ADVERTISEMENT

ಬೆಳಗಾವಿ: ಬಟ್ಟೆ ಬ್ಯಾಗ್‌ ವಿತರಿಸಿ ‘ಜಾಗೃತಿ’

ನಗರಪಾಲಿಕೆಯಿಂದ ಕಾರ್ಯಕ್ರಮ; ಕಂಪನಿಗಳ ಸಹಕಾರ

ಎಂ.ಮಹೇಶ
Published 30 ಸೆಪ್ಟೆಂಬರ್ 2019, 19:30 IST
Last Updated 30 ಸೆಪ್ಟೆಂಬರ್ 2019, 19:30 IST
ಬೆಳಗಾವಿಯಲ್ಲಿ ನಗರಪಾಲಿಕೆ ನೇತೃತ್ವದಲ್ಲಿ ಈಚೆಗೆ ಸಾರ್ವಜನಿಕರಿಂದ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳನ್ನು ಪಡೆದು ಬಟ್ಟೆ ಬ್ಯಾಗ್‌ಗಳನ್ನು ನೀಡಲಾಯಿತು
ಬೆಳಗಾವಿಯಲ್ಲಿ ನಗರಪಾಲಿಕೆ ನೇತೃತ್ವದಲ್ಲಿ ಈಚೆಗೆ ಸಾರ್ವಜನಿಕರಿಂದ ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳನ್ನು ಪಡೆದು ಬಟ್ಟೆ ಬ್ಯಾಗ್‌ಗಳನ್ನು ನೀಡಲಾಯಿತು   

ಬೆಳಗಾವಿ: ನಿಷೇಧಿತ ಗುಣಮಟ್ಟದ ಪ್ಲಾಸ್ಟಿಕ್‌ ಪದಾರ್ಥಗಳನ್ನು ಬಳಸುವುದರಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಸಂಘ–ಸಂಸ್ಥೆಗಳು ಕೂಡ ಕೈಜೋಡಿಸಿವೆ.

ನಗರಪಾಲಿಕೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಗರದಲ್ಲಿ ಸ್ವಚ್ಛ ಸರ್ವೇಕ್ಷಣಾ–2020 ಅಡಿಯಲ್ಲಿ ‘ಸ್ವಚ್ಛತಾ ಹಿ ಸೇವಾ’ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದರಲ್ಲಿ ಇಲ್ಲಿನ ಪರಿಸರ ಮಿತ್ರ ಸಂಘದವರು ಸಕ್ರಿಯವಾಗಿ ಭಾಗವಹಿಸಿದ್ದರು. ಅವರಿಗೆ, ವಿವಿಧ ಖಾಸಗಿ ಕಂಪನಿಗಳು ಸಿಎಸ್‌ಆರ್‌ (ಸಾಮಾಜಿಕ ಜವಾಬ್ದಾರಿ) ನಿಧಿಯಲ್ಲಿ ಬಟ್ಟೆ ಬ್ಯಾಗ್‌ಗಳನ್ನು ನೀಡಿ ಸಹಕರಿಸುತ್ತಿವೆ.

‘ಪ್ಲಾಸ್ಟಿಕ್‌ಗೆ ಇಲ್ಲ ಎಂದು ಹೇಳಿ’ ಎಂಬ ಜಾಗೃತಿ ಮೂಡಿಸುವ ಜೊತೆಗೆ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಬಳಸುತ್ತಿದ್ದ ಸಾರ್ವಜನಿಕರಿಗೆ ಬಟ್ಟೆ ಬ್ಯಾಗ್‌ಗಳನ್ನು ಉಚಿತವಾಗಿ ನೀಡಲಾಗಿದೆ. ಸಾಂಕೇತಿಕವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜನರು, ಪರ್ಯಾಯಗಳನ್ನು ಕಂಡುಕೊಳ್ಳಬೇಕು. ಈ ಮೂಲಕ ಪರಿಸರವನ್ನು ಸಂರಕ್ಷಿಸಬೇಕು’ ಎನ್ನುತ್ತಾರೆ ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ಶಶಿಧರ ನಾಡಗೌಡ.

ADVERTISEMENT

ಉತ್ತಮ ಪ್ರತಿಕ್ರಿಯೆ:‘ಗಣಪತಿ ಗಲ್ಲಿ, ನಾಥಪೈ ವೃತ್ತ, ಬಸ್‌ ನಿಲ್ದಾಣದಲ್ಲಿ ಕೌಂಟರ್‌ಗಳನ್ನು ಮಾಡಿದ್ದೆವು. ಗ್ರಾಹಕರಿಂದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ಪಡೆದು ಪರಿಸರ ಸಂರಕ್ಷಣೆಯ ಸಂದೇಶಗಳುಳ್ಳ ಬಟ್ಟೆ ಬ್ಯಾಗ್‌ಗಳನ್ನು ವಿತರಿಸಿದೆವು. ದೊಡ್ಡ ದೊಡ್ಡ ಕಂಪನಿಯವರು ಪ್ರಾಯೋಜಕತ್ವ ನೀಡಲು ಮುಂದೆ ಬರುತ್ತಿದ್ದಾರೆ. ಈ ಜಾಗೃತಿ ಕಾರ್ಯಕ್ರಮ ಮುಂದುವರಿಯಲಿದೆ. ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಪ್ಲಾಸ್ಟಿಕ್‌ ಕೊಟ್ಟು ಬಟ್ಟೆ ಬ್ಯಾಗ್‌ಗಳನ್ನು ತೆಗೆದುಕೊಂಡರು. ಇದೇ ರೀತಿಯ ವಾತಾವರಣ ಮುಂದುವರಿದಲ್ಲಿ ‍ಪ್ಲಾಸ್ಟಿಕ್ ಮೇಲಿನ ಅವಲಂಬನೆ ದೂರಾಗುವುದರಲ್ಲಿ ಸಂಶಯವಿಲ್ಲ’ ಎಂದು ಪರಿಸರ ಮಿತ್ರ ಸಂಘದ ಅಧ್ಯಕ್ಷ ಪ್ರೊ.ಜಿ.ಕೆ. ಖಡಬಡಿ ತಿಳಿಸಿದರು.

‘ಗಾಂಧಿ ಜಯಂತಿಯಂದು ಕೂಡ ಬಟ್ಟೆ ಬ್ಯಾಗ್‌ಗಳನ್ನು ಕೊಡಲಾಗುವುದು. ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತುಗಳನ್ನು ಬಳಸುವಂತೆ ತಿಳಿಸಲಾಗುವುದು. ಶಾಲಾ–ಕಾಲೇಜುಗಳಲ್ಲೂ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಒಂದು ಬಟ್ಟೆ ಬ್ಯಾಗ್‌ ಸಿದ್ಧಪಡಿಸಲು ₹15 ಆಗುತ್ತದೆ. ಅದರಲ್ಲಿ 5 ಕೆ.ಜಿ. ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬಹುದಾಗಿದೆ. ಸ್ಥಳೀಯ ಸಂಸ್ಥೆ ಸಹಯೋಗದಲ್ಲಿ ಈಗಾಗಲೇ 2ಸಾವಿರದಷ್ಟು ಬ್ಯಾಗ್‌ಗಳನ್ನು ವಿತರಿಸಲಾಗಿದೆ’ ಎನ್ನುತ್ತಾರೆ ಅವರು.

ಶಾಲಾ ಮಕ್ಕಳ ಮೂಲಕ:‘ನಿಷೇಧಿತ ಗುಣಮಟ್ಟದ ಪ್ಲಾಸ್ಟಿಕ್‌ ಬಳಕೆ, ಮಾರಾಟಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆಯೂ ಡಿಡಿಪಿಐಗಳಿಗೆ ಇಲಾಖೆಯಿಂದ ನಿರ್ದೇಶನ ನೀಡಲಾಗಿದೆ. ಇಲಾಖೆಯಿಂದಲೂ ಕ್ರಮ ವಹಿಸಲಾಗಿದೆ’ ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿ ಬೆಳಗಾವಿ ಪರಿಸರ ಅಧಿಕಾರಿ ಗೋಪಾಲಕೃಷ್ಣ ಸಣ್ಣತಂಗಿ.

‘ಲೇಕ್‌ವ್ಯೂ ಪ್ರತಿಷ್ಠಾನದಿಂದ 2ಸಾವಿರ ಸಾವಯವ ಬಟ್ಟೆ ಬ್ಯಾಗ್‌ಗಳನ್ನು ಸಿದ್ಧಪಡಿಸಿ ಪಾಲಿಕೆಗೆ ನೀಡಲಾಗಿದೆ. ಈ ಬ್ಯಾಗ್‌ಗಳು ಪರಿಸರ ಸ್ನೇಹಿಯಾಗಿದೆ. ಪರಿಸರಕ್ಕೆ ಪೂರಕವಾದ ಇಂತಹ ಚಟುವಟಿಕೆಗಳಿಗೆ ಸಹಯೋಗ ನೀಡಲಾಗುವುದು. ಭಾನುವಾರ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ‘ಪ್ಲಾಸ್ಟಿಕ್ ಮುಕ್ತ ಸಮಾಜ’ ಸಂದೇಶ ಸಾರಲಾಯಿತು’ ಎಂದು ಪ್ರತಿಷ್ಠಾನದ ಡಾ.ಶಶಿಕಾಂತ ಕುಲಗೋಡು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.