ಡಾ.ಭೀಮಾಶಂಕರ ಗುಳೇದ
ಬೆಳಗಾವಿ: ಅಥಣಿಯಲ್ಲಿ ಚಿನ್ನಾಭರಣ ಮಾರಾಟ ಮಳಿಗೆಗೆ ಆ.26ರಂದು ದುಷ್ಕರ್ಮಿಗಳು ನುಗ್ಗಿ, ಮಾಲೀಕನಿಗೆ ಪಿಸ್ತೂಲ್ ತೋರಿಸಿ ದರೋಡೆಗೆ ಯತ್ನಿಸಿದ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಇಚಲಕರಂಜಿಯ ವಿಜಯ ಜಾವೀರ, ಸಾಂಗ್ಲಿ ಜಿಲ್ಲೆಯ ಜರಂಡಿಯ ಯಶವಂತ ಗುರವ ಬಂಧಿತರು. ಅವರಿಂದ ಕೃತ್ಯಕ್ಕೆ ಬಳಸಿದ ಎರಡು ಪಿಸ್ತೂಲ್, ಏಳು ಜೀವಂತ ಗುಂಡುಗಳು, ಕಾರು ಮತ್ತು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
‘ಇಬ್ಬರು ದುಷ್ಕರ್ಮಿಗಳು ದರೋಡೆಗೆ ಯತ್ನಿಸಿದ ದೃಶ್ಯಾವಳಿ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನು ಹೊರತುಪಡಿಸಿ ಯಾವ ಸುಳಿವೂ ಇರಲಿಲ್ಲ. ಆದರೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಇಬ್ಬರನ್ನು ಬಂಧಿಸಿದ್ದೇವೆ’ ಎಂದು ಎಸ್‌ಪಿ ಡಾ.ಭೀಮಾಶಂಕರ ಗುಳೇದ ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಈ ಪ್ರಕರಣದಲ್ಲಿ ಸಾಂಗ್ಲಿ ಜಿಲ್ಲೆಯ ಸಾವಳಜದ ಹನಮಂತ ವಾಂಡರೆ, ಸಾಂಗ್ಲಿ ಜಿಲ್ಲೆಯ ಆಸ್ಟಾದ ಭರತ ಕಾಟಕರ, ಸಾತಾರ ಜಿಲ್ಲೆಯ ಪೊಸೇಗಾಂವ–ವೀಸಾಪುರದ ಸೂರಜ್ ಬೂದಾವಲೆ ಪರಾರಿಯಾಗಿದ್ದಾರೆ. ಅವರ ಪತ್ತೆಗೆ ಜಾಲ ಬೀಸಿದ್ದೇವೆ’ ಎಂದು ವಿವರಿಸಿದರು.
‘ಮುಖ್ಯ ಆರೋಪಿ ವಿಜಯ ಮೇಲೆ ಕೊಲೆ, ಡಕಾಯಿತಿ, ಸುಲಿಗೆ ಸೇರಿದಂತೆ 11 ಪ್ರಕರಣಗಳಿವೆ. ಉಳಿದವರ ಮೇಲೆ ಬೇರೆ ಬೇರೆ ಪ್ರಕರಣಗಳಿವೆ. ಮಧ್ಯಪ್ರದೇಶದಿಂದ ಕಂಟ್ರಿ ಪಿಸ್ತೂಲ್ ಬಂದಿರುವ ಮಾಹಿತಿ ಇದೆ. ಕಂಟ್ರಿ ಪಿಸ್ತೂಲ್ ಹೇಗೆ ಬರುತ್ತಿವೆ ಎಂದು ತನಿಖೆ ನಡೆಸುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.