ADVERTISEMENT

ಅರುಣ್‌ ಸಿಂಗ್‌ಗೆ ದೇಶದ ಇತಿಹಾಸ ಗೊತ್ತಿಲ್ಲ: ಸತೀಶ ಜಾರಕಿಹೊಳಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 10:27 IST
Last Updated 11 ಏಪ್ರಿಲ್ 2021, 10:27 IST
ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ
ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ   

ಬೆಳಗಾವಿ: ‘ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಭಾರತದ ಇತಿಹಾಸ ಗೊತ್ತಿಲ್ಲ. ಅವರು ಕರ್ನಾಟಕಕ್ಕೆ ಬರುವ ಮೊದಲು ಬಸವಣ್ಣನ ಇತಿಹಾಸ ತಿಳಿದುಕೊಂಡು ಬರಬೇಕು’ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ತಿರುಗೇಟು ನೀಡಿದರು.

‘ಕಾಂಗ್ರೆಸ್ ಅಭ್ಯರ್ಥಿ ಹಿಂದೂ ವಿರೋಧಿ’ ಎಂಬ ಸಿಂಗ್‌ ಹೇಳಿಕೆಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ‘ಮೌಢ್ಯ ವಿರೋಧಿ ಹೋರಾಟ ಆರಂಭವಾಗಿದ್ದು 6ನೇ ಶತಮಾನದಲ್ಲಿ. ಅದನ್ನು ನಾನು ಆರಂಭ ಮಾಡಿದ್ದಲ್ಲ. ಬಸವಣ್ಣನವರು ಮಾಡಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಬರೆದಿದ್ದಾರೆ. ಅವರ ವಿಚಾರಗಳನ್ನು ನಾವು ಅನುಸರಿಸುತ್ತಿದ್ದೇವೆ. ಜನರಲ್ಲೂ ಜಾಗೃತಿ ಮೂಡಿಸುತ್ತಿದ್ದೇವೆ. ಯಾವುದೇ ಜಾತಿ, ಧರ್ಮದ ವಿರುದ್ಧ ನಾವು ಹೋರಾಡುತ್ತಿಲ್ಲ. ಮೂಢನಂಬಿಕೆಗಳಿಗೆ ಬಲಿಯಾಗಬೇಡಿ ಎಂದು ತಿಳಿಸುತ್ತಿದ್ದೇವೆ. ಇದನ್ನೆಲ್ಲ ಅರಿತು ಅವರು ಮಾತನಾಡಬೇಕು’ ಎಂದು ತಿಳಿಸಿದರು.

‘ಬಿಜೆಪಿಯವರಿಗೆ ಉಪ ಚುನಾವಣೆ ಪ್ರಚಾರದಲ್ಲಿ ಯಾವುದೇ ವಿಷಯಗಳಿಲ್ಲ. ಧರ್ಮ, ಜಾತಿಯೇ ಅವರ ವಿಷಯವಾಗಿವೆ. ಚುನಾವಣೆ ಪ್ರಚಾರಕ್ಕೆ ಬಂದ ಅವರು, ಏನೋ ಹೇಳಬೇಕೆಂದು ಯಾರೋ ಹೇಳಿಕೊಟ್ಟಿದ್ದನ್ನು ಹೇಳಿದ್ದಾರೆ’ ಎಂದು ಕಿಡಿಕಾರಿದರು.

ADVERTISEMENT

ಬಿಜೆಪಿಯಿಂದ ಕೋಮು ಗಲಭೆ

‘ಕೋಮುಗಲಭೆ ಮಾಡುವವರು ಬಿಜೆಪಿಯವರು. ಅವರಿಂದ ಆಗುತ್ತದೆಯೇ ಹೊರತು ಕಾಂಗ್ರೆಸ್‌ನವರಿಂದಲ್ಲ. ಬಿಜೆಪಿಯ ಯಾವುದೇ ನಾಯಕರು, ರಾಷ್ಟ್ರ ನಾಯಕರು ಬಂದರೂ ಫಲಿತಾಂಶ ಬದಲಾಯಿಸಲು ಸಾಧ್ಯವಿಲ್ಲ. ಯಾರಿಗೆ ಮತ ಹಾಕಬೇಕು ಎನ್ನುವುದನ್ನು ಜನರು ಈಗಾಗಲೇ ನಿರ್ಧರಿಸಿದ್ದಾರೆ. ಬೆಳಗಾವಿ ಮತದಾರರ ನಿರ್ಧಾರವನ್ನು ಬದಲಾಯಿಸಲು ಆಗುವುದಿಲ್ಲ’ ಎಂದರು.

‘ಬಿಜೆಪಿ ಸರ್ಕಾರದ ಏಳು ವರ್ಷದ ಆಡಳಿತ ಅವಧಿಯಲ್ಲಿಯೇ ಉಗ್ರರ ದಾಳಿಗಳು ಹೆಚ್ಚಿನ ಪ್ರಮಾಣದಲ್ಲಿ ನಡೆದಿವೆ. ಆದರೆ, ಕಾಂಗ್ರೆಸ್ ಸರ್ಕಾರದಲ್ಲಿ ಇಷ್ಟು ಪ್ರಮಾಣದಲ್ಲಿ ಆಗಿರಲಿಲ್ಲ. ಈಗಿನ ಸರ್ಕಾರದಲ್ಲಿ ಹೆಚ್ಚು ಸೈನಿಕರು ಹುತಾತ್ಮರಾಗಿದ್ದಾರೆ’ ಎಂದು ಹೇಳಿದರು.

ಶಾಸಕ ಗಣೇಶ ಹುಕ್ಕೇರಿ, ಮುಖಂಡರಾದ ಎಚ್.ಎಂ. ರೇವಣ್ಣ, ನಾಗರಾಜ ಯಾದವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.