ADVERTISEMENT

ಅಖಿಲ ಭಾರತ ಸಹಕಾರ ಸಪ್ತಾಹ ನ.18ರಂದು

‘ನಂದಿನಿ’ಯ ವಿವಿಧ ಉತ್ಪನ್ನಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 7:58 IST
Last Updated 17 ನವೆಂಬರ್ 2020, 7:58 IST

ಬೆಳಗಾವಿ: ಇಲ್ಲಿನ ಮಹಾಂತೇಶ ನಗರದ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಡೇರಿ ಆವರಣದಲ್ಲಿ ನ.18ರಂದು ಮಧ್ಯಾಹ್ನ 12ಕ್ಕೆ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌), ರಾಜ್ಯ ಸಹಕಾರ ಮಹಾಮಂಡಳ, ಸಕ್ಕರೆ ಮಹಾಮಂಡಳ, ಸಹಕಾರ ರೇಷ್ಮೆ ಮಹಾಮಂಡಳ, ಕುರಿ ಹಾಗೂ ಮೇಕೆ ಸಾಕಾಣಿಕೆದಾರರ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಬೆಮುಲ್), ಡಿಸಿಸಿ ಬ್ಯಾಂಕ್, ಜಿಲ್ಲಾ ಸಹಕಾರ ಒಕ್ಕೂಟ, ವಿವಿಧ ಸಹಕಾರ ಸಂಘಗಳು, ಸೌಹಾರ್ದ ಸಹಕಾರಿಗಳು ಮತ್ತು ಸಹಕಾರ ಇಲಾಖೆ ಸಹಯೋಗದಲ್ಲಿ ಸಮಾರಂಭ ಆಯೋಜಿಸಲಾಗಿದೆ.

‘ವ್ಯವಹಾರ, ಉದ್ಯೋಗ ಕಳೆದುಕೊಂಡವರು, ಬಾಧಿತರು ಮತ್ತೆ ಉದ್ಯೋಗಸ್ಥರಾಗಲು ಕೌಶಲ ಅಭಿವೃದ್ಧಿ’ ವಿಷಯದ ಮೇಲೆ ಸಮಾರಂಭ ನಡೆಯುತ್ತಿದೆ. ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ‘ಕ್ಷೀರಸಾಗರ’ ವಿಶೇಷ ಸಂಚಿಕೆ ಬಿಡುಗಡೆ ಮಾಡುವರು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸಹಕಾರ ಧ್ವಜಾರೋಹಣ ನೆರವೇರಿಸುವರು ಹಾಗೂ ‘ನಂದಿನಿ’ ಹಾಲಿನ ಉತ್ಪನ್ನಗಳನ್ನು ಬಿಡುಗಡೆ ಮಾಡುವರು. ಪಶುಸಂಗೋಪನಾ ಸಚಿವ ಪ್ರಭು ಡಿ. ಚವಾಣ್ ಸಾಧಕರನ್ನು ಸತ್ಕರಿಸುವರು. ಅರಭಾವಿ ಶಾಸಕರೂ ಆಗಿರುವ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು.

ADVERTISEMENT

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಶಶಿಕಲಾ ಜೊಲ್ಲೆ ‘ಕ್ಷೀರಸಂಜೀವಿನಿ’ ಉದ್ಘಾಟಿಸುವರು. ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಸಾಮಾನ್ಯ ಸೇವಾ ಕೇಂದ್ರಗಳಿಗೆ ಜವಳಿ ಸಚಿವ ಶ್ರೀಮಂತ ಪಾಟೀಲ ಚಾಲನೆ ನೀಡುವರು. ವಿಧಾನಪರಿಷತ್ ಸದಸ್ಯ ಮತ್ತು ಬೆಮುಲ್‌ ಅಧ್ಯಕ್ಷ ವಿವೇಕರಾವ ಪಾಟೀಲ ರಾಸುಗಳ ವಿಮಾ ಪಾಲಿಸಿ ವಿತರಿಸುವರು. ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ ಹಾಗೂ ಜನಪ್ರತಿನಿಧಿಗಳು, ಹಿರಿಯ ಸಹಕಾರಿಗಳು ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.