ADVERTISEMENT

ಬೈಲಹೊಂಗಲ | ಪರಿಹಾರ ವಿಳಂಬ: ಎಸಿ ವಾಹನ, ಕಂಪ್ಯೂಟರ್‌ಗಳ ಜಪ್ತಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 1:45 IST
Last Updated 6 ಜನವರಿ 2026, 1:45 IST
ಬೈಲಹೊಂಗಲ ಉಪವಿಭಾಗಾಧಿಕಾರಿ ಕಚೇರಿಯ ವಸ್ತುಗಳನ್ನು ಹಾಗೂ ವಾಹನವನ್ನು ನ್ಯಾಯಾಲಯದ ಅಧಿಕಾರಿಗಳು ಜಪ್ತಿ ಮಾಡಿದರು
ಬೈಲಹೊಂಗಲ ಉಪವಿಭಾಗಾಧಿಕಾರಿ ಕಚೇರಿಯ ವಸ್ತುಗಳನ್ನು ಹಾಗೂ ವಾಹನವನ್ನು ನ್ಯಾಯಾಲಯದ ಅಧಿಕಾರಿಗಳು ಜಪ್ತಿ ಮಾಡಿದರು   

ಬೈಲಹೊಂಗಲ: ಒಳಚರಂಡಿ ಯೋಜನೆ ಹಾಗೂ ನೀರಿನ ಶುದ್ಧೀಕರಣ ಘಟಕ ನಿರ್ಮಾಣ ಯೋಜನೆಗಳ ಅನುಷ್ಠಾನ ಉದ್ದೇಶಕ್ಕಾಗಿ ರೈತರಿಂದ ವಶಪಡಿಸಿಕೊಂಡಿದ್ದ ಭೂಮಿಗೆ ಪರಿಹಾರ ವಿತರಿಸುವಲ್ಲಿ ವಿಳಂಬ ಮಾಡಿದ್ದರಿಂದ ಹಿರಿಯ ದಿವಾಣಿ ನ್ಯಾಯಾಧೀಶರ ಅದೇಶದ ಮೇರೆಗೆ ಉಪವಿಭಾಗಾಧಿಕಾರಿ ಕಚೇರಿಯ ₹ 13 ಲಕ್ಷ ಮೌಲ್ಯದ ವಾಹನ, ₹ 2.60 ಲಕ್ಷ ಮೌಲ್ಯದ ಕಂಪ್ಯೂಟರ್‌ಗಳು ಸೇರಿ ಒಟ್ಟು ₹ 15.60 ಲಕ್ಷ ಮೌಲ್ಯದ ವಸ್ತುಗಳನ್ನು ನ್ಯಾಯಾಲಯದ ಅಧಿಕಾರಿಗಳು ಸೋಮವಾರ ಜಪ್ತಿ ಮಾಡಿದರು.

ಒಳಚರಂಡಿ ಯೋಜನೆ ಹಾಗೂ ನೀರಿನ ಶುದ್ಧೀಕರಣ ಘಟಕ ನಿರ್ಮಾಣ ಯೋಜನೆ ಅನುಷ್ಠಾನಕ್ಕಾಗಿ ರೈತರಾದ ನಬೀಸಾಬ ಬಾಬುಸಾಬ ಬೇಪಾರಿ, ಇಮಾಮಹುಸೇನ ಬಾಬುಸಾಬ ಬೇಪಾರಿ, ಬಸೀರಹ್ಮದ ಬಾಬುಸಾಬ ಬೇಪಾರಿ, ಮೀರಾಸಾಬ ಬಾಬುಸಾಬ ಬೇಪಾರಿ, ಹುಸೇನಸಾಬ ಬಾಬುಸಾಬ ಬೇಪಾರಿ, ಮುನೀರಸಾಬ ಬಾಬುಸಾಬ ಬೇಪಾರಿ, ಲಾಲಸಾಬ ಬಾಬುಸಾಬ ಬೇಪಾರಿ ಹಾಗೂ ಅವರ ಸಂಬಂಧಿಗಳಿಗೆ ಸೇರಿದ ಒಟ್ಟು 14 ಎಕರೆ 13 ಗುಂಟೆ ಜಮೀನನ್ನು ಭೂಸ್ವಾಧೀನ ಮಾಡಿಕೊಂಡು ಪರಿಹಾರ ವಿತರಿಸಲಾಗಿತ್ತು.

ರೈತರು ಯೋಗ್ಯ ಪರಿಹಾರಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ₹ 4.41 ಕೋಟಿ ಪರಿಹಾರವನ್ನು ಬಡ್ಡಿ ಸಮೇತ, ಒಟ್ಟು ₹ 6 ಕೋಟಿ ಪರಿಹಾರ ನೀಡುವಂತೆ ಹಿರಿಯ ದೀವಾಣಿ ನ್ಯಾಯಾಧೀಶರು ಆದೇಶಿಸಿದ್ದರು. ಅದರಲ್ಲಿ ಈಗಾಗಲೇ ಹಂತ ಹಂತವಾಗಿ ₹ 4 ಕೋಟಿ ಪರಿಹಾರ ನೀಡಲಾಗಿದೆ. ಉಳಿದ ₹ 2 ಕೋಟಿ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ಕಾರಣ ಜಪ್ತಿ ಕಾರ್ಯ ನಡೆದಿದೆ. ಜಮೀನು ಪಡೆದು 16 ವರ್ಷಗಳಾದರೂ ಪರಿಹಾರ ವಿತರಿಸುವಲ್ಲಿ ವಿಳಂಬ ಮಾಡುತ್ತಿರುವುದರಿಂದ ರೈತರು ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ADVERTISEMENT

ವಕೀಲರಾದ ಟಿ.ಕೆ.ಸಂತೋಷ ವಕಾಲತ್ತು ವಹಿಸಿದ್ದರು. ನ್ಯಾಯವಾದಿಗಳಾದ ಸ್ಟ್ಯಾನ್ಲಿ ಫಿಲೀಫ್, ವೈಭವ ಬೆಳಗಾಂವಕರ, ಚೇತನ ಹೆಡಗೆ ಹಾಗೂ ನ್ಯಾಯಾಲಯದ ಬೇಲಿಫಗಳಾದ ಎಸ್.ಬಿ.ದೊಡ್ಡಸಾವಳಗಿ, ಐ.ಸಿ.ಕಂಬಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.