
ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ತನ್ನ ಸಹೋದರನ ಕೊಲೆ ಮಾಡಿ, ಆಕಸ್ಮಿಕ ಸಾವು ಸಂಭವಿಸಿದೆ ಎಂದು ಬಿಂಬಿಸಲು ಯತ್ನಿಸಿದ್ದ ವ್ಯಕ್ತಿಯನ್ನು ಯಮಕನಮರಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಸಲಿಂಗ ವಿಠ್ಠಲ ರಾಮಾಪುರೆ ಮೃತರು. ಸಿದ್ದಪ್ಪ ವಿಠಲ ರಾಮಾಪುರೆ ಕೊಲೆ ಮಾಡಿದ ಆರೋಪಿ.
ಇಬ್ಬರೂ ಸಹೋದರರು ಕುಟುಂಬದ ಆಸ್ತಿಯಲ್ಲಿ ತಲಾ ನಾಲ್ಕು ಎಕರೆ ಕೃಷಿಭೂಮಿ ಹೊಂದಿದ್ದಾರೆ. ಆದರೆ, ಅದನ್ನು ಪಾಲು ಮಾಡಿರಲಿಲ್ಲ.
ಡಿ.18ರಂದು ಬೆಳಿಗ್ಗೆ 8ಕ್ಕೆ ಮದ್ಯ ಸೇವಿಸಿದ ಅಮಲಿನಲ್ಲಿ ಬಂದ ಬಸಲಿಂಗನು, ಸಿದ್ದಪ್ಪ ಅವರೊಂದಿಗೆ ಗಲಾಟೆ ಮಾಡಿದ. ತನ್ನ ಪಾಲಿನ ನಾಲ್ಕು ಎಕರೆ ಜಮೀನನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದ.
ಇದಕ್ಕೆ ಸಿದ್ದಪ್ಪ ನಿರಾಕರಿಸಿದಾಗ, ತಲೆ, ಬೆನ್ನು, ಹೊಟ್ಟೆ ಮತ್ತು ಕೈ-ಕಾಲುಗಳಿಗೆ ಬಿದಿರಿನ ಕೋಲುಗಳಿಂದ ಹೊಡೆದ. ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ. ‘ಹೆಂಚು ಬದಲಿಸುವಾಗ ಚಾವಣಿಯಿಂದ ಬಿದ್ದು ಮೃತಪಟ್ಟಿದ್ದಾರೆ’ ಎಂದು ಪೊಲೀಸರಿಗೆ ತಿಳಿಸುವಂತೆ ಸಿದ್ದಪ್ಪ ಅವರ ಪತ್ನಿಗೆ ಬೆದರಿಕೆ ಹಾಕಿದ.
ಡಿ.18ರಂದು ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದರು.
ಯಮಕನಮರಡಿ ಠಾಣೆ ಇನ್‌ಸ್ಪೆಕ್ಟರ್ ಜಾವೇದ್ ಮುಷಾಪುರಿ ತನಿಖೆ ಮಾಡುವ ಸಮಯದಲ್ಲಿ ಬಸಲಿಂಗ ಮನೆ ಚಾವಣಿಯಿಂದ ಬಿದ್ದು ಸಾವನ್ನಪ್ಪಿಲ್ಲ. ಬದಲಿಗೆ ಸಿದ್ದಪ್ಪನೇ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಡಿ.27ರಂದು ಸಿದ್ದಪ್ಪ ಅವರ ತಾಯಿ ರತ್ನವ್ವ ಅವರು, ಕೊಲೆ ದೂರು ದಾಖಲಿಸಿದ್ದಾರೆ. ಅದನ್ನು ಆಧರಿಸಿ ಆರೋಪಿ ಬಂಧಿಸಲಾಗಿದೆ.
ದಂಪತಿ ಕೊಲೆ ಪ್ರಕರಣ: ಇಬ್ಬರ ಬಂಧನ
‘ಆಸ್ತಿ ವಿವಾದಕ್ಕೆ ಸಂಬಂಧಿಸಿ ಅಥಣಿ ಠಾಣೆಯಲ್ಲಿ 2024ರ ನವೆಂಬರ್‌ನಲ್ಲಿ ದಾಖಲಾಗಿದ್ದ ದಂಪತಿ ಕೊಲೆ ಪ್ರಕರಣ ಸಂಬಂಧ ಅಥಣಿಯ ಅಣ್ಣಪ್ಪ ಚವ್ಹಾಣ ರಾಜು ಚವ್ಹಾಣ ಎಂಬುವರನ್ನು ಬಂಧಿಸಲಾಗಿದೆ’ ಎಂದು ಎಸ್‌ಪಿ ಡಾ.ಭೀಮಾಶಂಕರ ಗುಳೇದ ಹೇಳಿದರು.
‘₹500 ಹಣಕ್ಕಾಗಿ ಕೊಲೆ ನಡೆದಿರುವ ಬಗ್ಗೆ ಅಥಣಿ ಠಾಣೆಯಲ್ಲಿ 2025ರ ಅಕ್ಟೋಬರ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಔರಂಗಾಬಾದ್ ಮೂಲದ ಅಮೂಲ್ ಎಂಬಾತನನ್ನು ಬಂಧಿಸಿದ್ದೇವೆ’ ಎಂದರು.
‘ರಾಯಬಾಗ ಠಾಣೆಯಲ್ಲಿ ಡಿ.12ರಂದು ದಾಖಲಾಗಿದ್ದ ಶ್ರೀಗಂಧದ ಮರಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಸಿದ್ರಾಮ ಕೋಳಿ ಲಗಮಣ್ಣ ಕೋಳಿ ಹಾಗೂ ಭೀಮಣ್ಣ ನಾಗೋಡ ಎಂಬುವವರನ್ನು ಬಂಧಿಸಲಾಗಿದೆ. ನಾಲ್ಕು ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.