ಬೆಳಗಾವಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ. ‘ವೈದ್ಯರ ನಿರ್ಲಕ್ಷ್ಯವೇ ಘಟನೆಗೆ ಕಾರಣ’ ಎಂಬ ಆರೋಪ ಪಾಲಕರಿಂದ ಕೇಳಿಬಂದಿದೆ.
ಹುಕ್ಕೇರಿ ತಾಲ್ಲೂಕಿನ ಗೌಡವಾಡ ಗ್ರಾಮದ ವೈಶಾಲಿ ಕೊಟಬಾಗಿ ಮೃತ ಮಹಿಳೆ.
'ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಗೆ ವೈಶಾಲಿ ಅವರನ್ನು ಶನಿವಾರ ದಾಖಲಿಸಿದ್ದೆವು. ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿದ್ದು, ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಭಾನುವಾರ ಬೆಳಿಗ್ಗೆ 7 ಗಂಟೆಯವರೆಗೆ ಆರೋಗ್ಯ ಸ್ಥಿರವಾಗಿತ್ತು. ನಂತರ ಎದೆನೋವು ಕಾಣಿಸಿಕೊಂಡಿತು. ಸಕಾಲಕ್ಕೆ ವೈದ್ಯರು ಚಿಕಿತ್ಸೆ ನೀಡಲು ಬರಲಿಲ್ಲ. ತುರ್ತು ನಿಗಾ ಘಟಕಕ್ಕೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು' ಎಂದು ಅತ್ತೆ ಈರವ್ವ ಆರೋಪಿಸಿದರು.
'ಭಾನುವಾರ ಬೆಳಿಗ್ಗೆಯವರೆಗೂ ವೈಶಾಲಿ ಆರೋಗ್ಯ ಸ್ಥಿರವಾಗಿತ್ತು. ಎದೆನೋವು ಬಂದ ತಕ್ಷಣ, ವೈದ್ಯರು ಚಿಕಿತ್ಸೆ ಕೊಟ್ಟಿದ್ದಾರೆ. ಬಾಣಂತಿ ಜೀವ ಉಳಿಸಲು ಪ್ರಯತ್ನಿಸಿದ್ದಾರೆ. ಆದರೆ, ಹೃದಯ ಸಂಬಂಧಿ ಸಮಸ್ಯೆಯಿಂದ ಅವರು ಮೃತಪಟ್ಟಿದ್ದಾರೆ' ಎಂದು ಬಿಮ್ಸ್ ನಿರ್ದೇಶಕ ಡಾ.ಅಶೋಕಕುಮಾರ ಶೆಟ್ಟಿ ಹೇಳಿದರು.
'ರೋಗಿಗಳ ಕುಟುಂಬದವರು ಮಾಡಿದ ಆರೋಪದ ಕುರಿತಾಗಿ ತನಿಖೆಗೆ ಆದೇಶಿಸಿದ್ದೇನೆ. ವೈದ್ಯರು ತಪ್ಪು ಎಸಗಿರುವುದು ಸಾಬೀತಾದರೆ, ಶಿಸ್ತು ಕ್ರಮ ಜರುಗಿಸಲಾಗುವುದು' ಎಂದರು.
ಎಪಿಎಂಸಿ ಠಾಣೆ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಪರಿಶೀಲಿಸಿದರು. ಎರಡು ದಿನಗಳ ಹಿಂದಷ್ಟೇ ವೈಶಾಲಿ ಸಂಭ್ರಮದಿಂದ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಈಗ ಸಾವನ್ನಪ್ಪಿದ್ದರಿಂದ ಅವರ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.