ಬೆಳಗಾವಿ: ‘ಬಸವಣ್ಣ ಅವರು ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿಯೇ ಇಲ್ಲ. ಕೆಲವೊಂದು ‘ಕಂಪನಿ’ಗಳು ಇದನ್ನು ಹುಟ್ಟುಹಾಕಿವೆ. ತಮ್ಮ ಸ್ವಾರ್ಥಕ್ಕೆ ಮಕ್ಕಳ ಭವಿಷ್ಯ ಕೊಲೆ ಮಾಡುತ್ತಿದ್ದಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ದೂರಿದರು.
ರಾಯಬಾಗ ತಾಲ್ಲೂಕಿನ ಹಾರೂಗೇರಿ ಗ್ರಾಮದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಸವಣ್ಣ ಹಿಂದೂ ಧರ್ಮದಲ್ಲಿರುವ ಮೌಢ್ಯ ಹಾಗೂ ತಾರತಮ್ಯ ನಿವಾರಣೆಗೆ ಕ್ರಾಂತಿ ಮಾಡಿದರು. ಆದರೆ, ಕೆಲವು ‘ಮೂರ್ಖರು’ ತಮ್ಮ ಸ್ವಾರ್ಥಕ್ಕೆ ಧರ್ಮವನ್ನು ಹುಟ್ಟುಹಾಕಲು ಹೊರಟಿದ್ದಾರೆ’ ಎಂದೂ ಹೇಳಿದರು.
‘ಎಲ್ಲಿಯವರೆಗೆ ಕೇಂದ್ರ ಸರ್ಕಾರ ವೀರಶೈವ ಲಿಂಗಾಯತ ಧರ್ಮವೆಂದು ಘೋಷಣೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಹಿಂದೂ ಧರ್ಮ ಎಂದೇ ಬರೆಸಬೇಕು. ಗಣತಿಯಲ್ಲಿ ಈಗ ವೀರಶೈವ ಲಿಂಗಾಯತ ಧರ್ಮ ಎಂದು ಬರೆಸಿದರೆ ಮುಂದೆ ಮಕ್ಕಳಿಗೆ ಮೀಸಲಾತಿ ಸಮಸ್ಯೆ ಆಗುತ್ತದೆ. ಸರ್ಕಾರದ ಯಾವುದೇ ಪತ್ರದಲ್ಲಿ ಈ ಧರ್ಮ ಇರುವುದಿಲ್ಲ. ಹಾಗಾಗಿ, ಧರ್ಮದ ಕಾಲಂನಲ್ಲಿ ಹಿಂದೂ ಎಂದು, ನಂತರ ಜಾತಿ ಕಾಲಂನಲ್ಲಿ ತಮಗೆ ಬೇಕಾದದ್ದನ್ನು ಬರೆಸಬಹುದು. ಆಗ ಮಾತ್ರ ಮೀಸಲಾತಿ ಸಿಗುತ್ತದೆ. ಇಲ್ಲದಿದ್ದರೆ ಮಕ್ಕಳ ಭವಿಷ್ಯ ಕರಾಳವಾಗುತ್ತದೆ’ ಎಂದರು.
‘ಕೆಲವರು ಈಗಾಗಲೇ 2ಎ ವರ್ಗದಲ್ಲಿ ಸೇರಿದ್ದಾರೆ. ಅವರು ವೀರಶೈವ ಅಥವಾ ಲಿಂಗಾಯತ ಎಂದು ಎಲ್ಲೂ ಬರೆದಿಕೊಂಡಿಲ್ಲ. ಬದಲಾಗಿ ಹಿಂದೂ ಧರ್ಮ ಎಂದು ಬರೆದು ಅದರ ಮುಂದೆ ಅವರ ಉಪಜಾತಿ ಬರೆದುಕೊಂಡಿದ್ದಾರೆ. ಜಾತಿ– ಜಾತಿಗಳನ್ನು ಒಡೆದು ಹಿಂದೂ ಧರ್ಮಕ್ಕೆ ಧಕ್ಕೆ ತರುವ ಯತ್ನಗಳು ನಡೆದಿವೆ’ ಎಂದು ಆರೋಪಿಸಿದರು.
‘ಮುಸ್ಲಿಂ ಓಲೈಕೆಗೆ ಸಿದ್ದರಾಮಯ್ಯ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಮುಸ್ಲಿಂ ಗುತ್ತಿಗೆದಾರರು, ಮುಸ್ಲಿಂ ಅಧಿಕಾರಿಗಳನ್ನು ಮೇಲುಗಟ್ಟುತ್ತಿದ್ದಾರೆ ಎಂಬ ಸಂದೇಹ ಬರುತ್ತಿದೆ. ಗಣತಿಗಾಗಿ ಈಗಾಗಲೇ ₹400 ಕೋಟಿ ನೀರಲ್ಲಿ ಹಾಕಿದ್ದಾರೆ. ಕೇವಲ ಜಾಲತಿ ಗಣತಿಯಲ್ಲೇ ಸರ್ಕಾರ ತನ್ನ ಅವಧಿ ಮುಗಿಸುತ್ತದೆ. ಇದೆಲ್ಲ ಕಂಡು ರಾಜ್ಯದ ಹಿಂದೂಗಳು ಈಗ ಒಂದಾಗಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.