
ಸಂಕೇಶ್ವರ: ಉತ್ತರ ಕರ್ನಾಟಕದಿಂದ ಕಲಾವಿದರು ಹೆಚ್ಚಿನ ಪ್ರಮಾಣದಲ್ಲಿ ಹೊರಹೊಮ್ಮಲು, ಸೂಕ್ತ ಸಮಯದಲ್ಲಿ ಅಗತ್ಯವಾದ ಪ್ರೋತ್ಸಾಹ ಮತ್ತು ಶಾಲಾ ಶಿಕ್ಷಣದಲ್ಲಿ ಕಲೆಯನ್ನು ಪಠ್ಯಕ್ರಮದ ಅವಿಭಾಜ್ಯ ಅಂಗವಾಗಿ ಸೇರಿಸುವ ಅಗತ್ಯವಿದೆ ಎಂದು ವಿದುಷಿ. ದೀಕ್ಷಾ ಭಿಸೆ ಹೇಳಿದರು.
ಅವರು ಬುಧವಾರ ಇಲ್ಲಿನ ಬ್ರಿಲಿಯಂಟ್ ಸಿಬಿಎಸ್ಇ ಶಾಲೆಯಲ್ಲಿ ಆಯೋಜಿಸಿದ್ದ ‘ಯುಗಾರಂಭ’ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಧೇಶಿಸಿ ಮಾತನಾಡಿದರು.
ಶಿಕ್ಷಣ ವ್ಯವಸ್ಥೆ ಕೇವಲ ಅಂಕಗಳು ಮತ್ತು ಉದ್ಯೋಗ ಗಳಿಕೆಗೆ ಮಾತ್ರ ಸೀಮಿತವಾಗದೆ, ಕಲೆಯನ್ನು ಕೂಡ ಸಮಾನ ಮಹತ್ವದ ವಿಷಯವಾಗಿ ಪರಿಗಣಿಸಬೇಕು. ಬಾಲ್ಯದಿಂದಲೇ ಕಲೆಗೆ ಸೂಕ್ತ ವೇದಿಕೆ ಮತ್ತು ಮಾರ್ಗದರ್ಶನ ದೊರಕಿದಲ್ಲಿ ಮಾತ್ರ ನಿಜವಾದ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಿದ್ದು, ಬ್ರಿಲಿಯಂಟ್ ಸಿಬಿಎಸ್‌ಇ ಶಾಲೆ ಆ ದಿಸೆಯಲ್ಲಿ ಗಮನಾರ್ಹ ಕೊಡುಗೆ ನೀಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಶ್ರೀ ಸಿದ್ದೇಶ್ವರ ಸುಕ್ಷೇತ್ರ, ಕಾರಿಮಠದ ಗುರುಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಶಿಸ್ತು, ಸಂಸ್ಕಾರ ಬೆಳೆಸುವುದರೊಂದಿಗೆ ಗುಣಾತ್ಮಕ ಸಮಗ್ರ ಶಿಕ್ಷಣದಿಂದ ಭವಿಷ್ಯದ ನಾಗರಿಕರನ್ನು ನಿರ್ಮಾಣ ಮಾಡುವಲ್ಲಿ ಶಾಲೆಗಳ ಪಾತ್ರ ಹಿರಿದಾದುದು. ತರಗತಿಯಲ್ಲಿಯೇ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಗೊಳ್ಳುವುದರಿಂದ ಬ್ರಿಲಿಯಂಟ್ ಸಿಬಿಎಸ್‌ಇ ಶಾಲೆ ಪಠ್ಯಕ್ರಮದ ಜೊತೆಗೆ ಅನೇಕ ರಚನಾತ್ಮಕ ಚಟುವಟಿಕೆಗಳಿಂದ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿರುವುದು ಶ್ಲಾಘನೀಯ. ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಅಧ್ಯಕ್ಷ ಪವನ ಕಣಗಲಿ ಅವರು ಮಾತನಾಡಿ, ಸರಳ ಮತ್ತು ಪಾರದರ್ಶಕ ಶುಲ್ಕ ವ್ಯವಸ್ಥೆಯ ಮೂಲಕ ಪಾಲಕರ ವಿಶ್ವಾಸ ಗಳಿಸಿದ್ದು, ತರಗತಿಗೆ 25 ವಿದ್ಯಾರ್ಥಿಗಳ ಮಿತಿಯನ್ನು ಅಳವಡಿಸುವ ಮೂಲಕ ವಿದ್ಯಾರ್ಥಿ ಸ್ನೇಹಿ ಹಾಗೂ ಪರಿಣಾಮಕಾರಿ ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ಶೈಕ್ಷಣಿಕ ಗುಣಮಟ್ಟವನ್ನು ಸಾಧಿಸಲು ಸಾಧ್ಯವಾಗಿದ್ದು, ಯುಗಾರಂಭ ಸಾಂಸ್ಕೃತಿಕ ಪ್ರತಿಭೆಗಳಿಗಾಗಿ ಒದಗಿಸಿರುವ ವೇದಿಕೆಯಾಗಿದೆ ಎಂದರು.
ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶಿಸಲ್ಪಟ್ಟವು. ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ ಕುರಿತ ಕಿರು ನಾಟಕ, ಉತ್ತರದ ಹರ್ಷವರ್ಧನನ ವಿರುದ್ಧ ಪುಲಿಕೇಶಿ ಸಾಧಿಸಿದ ವಿಜಯಯಾತ್ರೆಯ ವೈಭವವನ್ನು ಪ್ರತಿಬಿಂಬಿಸಿತು. ವಿದುಷಿ. ದೀಕ್ಷಾ ಮತ್ತು ಅವರ ಸ್ವಯಂಭು ತಂಡ ಪ್ರಸ್ತುತಪಡಿಸಿದ ಪುಣ್ಯಕೋಟಿ ನೃತ್ಯ ಪ್ರಸ್ತುತಿ ಪ್ರೇಕ್ಷಕರ ಮನಸೂರೆಗೊಂಡಿತು.
ಪ್ರಾಚಾರ್ಯೆ ನಸೀಮಾ ಢಾಂಗೆ ಸ್ವಾಗತಿಸಿದರು 93.5 ರೆಡ್ ಎಫ್‌ಎಂ ರೇಡಿಯೋ ಜಾಕಿ ಮಾಧುರಿ ನಾಯಕ, ಶಿಕ್ಷಕಿ ಉಮಾ ಆಲೂರಿ ನಿರೂಪಿಸಿದರು. ವಿದ್ಯಾರ್ಥಿನಿ ಮೀನಾಕ್ಷಿ ಗೌಡರ ವಂದಿಸಿದರು.
ಕಾರ್ಯಕ್ರಮದಲ್ಲಿ ರೇಣುಕಾ ಶುಗರ್ಸ್ ಡೆವಲೆಪ್‌ಮೆಂಟ್ ಫೌಂಡೇಷನ್‌ನ ಜನರಲ್ ಮ್ಯಾನೇಜರ್ ಬಾಬುರಾವ ಮಲಗೌಡನ್ನವರ, ಸಂಕೇಶ್ವರ ಸಿಎಚ್‌ಸಿ ಹಿರಿಯ ವೈದ್ಯಾಧಿಕಾರಿ ಡಾ. ಪೂರ್ಣಿಮಾ ತಲ್ಲೂರ, ಶಿವಾನಂದ ಸಂಸುದ್ದಿ, ಪ್ರಕಾಶ ಕಣಗಲಿ, ರಾಜು ಗಡಕರಿ, ಸಂತೋಷ ಪಾಟೀಲ, ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಅಬ್ದುಲ ಮಕಾನದಾರ, ನಿರ್ದೇಶಕರಾದ ಸಂಜಯ ಶಿರಕೋಳಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಇರ್ಷಾದ ಮುಲ್ಲಾ, ಮಾರ್ತಂಡ ಗೋಟೂರಿ, ಪ್ರಶಾಂತ ಗಡಕರಿ, ವಿಜಯ ಹಂದಿಗೂಡಮಠ, ಕಾರ್ಯದರ್ಶಿ ಸುಮಲತಾ ಕಣಗಲಿ, ಶಿವಪುತ್ರ ಬಿದ್ರೊಳ್ಳಿ, ಡಾ. ಸಂತೋಷ ಹಿರೇಮಠ, ಆಡಳಿತಾಧಿಕಾರಿ ವಿ.ಎಸ್. ಹಾಲದೇವರಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.