮಕ್ಕಳ ಆರೋಗ್ಯದ ಕಾಳಜಿಯನ್ನು ಕೆಎಲ್‌ಇ ಆಸ್ಪತ್ರೆ ನಿರ್ವಹಿಸುತ್ತಿದೆ’ ಎಂದು ಹೇಳಿದರು.

ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ವಿಧಾನಪರಿಷತ್ ವಿರೋಧಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್, ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ, ಆರ್‌ಸಿಯು ಕುಲಸಚಿವ ಪ್ರೊ.ಸಿದ್ದು ಆಲಗೂರ, ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡರ, ರೈತ ಪರ ಹೋರಾಟಗಾರ ಕಲ್ಯಾಣರಾವ ಮುಚಳಂಬಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.