ADVERTISEMENT

ಆರೋಗ್ಯಕರ ಋತುಚಕ್ರ: ಜಾಗೃತಿ ಅಗತ್ಯ: ಡಾ.ಕೀರ್ತಿ ಚೌಗಲಾ

​ಪ್ರಜಾವಾಣಿ ವಾರ್ತೆ
Published 28 ಮೇ 2020, 12:26 IST
Last Updated 28 ಮೇ 2020, 12:26 IST
ಬೆಳಗಾವಿಯ ‘ಉಜ್ವಲಾ’ ಮಹಿಳೆಯರ ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರದಲ್ಲಿ ನಡೆದ ಋತುಚಕ್ರದ ಸ್ವಚ್ಛತಾ ದಿನ ಮತ್ತು ಕಿಶೋರಿಯರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಕೀರ್ತಿ ಚೌಗಲಾ ಮಾತನಾಡಿದರು
ಬೆಳಗಾವಿಯ ‘ಉಜ್ವಲಾ’ ಮಹಿಳೆಯರ ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರದಲ್ಲಿ ನಡೆದ ಋತುಚಕ್ರದ ಸ್ವಚ್ಛತಾ ದಿನ ಮತ್ತು ಕಿಶೋರಿಯರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಕೀರ್ತಿ ಚೌಗಲಾ ಮಾತನಾಡಿದರು   

ಬೆಳಗಾವಿ: ‘ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಹೆಚ್ಚಿನ ಮಹಿಳೆಯರು ಋತುಚಕ್ರದ ಬಗ್ಗೆ ಮಾತನಾಡಲು ಹಾಗೂ ಚರ್ಚಿಸಲು ಹಿಂಜರಿಯುತ್ತಾರೆ. ಇದರಿಂದಾಗಿ ಅವರ ಜನನೇಂದ್ರಿಯದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ’ ಎಂದು ಡಾ.ಕೀರ್ತಿ ಚೌಗಲಾ ಹೇಳಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ರೇಡಿಯೊ ಕೇಂದ್ರದಿಂದ ದೇವರಾಜ ಅರಸು ಕಾಲೊನಿಯ ‘ಉಜ್ವಲಾ’ ಮಹಿಳೆಯರ ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರದಲ್ಲಿ ನಡೆದ ‘ಋತುಚಕ್ರದ ಸ್ವಚ್ಛತಾ ದಿನ’ದ ಅಂಗವಾಗಿ ಕಿಶೋರಿಯರಿಗೆ ಜಾಗೃತಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಋತುಚಕ್ರದ ವೇಳೆ ದೇಹಕ್ಕೆ ಅತಿ ಹೆಚ್ಚಿನ ಆರೈಕೆ ಮತ್ತು ಎಚ್ಚರಿಕೆ ಬೇಕಾಗುತ್ತದೆ. ಆ ಸಂದರ್ಭದಲ್ಲಿ ಸ್ವಚ್ಛತೆ ಕಡೆಗಣಿಸಿದರೆ ಆಗ ಹಲವು ಸಮಸ್ಯೆಗಳು ಕಾಡಬಹುದು. ಹೀಗಾಗಿ, ಅರಿವು ಮೂಡಿಸಬೇಕು. ಮುಕ್ತವಾಗಿ ಮಾತನಾಡಬೇಕು ಮತ್ತು ಆರೋಗ್ಯಕರ ಋತುಚಕ್ರಕ್ಕಾಗಿ ಒಂದು ಹೆಜ್ಜೆ ಮುಂದಿಡಬೇಕು. ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ನಗರ ಕುಟುಂಬ ಕಲ್ಯಾಣ ಕೇಂದ್ರ ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ಪ್ರಿಯಾಂಕಾ ಉಂಡಿ, ‘ಮುಟ್ಟಿನ ಸಮಯದಲ್ಲಿ ಋತುಚಕ್ರದ ಕಪ್‌ಗಳನ್ನು ಪ್ರತಿ ಬಾರಿಯೂ ನೀರಿನಲ್ಲಿ ಸ್ವಚ್ಛಗೊಳಿಸಿ ಬಳಿಸಬೇಕು. ಸ್ಯಾನಿಟರಿ ಪ್ಯಾಡ್‌ಗಳನ್ನು ಕಾಗದದಲ್ಲಿ ಸುತ್ತಿ ಪ್ರತ್ಯೇಕವಾಗಿಟ್ಟು ಕಸ ಸಂಗ್ರಹಿಸಲು ಮನೆಗಳ ಬಳಿ ಬರುವ ವಾಹನಕ್ಕೆ ನೀಡಬೇಕು’ ಎಂದು ತಿಳಿಸಿದರು.

‘ಉಜ್ವಲಾ’ ಮಹಿಳೆಯರ ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರದ ಯೋಜನಾ ನಿರ್ದೇಶಕಿ ಸುರೇಖಾ ಪಾಟೀಲ ಇದ್ದರು.

‘ಸಂಗಾತಿ’ ಕೌಟುಂಬಿಕ ಸಲಹಾ ಕೇಂದ್ರದ ಸಲಹಾಗಾರ್ತಿ ಕವಿತಾ ಚೌಗಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾವತಿ ನಿರೂಪಿಸಿದರು. ಗಾಯತ್ರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.