ADVERTISEMENT

ಮಕ್ಕಳು‌ ಹೂ‌ ಕಿತ್ತ ಕಾರಣಕ್ಕೆ ಅಂಗನವಾಡಿ‌ ಸಹಾಯಕಿ ಮೂಗು ಕತ್ತರಿಸಿದ ಮನೆ ಮಾಲೀಕ!

​ಪ್ರಜಾವಾಣಿ ವಾರ್ತೆ
Published 3 ಜನವರಿ 2024, 4:55 IST
Last Updated 3 ಜನವರಿ 2024, 4:55 IST
<div class="paragraphs"><p>ಬೆಳಗಾವಿಯ ವಿಜಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಗನವಾಡಿ‌ ಸಹಾಯಕಿ ಸುಗಂಧಾ ಮೋರೆ</p></div>

ಬೆಳಗಾವಿಯ ವಿಜಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಗನವಾಡಿ‌ ಸಹಾಯಕಿ ಸುಗಂಧಾ ಮೋರೆ

   

ಬೆಳಗಾವಿ: ತಾಲ್ಲೂಕಿನ ಬಸುರ್ತೆ ಗ್ರಾಮದಲ್ಲಿ ಸೋಮವಾರ ಅಂಗನವಾಡಿಯ ಮಕ್ಕಳು ಮನೆಯ ಅಂಗಳದಲ್ಲಿನ‌ ಹೂ ಕಿತ್ತರು ಎಂಬ ಕಾರಣಕ್ಕೆ ಮನೆಯ ಮಾಲೀಕ ಅಂಗನವಾಡಿ‌ ಸಹಾಯಕಿಯ ಮೂಗನ್ನೇ ಕತ್ತರಿಸಿದ್ದಾನೆ.

ಅಂಗನವಾಡಿ‌ ಸಹಾಯಕಿ‌ ಸುಗಂಧಾ ಮೋರೆ (50) ಕುಡಗೋಲಿನಿಂದ ಹಲ್ಲೆಗೆ ಒಳಗಾದವರು. ಇದೇ ಗ್ರಾಮದ ಕಲ್ಯಾಣಿ ಮೋರೆ ಎಂಬಾತ ಆರೋಪಿ. ಘಟನೆ ಸೋಮವಾರ (ಜನವರಿ 1) ನಡೆದಿದ್ದರೂ ಪೊಲೀಸರು‌ ಇನ್ನೂ ಅರೋಪಿಗಳನ್ನು‌ ಬಂಧಿಸಿಲ್ಲ ಎಂದು ಸಂತ್ರಸ್ತೆ ಕುಟುಂಬದವರು ದೂರಿದ್ದಾರೆ.

ADVERTISEMENT

ಸಹಾಯಕ್ಕಾಗಿ ಸಂತ್ರಸ್ತೆಯ ಕುಟುಂಬದವರು‌ ಮಾಧ್ಯಮಗಳಿಗೆ ಮಾಹಿತಿ‌ ನೀಡಿದ‌ ಮೇಲೆಯೇ ವಿಷಯ ಬಹಿರಂಗವಾಗಿದೆ.

ಮೂಗು ಬಹುಪಾಲು‌ ಭಾಗ ಕತ್ತರಿಸಿದ್ದರಿಂದ ಮಹಿಳೆಯ ಶ್ವಾಸಕೋಶಕ್ಕೆ‌ ರಕ್ತ‌ ಹೋಗಿದ್ದು, ಅವರು ಸಾವು -ಬದುಕಿನ ಮಧ್ಯೆ‌ ಹೋರಾಡುತ್ತಿದ್ದಾರೆ. ವಿಜಯ ಆಸ್ಪತ್ರೆಯಲ್ಲಿ‌ ಚಿಕಿತ್ಸೆ‌ ನೀಡಲಾಗುತ್ತಿದೆ ಎಂದು ಕುಟುಂಬದವರು‌ ತಿಳಿಸಿದ್ದಾರೆ.

ಸೋಮವಾರ ಅಂಗನವಾಡಿ‌ ಮಕ್ಕಳು‌ ಆಟವಾಡುತ್ತ ಹೋಗಿ ಪಕ್ಕದ‌ ಮನೆಯ ಆವರಣದಲ್ಲಿ ಬೆಳೆದಿದ್ದ ಕೆಳವು‌ ಹೂಗಳನ್ನು ಕಿತ್ತುಕೊಂಡರು. ಇದರಿಂದ ಕೋಪಗೊಂಡ ಮನೆಯ ಮಾಲೀಕ ಕಲ್ಯಾಣಿ ಮಕ್ಕಳನ್ನು‌ ಹೊಡೆಯಲು ಬಂದ. ಮಧ್ಯೆ ಪ್ರವೇಶಿಸಿದ ಅಂಗವಾಡಿ‌ ಸಹಾಯಕಿ ಸುಗಂಧಾ ಅವರು‌ ಮಕ್ಕಳನ್ನು ಹೊಡೆಯದಂತೆ ತಕರಾರು‌ ಮಾಡಿದರು.

ಕುಡಗೋಲು‌ ತೆಗೆದುಕೊಂಡು ಬಂದ ಆರೋಪಿ ಕಲ್ಯಾಣಿ ಏಕಾಏಕಿ‌ ಸುಗಂಧಾ ಅವರ ಮೇಲೆ ದಾಳಿ‌ ಮಾಡಿ ಅವರ‌ ಮೂಗು ಕತ್ತರಿಸಿದ ಎಂದು‌ ಮಂಗಳವಾರ ಪೊಲೀಸರಿಗೆ ದೂರು‌ ನೀಡಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯಲ್ಲಿ ಮುಂದುವರಿದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ

ಬೆಳಗಾವಿ‌ ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು‌ ಒಂದಾದ ಮೇಲೆ ಒಂದು ಬೆಳಕಿಗೆ ಬರುತ್ತಲೇ‌ ಇವೆ.

ನವೆಂಬರ್ 21ರಂದು ಬೈಲಹೊಂಗಲ ‌ತಾಲ್ಲೂಕಿನ ತಿಗಡಿ ಗ್ರಾಮದಲ್ಲಿ ಮಹಿಳೆಯನ್ನು ಆಸ್ತಿ‌ ವಿವಾದದಲ್ಲಿ ಮಹಿಳೆ ಅರೆಬೆತ್ತಲೆ ಮಾಡಿ ಹಲ್ಲೆ ಮಾಡಲಾಯಿತು. ಡಿ.11ರಂದು‌ ಹೊಸ ವಂಟಮೂರಿಯಲ್ಲಿ ಪ್ರೇಮ ಪ್ರಕರಣದಲ್ಲಿ ಯುವಕನ ತಾಯಿ ಬೆತ್ತಲೆಗೊಳಿಸಿ ಹಲ್ಲೆ ಮಾಡಲಾಯಿತು. ಇದಕ್ಕೂ ಮುನ್ನ‌ ಗೋಕಾಕದಲ್ಲಿ ವೇಶ್ಯಾವಾಟಿಕೆ ಅರೋಪದಡಿ ಮಹಿಳೆಯೊಬ್ಬರ ಸೀರೆ ಬಿಚ್ಚಿ ಹಲ್ಲೆ ಮಾಡಲಾಗಿತ್ತು. ಈದೀಗ ಅಂಗನವಾಡಿ‌ ಸಹಾಯಕಿಯ ಮೂಗನ್ನೇ ಕತ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.