ಬೆಳಗಾವಿ: ‘ಮೂಡಲಗಿ ತಾಲ್ಲೂಕಿನ ನಾಗನೂರ ಗ್ರಾಮದಲ್ಲಿ ತಮ್ಮ ಜಮೀನು ಅತಿಕ್ರಮಣ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಅಸಭ್ಯವಾಗಿ ವರ್ತಿಸಿ, ನಮ್ಮ ಮೇಲೆ ಕುಡಗೋಲಿನಿಂದ ಹಲ್ಲೆ ಮಾಡಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ನಮಗೆ ನ್ಯಾಯ ಕೊಡಿಸಿ. ಇಲ್ಲದಿದ್ದರೆ ದಯಾಮರಣಕ್ಕೆ ಅವಕಾಶ ಕೊಡಿ’ ಎಂದು ಕುಟುಂಬವೊಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದೆ.
ಈ ಬಗ್ಗೆ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ‘ಸವಿತಾ ನಾಗಪ್ಪ ಯಡ್ರಾವಿ ಮತ್ತು ಅವರ ಕುಟುಂಬದವರು ಹೊಂದಿದ ಜಮೀನಿನ ಒಂದು ಭಾಗದಲ್ಲಿ ಬಹಳ ಹಿಂದೆಯೇ ದೇವಸ್ಥಾನ ನಿರ್ಮಿಸಲಾಗಿದೆ. ಶಿವಾಜಿ ಯಡ್ರಾವಿ ಮತ್ತು ಇತರ 24 ಜನರು ದೇವಸ್ಥಾನದ ಸಂಪರ್ಕ ರಸ್ತೆಗಾಗಿ ಒಂದಿಷ್ಟು ಭೂಮಿ ನೀಡುವಂತೆ ಒತ್ತಾಯಿಸಿ, ತಮ್ಮ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ. ಆದರೆ, ಸ್ಥಳೀಯ ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಿಲ್ಲ. ತಮಗೆ ನ್ಯಾಯ ಒದಗಿಸಬೇಕು ಅಥವಾ ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಸವಿತಾ ಕುಟುಂಬದವರು ಒತ್ತಾಯಿಸಿದ್ದಾರೆ’ ಎಂದು ತಿಳಿಸಿದರು.
‘ಈ ಪ್ರಕರಣದ ವಿಚಾರವಾಗಿ ಮೂಡಲಗಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಜಮೀನುಗಳ ಸಮೀಕ್ಷೆ ನಡೆಸುವಂತೆ ತಹಶೀಲ್ದಾರ್ ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದಿದ್ದು, ಸಾಕ್ಷ್ಯ ಪರಿಶೀಲಿಸುತ್ತಿದ್ದೇವೆ. ಅಗತ್ಯಬಿದ್ದರೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಅಂಶಗಳ ಪ್ರಕಾರ ಆರೋಪಿಗಳನ್ನು ಬಂಧಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.