ADVERTISEMENT

ಬೆಳಗಾವಿ ತಾಲ್ಲೂಕು ಎಪಿಎಂಸಿ: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ಸತೀಶ, ಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 12:07 IST
Last Updated 15 ಅಕ್ಟೋಬರ್ 2018, 12:07 IST
ನೂತನ ಅಧ್ಯಕ್ಷ, ಉಪಾಧ್ಯಕ್ಷರು ಬೆಂಬಲಿಗರೊಂದಿಗೆ ಸಂಭ್ರಮಿಸಿದರು
ನೂತನ ಅಧ್ಯಕ್ಷ, ಉಪಾಧ್ಯಕ್ಷರು ಬೆಂಬಲಿಗರೊಂದಿಗೆ ಸಂಭ್ರಮಿಸಿದರು   

ಬೆಳಗಾವಿ: ಇಲ್ಲಿನ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ನೂತನ ಅಧ್ಯಕ್ಷರಾಗಿ ಆನಂದ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಸುಧೀರ ಗಡ್ಡಿ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

‌ತೀವ್ರ ಕುತೂಹಲ ಕೆರಳಿಸಿದ್ದ ಈ ಚುನಾವಣೆಯಲ್ಲಿ ಶಾಸಕರಾದ ಯಮಕನಮರಡಿಯ ಸತೀಶ ಜಾರಕಿಹೊಳಿ ಹಾಗೂ ಗ್ರಾಮೀಣ ಕ್ಷೇತ್ರದ ಲಕ್ಷ್ಮಿ ಹೆಬ್ಬಾಳಕರ ಚರ್ಚಿಸಿ ಒಮ್ಮತದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದರು. ಇದರಿಂದಾಗಿ ಅವಿರೋಧ ಆಯ್ಕೆ ಸಾಧ್ಯವಾಯಿತು. ಇದರೊಂದಿಗೆ, ಯಾವುದೇ ಗೊಂದಲಗಳಿಗೆ ಆಸ್ಪದವಾಗಲಿಲ್ಲ. ಕಾಂಗ್ರೆಸ್‌ ಬೆಂಬಲಿತ ಸದಸ್ಯರು ಅಧಿಕಾರ ಪಡೆದುಕೊಂಡಿದ್ದಾರೆ.

ಮಾತುಕತೆ ಪ್ರಕಾರ, ಅಧ್ಯಕ್ಷ ಸ್ಥಾನವನ್ನು ಸತೀಶ ಬಣ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹೆಬ್ಬಾಳಕರ ಬಣಕ್ಕೆ ಬಿಟ್ಟುಕೊಡಲಾಗಿದೆ. ಅವಿರೋಧ ಆಯ್ಕೆಯಾಗಬೇಕು ಎಂದು ಸತೀಶ ಪಟ್ಟು ಹಿಡಿದಿದ್ದರು. ಇದಕ್ಕೆ ಲಕ್ಷ್ಮಿ ಒಪ್ಪಿರಲಿಲ್ಲ. ತಮ್ಮ ಬಣದವರಿಗೆ ಅಧ್ಯಕ್ಷ ಸ್ಥಾನ ಸಿಗಬೇಕು ಎಂದು ವಾದ ಮಂಡಿಸಿದ್ದರು. ಇದರಿಂದಾಗಿ ಸೋಮವಾರ ಬೆಳಿಗ್ಗೆವರೆಗೂ ಆಯ್ಕೆ ಕಗ್ಗಂಟಾಗಿ ಪರಿಣಮಿಸಿತ್ತು.

ADVERTISEMENT

ಪ್ರವಾಸಿ ಮಂದಿರದಲ್ಲಿ ಮಾತಕತೆ ನಡೆಸಿದ ಮುಖಂಡರು, ಒಗ್ಗಟ್ಟು ‍ಪ್ರದರ್ಶಿಸಿ ಅವಿರೋಧ ಆಯ್ಕೆಗೆ ಸಮ್ಮತಿಸಿದರು. ‘ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯ ರೀತಿ ಗೊಂದಲ ಮಾಡಿಕೊಳ್ಳಬೇಡಿ. ಪಕ್ಷಕ್ಕೆ ಮುಜುಗರ ಉಂಟು ಮಾಡಬೇಡಿ’ ಎಂದು ಪಕ್ಷದ ವರಿಷ್ಠರು ಕೂಡ ನಿರ್ದೇಶನ ನೀಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಕೂಡ ಇದೇ ಸೂಚನೆ ನೀಡಿದ್ದರು. ಸ್ಥಳೀಯವಾಗಿ ಬಗೆಹರಿಸಿಕೊಳ್ಳಿ ಎಂದು ತಿಳಿಸಿದ್ದರು.

ಸಭೆ ನಂತರ ಮಾತನಾಡಿದ ಸತೀಶ, ‘ಹಿಂದಿನ ಚುನಾವಣೆ ಬೇರೆ. ಈಗಿನ ಚುನಾವಣೆ ಬೇರೆ. ನಾನು ಹಿಂದಿನಿಂದಲೂ ಹೇಳುತ್ತಾ ಬರುತ್ತಿರುವಂತೆಯೇ ಅವಿರೋಧ ಆಯ್ಕೆಗೆ ನಿರ್ಧರಿಸಿದ್ದೇವೆ. ಒಬ್ಬೊಬ್ಬರು ಮಾತ್ರವೇ ನಾಮಪತ್ರ ಸಲ್ಲಿಸುತ್ತಾರೆ. ಪಕ್ಷ ಹಾಗೂ ಸ್ಥಳೀಯ ಕಾರ್ಯಕರ್ತರ ಹಿತದೃಷ್ಟಿಯಿಂದ ಈ ನಿರ್ಧಾರ ಮಾಡಿದ್ದೇವೆ. ಅವರು, ಇವರು ಎನ್ನುವುದಕ್ಕಿಂತ ಪಕ್ಷವಷ್ಟೇ ಮುಖ್ಯ’ ಎಂದು ಪ್ರತಿಕ್ರಿಯೆ ನೀಡಿದ್ದರು.

‘ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಯಾವುದೇ ಗೊಂದಲವಿಲ್ಲ’ ಎಂದು ಲಕ್ಷ್ಮಿ ಕೂಡ ತಿಳಿಸಿದ್ದರು.

ಅಭಿವೃದ್ಧಿಗೆ ಪ್ರಯತ್ನ

‘ಪಕ್ಷದ ಮುಖಂಡರ ಸೂಚನೆ ಹಾಗೂ ನಿರ್ಧಾರದ ಪ್ರಕಾರ ಅವಿರೋಧ ಆಯ್ಕೆ ನಡೆದಿದೆ. ಮುಖಂಡರು ಹಾಗೂ ಸದಸ್ಯರ ಸಹಕಾರದೊಂದಿಗೆ ಎಪಿಎಂಸಿಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧ್ಯಕ್ಷ ಆನಂದ ಪಾಟೀಲ ತಿಳಿಸಿದರು.

‘ಇಲ್ಲಿ ನಿರ್ಮಿಸಲಾಗಿರುವ ಸಗಟು ತರಕಾರಿ ಮಾರುಕಟ್ಟೆ ಕಾರ್ಯಾರಂಭಕ್ಕೆ ಕ್ರಮ ವಹಿಸಲಾಗುವುದು. ರೈತರ ಹಿತ ಕಾಯಲು ಪ್ರಯತ್ನಿಸಲಾಗುವುದು’ ಎಂದು ಉಪಾಧ್ಯಕ್ಷ ಸುಧೀರ್‌ ಹೇಳಿದರು.

ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಗುಲಾಲು ಎರಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.