ADVERTISEMENT

ಬೆಳಗಾವಿ| ವಿಶೇಷ ತನಿಖಾ ತಂಡ ರಚನೆಗೆ ಆಗ್ರಹ

ಬಿಡಿಸಿಸಿ ಬ್ಯಾಂಕ್‌ ನೌಕರರ ಸಂಘದಿಂದ ಪ್ರತಿಭಟನೆ, ಜಿಲ್ಲಾಧಿಕಾರಿ, ಎಸ್‌ಪಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 1:52 IST
Last Updated 6 ಜನವರಿ 2026, 1:52 IST
<div class="paragraphs"><p>ಚಿದಾನಂದ ಸವದಿ</p></div>

ಚಿದಾನಂದ ಸವದಿ

   

ಬೆಳಗಾವಿ: ‘ಬಿಡಿಸಿಸಿ ಬ್ಯಾಂಕಿನ ನೌಕರರ ಸಂಘದ ಸಂಘದ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಬೇಕು. ಶಾಸಕ ಲಕ್ಷ್ಮಣ ಸವದಿ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ, ನೌಕರರ ಸಂಘದ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಬ್ಯಾಂಕಿನ ವಿವಿಧ ಶಾಖೆಗಳ ಹಲವು ನೌಕರರು ಸೋಮವಾರ ಕರ್ತವ್ಯದಿಂದ ದೂರ ಉಳಿದು ಹೋರಾಟ ಮಾಡಿದರೆ, ಇನ್ನೂ ಕೆಲವರು ಎಂದಿನಂತೆ ಕೆಲಸಕ್ಕೆ ಹಾಜರಾದರು.

ADVERTISEMENT

ಆರಂಭದಲ್ಲಿ ಬ್ಯಾಂಕಿನ ಬೆಳಗಾವಿ ಪ್ರಧಾನ ಕಚೇರಿ ಆವರಣದಲ್ಲಿ ಸಂಘದ ಪದಾಧಿಕಾರಿಗಳು ಪ್ರತಿಭಟಿಸಿ, ಬ್ಯಾಂಕ್‌ನ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಮನವಿ ಸಲ್ಲಿಸಿದರು. ನಂತರ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ಅವರಿಗೂ ಮನವಿ ಕೊಟ್ಟು, ಪಾರದರ್ಶಕ ತನಿಖೆಗೆ ಒತ್ತಾಯಿಸಿದರು.

‘ಶಾಸಕ ಲಕ್ಷ್ಮಣ ಸವದಿ, ಅವರ ಪುತ್ರ ಚಿದಾನಂದ ಹಾಗೂ ಬೆಂಬಲಿಗರಿಂದ ಹಲ್ಲೆಗೆ ಒಳಗಾಗಿದ್ದ ನಿಂಗಪ್ಪ ಅವರಿಗೆ ಅಥಣಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲು ಅರ್ಧ ತಾಸು ವಿಳಂಬ ಮಾಡಲಾಯಿತು. ಹಾಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಲಕ್ಷ್ಮಣ ಸವದಿ ಪ್ರಭಾವಿ ವ್ಯಕ್ತಿಯಾಗಿದ್ದು, ಸ್ಥಳೀಯ ಪೊಲೀಸರಿಂದ ಪಾರದರ್ಶಕ ತನಿಖೆ ನಡೆಯುವ ಸಂಶಯವಿದೆ. ಹಾಗಾಗಿ ವಿಶೇಷ ತನಿಖಾ ತಂಡ ರಚಿಸಬೇಕು’ ಎಂದು ಆಗ್ರಹಿಸಿದರು.

‘ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಅಥಣಿ ಸಿಪಿಐ, ಪಿಎಸ್‌ಐ ಹಾಗೂ ಅಥಣಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನೊಂದ ನೌಕರರಿಗೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.