
ಬೈಲಹೊಂಗಲ: ‘ಮೂರುಸಾವಿರಮಠದ ಗುರು ಪರಂಪರೆಗೆ ಆಗಾಧ ಶಕ್ತಿ ಇದೆ. ಈ ಶಕ್ತಿ ಪೀಠವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಪ್ರಭುನೀಲಕಂಠ ಸ್ವಾಮೀಜಿ ಅವರು ಮಠದ ಭಕ್ತರಿಗಾಗಿ, ಬಡ, ಮಧ್ಯಮ ವರ್ಗದ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಹಾಕಿಕೊಂಡಿರುವ ಮುಂದಿನ ಎಲ್ಲ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವಾ ಯೋಜನೆಗಳು ಯಾವುದೇ ಅಡೆತಡೆ ಇಲ್ಲದೆ ಯಶಸ್ವಿಯಾಗಿ ನೆರವೇರಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಶುಭ ಹಾರೈಸಿದರು.
ನಗರದ ಮೂರುಸಾವಿರಮಠದ ಲಿಂಗೈಕ್ಯ ನೀಲಕಂಠ ಮಹಾ ಶಿವಯೋಗಿಶ್ವರರ ಜಾತ್ರಾ ಮಹೋತ್ಸವ, ಲಿಂಗೈಕ್ಯ ಗಂಗಾಧರ ಸ್ವಾಮೀಜಿ 73ನೇ ಜಯಂತಿ ಮಹೋತ್ಸವ, ಮಹಾ ಶಿವರಾತ್ರಿ ಉತ್ಸವ ಸಮಾರಂಭವನ್ನು ಶನಿವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
‘ಲಿಂಗೈಕ್ಯ ಗಂಗಾಧರ ಸ್ವಾಮೀಜಿ ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಶ್ರೀಮಠದದಿಂದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆ ಮಾಡುತ್ತಿರುವ ಪ್ರಭುನೀಲಕಂಠ ಸ್ವಾಮೀಜಿ ಅವರ ಕೊಡುಗೆ ಸ್ಮರಣೀಯವಾಗಿದೆ. ಕೆಲ ರಾಜಕೀಯ ಶಕ್ತಿಗಳು ಸಮಾಜವನ್ನು ವಿಭಜಿಸುವ ಪ್ರಯತ್ನ ಮಾಡುತ್ತಿರುವುದು ವಿಷಾದಕರ. ಪಾಲಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದರ ಜೊತೆಗೆ ಭಾರತೀಯ ಹಿಂದೂ ಸನಾತನ ಧರ್ಮದ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರ ಕಲಿಸಿಕೊಡಬೇಕು. ಎಲ್ಲರೂ ಒಗ್ಗಟ್ಟಿನಿಂದ ಸ್ವಾಮಿಜಿಗಳ ಆಶೀರ್ವಾದದೊಂದಿಗೆ ಸಮಾಜವನ್ನು ಬಲಪಡಿಸುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸಬೇಕು’ ಎಂದರು.
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ ಕತ್ತಿ ಮಾತನಾಡಿ, ‘ಪಾಲಕರು ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತಬೇಕು. ವಿಶೇಷವಾಗಿ ತಾಯಂದಿರು ಮತ್ತು ಹಿರಿಯರು ಮಕ್ಕಳಿಗೆ ಮಾನವೀಯತೆ, ಗೌರವ, ಶಿಸ್ತಿನ ಪಾಠ ಕಲಿಸಬೇಕು’ ಎಂದರು. ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿದರು.
ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ದ ರಾಜಯೋಗೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುರಗೋಡ ನೀಲಕಂಠ ಸ್ವಾಮೀಜಿ ಅಧ್ಯಕ್ಷತೆವಹಿಸಿದ್ದರು.
ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಮಹಾಂತೇಶ ದೊಡಗೌಡರ, ಉದ್ಯಮಿ ವಿಜಯ ಮೆಟಗುಡ್ಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಸ ಪಾಟೀಲ, ಮಹಾಂತೇಶ ಕವಟಗಿಮಠ, ಮುನವಳ್ಳಿ ಮುರುಗೆಂದ್ರ ಸ್ವಾಮೀಜಿ, ಹೊಸೂರ ಗಂಗಾಧರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಕಮತಗಿ ಹುಚ್ಚೇಶ್ವರ ಸ್ವಾಮೀಜಿ, ಚಿಕಲಪರ್ವಿ ಸದಾಶಿವ ಸ್ವಾಮೀಜಿ, ಸೇರಿದಂತೆ ವಿವಿಧ ಮಠಾಧೀಶರು, ಗಣ್ಯರು ವೇದಿಕೆಯಲ್ಲಿ ಇದ್ದರು.
ಲೇಕ್ ಮ್ಯಾನ ಆಫ್ ಇಂಡಿಯಾ ಆನಂದ ಮಲ್ಲಿಗವಾಡ ಅವರಿಗೆ ನೀಲಕಂಠ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೆ ವೇಳೆ ಶ್ರೀ ಮಠದ ವೆಬ್ ಸೈಟ್ ಗೆ ಚಾಲನೆ ನೀಡಲಾಯಿತು. ಬಿಗ್ ಬಾಸ್ ಸ್ಪರ್ಧಾಳುಗಳು ನೋಡುಗರ ಗಮನ ಸೆಳೆದರು. ನೃತ್ಯ ಕಲಾವಿರಿಂದ ಆಕರ್ಷಕ ನೃತ್ಯ ಕಾರ್ಯಕ್ರಮ ನಡೆಯಿತು.
ಬಸವ ಬುತ್ತಿ ಸೇವೆ ಮಾಡಿದ ಭಕ್ತರು:
ಜಾತ್ರೆ ಅಂಗವಾಗಿ ಮಹಿಳಾ ಭಕ್ತರು ತಮ್ಮ, ತಮ್ಮ ಮನೆಯಲ್ಲಿ ತಯಾರಿಸಿದ ವಿವಿಧ ಖಾದ್ಯಗಳನ್ನು ಬಸವ ಬುತ್ತಿ ಹೆಸರಿನಲ್ಲಿ ತಲೆಮೇಲೆ ಹೊತ್ತು ತಂದು ಶ್ರೀಮಠದ ದಾಸೋಹಕ್ಕೆ ಅರ್ಪಿಸಿದರು. ಮಹಿಳಾ ಮುಖ್ಯಸ್ಥೆ ಮೀನಾಕ್ಷಿ ಕುಡಸೋಮಣ್ಣವರ, ಅನಿತಾ ಹೋಟಿ ಹಾಗೂ ಸಂಗಡಿಗರ ನೇತೃತ್ವದಲ್ಲಿ ಮರಡಿ ಬಸವೇಶ್ವರ ದೇವಸ್ಥಾನದಿಂದ ಶ್ರೀ ಮಠದವರೆಗೆ ಬಸವ ಬುತ್ತಿ ಭವ್ಯ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.