ಬೆಳಗಾವಿ/ಕಾಗವಾಡ: ಕಾಗವಾಡ ತಾಲ್ಲೂಕಿನ ಐನಾಪುರದಲ್ಲಿ ಸೋಮವಾರ ರಾತ್ರಿ 3 ಟನ್ ಗೋಮಾಂಸ ಸಾಗಿಸುತ್ತಿದ್ದ ಲಾರಿಗೆ ಸ್ಥಳೀಯರು ಬೆಂಕಿ ಹಚ್ಚಿದ ಘಟನೆ ಪಟ್ಟಣದಲ್ಲಿ ಕೋಮು ಉದ್ವಿಗ್ನತೆಗೆ ಕಾರಣವಾಯಿತು.
ಮಾಂಸ ಸಾಗಿಸುತ್ತಿದ್ದವರು ಮತ್ತು ವಾಹನಕ್ಕೆ ಬೆಂಕಿ ಹಚ್ಚಿದವರು ಸೇರಿ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ರಾಯಬಾಗ ತಾಲ್ಲೂಕಿನ ಕುಡಚಿ ಪಟ್ಟಣದಿಂದ ಹೈದರಾಬಾದ್‌ಗೆ ಐಸ್ ಸ್ಲ್ಯಾಬ್‌ಗಳಿಂದ ಮುಚ್ಚಿದ ಮಾಂಸವನ್ನು ಲಾರಿಯಲ್ಲಿ ಸಾಗಿಸಲಾಗುತಿತ್ತು.
ಐನಾಪುರ ದಾಟುವಾಗ ಹಿಂದೂತ್ವ ಸಂಘಟನೆಯ ಕಾರ್ಯಕರ್ತರು ತಡೆದು, ಲಾರಿಗೆ ಬೆಂಕಿ ಹಚ್ಚಿದರು. ಪೊಲೀಸರು ಬರುವಷ್ಟರಲ್ಲಿ ವಾಹನ ಸುಟ್ಟು ಕರಕಲಾಗಿತ್ತು. ಜತೆಗೆ, ಹಲ್ಲೆ ಮಾಡಿದ್ದರಿಂದ ಚಾಲಕ ಮತ್ತು ಕ್ಲೀನರ್‌ಗೆ ಗಾಯಗಳಾಗಿವೆ.
‘ಮಾಂಸ ಸಾಗಿಸುತ್ತಿದ್ದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಷ್ಟಾದ ವಿಕಾಸ ವಾರೆ, ಸುಧೀರ ಗಸ್ತಿ, ಕುಡಚಿಯ ಸಾಹೇಬಲಾಲ್ ಮುತವಾಲೆ ಅವರನ್ನು ಬಂಧಿಸಿದ್ದೇವೆ. ಕಲಬುರಗಿಯಲ್ಲಿ ಒಬ್ಬನನ್ನು ವಶಕ್ಕೆ ಪಡೆದಿದ್ದೇವೆ’ ಎಂದು ಜಿಲ್ಲಾ ಎಸ್‌ಪಿ ಭೀಮಾಶಂಕರ ಗುಳೇದ ತಿಳಿಸಿದರು.
‘ಲಾರಿಗೆ ಬೆಂಕಿ ಹಚ್ಚಿದ ವಿಡಿಯೊದಲ್ಲಿ ಕಂಡುಬಂದ ಐನಾಪುರದ ಆವೇಶ ಜಿರಗಾಳೆ, ಸುಹಾಸ ಲೋಂಡೆ, ಅನಿಲ ಸಾವಳಿ, ಸದಾಶಿವ ಕುರಂದವಾಡೆ ಎಂಬುವರನ್ನು ಬಂಧಿಸಲಾಗಿದೆ. ಹಲ್ಲೆಗೆ ಒಳಗಾದ ಚಾಲಕ ಪರಿಶಿಷ್ಟ ಸಮುದಾಯಕ್ಕೆ ಸೇರಿದ್ದರಿಂದ ಆರೋಪಿಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ’ ಎಂದರು.
‘ವಾಹನದಲ್ಲಿದ್ದ ಮಾಂಸ ಹಸುವಿನದ್ದಾಗಿದ್ದು, ಪರೀಕ್ಷೆಗಾಗಿ ಮಾದರಿ ಕಳುಹಿಸಲಾಗಿದೆ. ಆರೋಪಿಗಳು ಒಂದು ವಾರದಿಂದ ಮಾಂಸ ಖರೀದಿಸಿದ್ದರು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.