ADVERTISEMENT

ಮುಖ್ಯಮಂತ್ರಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ವಿಶ್ವಾಸವಿದೆ: ಸಚಿವ ಸುಧಾಕರ

ಸಚಿವ ಸಂಪುಟ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 8:38 IST
Last Updated 21 ನವೆಂಬರ್ 2020, 8:38 IST
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ   

ಬೆಳಗಾವಿ: 'ಕೊಟ್ಟ ಮಾತಿನಂತೆ ನಡೆದುಕೊಳ್ಳುವೆ ಎಂದು ಮುಖ್ಯಮಂತ್ರಿ ಹಲವು ಬಾರಿ ಹೇಳಿದ್ದಾರೆ. ಆ ಪ್ರಕಾರ, ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಬಂದಿರುವ ನಮ್ಮ ಮಿತ್ರರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ' ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ ಹೇಳಿದರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಮತ್ತು ಪಕ್ಷದವರು ನಡೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ' ಎಂದು ಪ್ರತಿಕ್ರಿಯಿಸಿದರು.

'ವಿಧಾನಸಭೆ ಉಪ ಚುನಾವಣೆಯಲ್ಲಿ ಸೋತವರು ಈಗಾಗಲೇ ಎಂಎಲ್‌ಸಿಗಳಾಗಿಲ್ವಾ? ಖಂಡಿತವಾಗಿ ಸಚಿವ ಸ್ಥಾನವನ್ನೂ ನೀಡುತ್ತಾರೆ. ರಾಜಕೀಯದಲ್ಲಿ ಮಾತಿನಂತೆ ನಡೆಯುವ ಪ್ರವೃತ್ತಿ ಇಟ್ಟುಕೊಂಡಿದ್ದರೆ ಅದು ಬಿಜೆಪಿಯಲ್ಲಿ ಮಾತ್ರ' ಎಂದರು.

ADVERTISEMENT

'ವಿಧಾನ ಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಗುತ್ತದೆಯೋ, ಇಲ್ಲವೋ ಎಂಬ ಬಗ್ಗೆ ಈಗಲೇ ನಿರ್ಧಾರಕ್ಕೆ ಬರಬೇಕೇಕೆ? ಕಾದು‌ ನೋಡೋಣ' ಎಂದರು.

'ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಆಗುವುದು ಅಪರಾಧವೇ? ರಮೇಶ ಜಾರಕಿಹೊಳಿ ದೆಹಲಿಗೆ ಹೋಗುವುದು ಅಪರೂಪ ಏನಲ್ಲ. ಆಗಾಗ ಹೋಗುತ್ತಲೇ ಇರುತ್ತಾರೆ. ಇಲಾಖೆಯ ಕೆಲಸಗಳು ಮತ್ತು ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಸಚಿವರು ಮೊದಲಾದವರ ಭೇಟಿಗೆ ಹೋಗುತ್ತಿರುತ್ತಾರೆ. ಇದರಲ್ಲಿ ರಾಜಕಾರಣದ ಸಂಗತಿಗಳು ಇರುವುದಿಲ್ಲ' ಎಂದು ಸಮರ್ಥಿಸಿಕೊಂಡರು.

'ಸಂತೋಷ್ ಅವರು ನಮ್ಮ ಪಕ್ಷದ ದೊಡ್ಡ ನಾಯಕ. ಒಬ್ಬ ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಸಚಿವರವರೆಗೂ ಅವರನ್ನು ಭೇಟಿ ಆಗಬೇಕು ಎನ್ನುವ ಆಸೆ ಇರುತ್ತದೆ. ಸಚಿವರು ಇಲಾಖೆಯ ಯೋಜನೆಗಳ ಬಗ್ಗೆ, ಆಡಳಿತದ ಬಗ್ಗೆ ಮಾತನಾಡಿರಬಹುದು. ಸೌಜನ್ಯದ ಭೇಟಿಗೆ ರಾಜಕೀಯದ ಬಣ್ಣ ಬಳಿಯಬಾರದು' ಎಂದರು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.