
ಬೆಳಗಾವಿ: ವಿಕಸಿತ ಭಾರತ– ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್(ಗ್ರಾಮೀಣ) (ವಿಬಿ–ಜಿ ರಾಮ್ ಜಿ) ಕಾಯ್ದೆ ವಿರೋಧಿಸಿ, ಇಲ್ಲಿನ ಕಾಂಗ್ರೆಸ್ ಭವನದ ಎದುರು ಭಾನುವಾರ ಸಾಂಕೇತಿಕ ಪ್ರತಿಭಟನೆ ಮತ್ತು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಿತು.
ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹೋರಾಟದಲ್ಲಿ ಭಾಗಿಯಾಗಿ, ಕೇಂದ್ರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಗೋಪಿನಾಥ ಪಳನಿಯಪ್ಪನ್, ‘ಕಾಂಗ್ರೆಸ್ ಸಾಮರಸ್ಯ ಮತ್ತು ಶಾಂತಿಗಾಗಿ ಹೋರಾಡುತ್ತಿದ್ದರೆ, ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತಕಳವು ವಿಚಾರವಾಗಿ ಧ್ವನಿ ಎತ್ತಿದರು. ಇದು ಆಂದೋಲನ ಸ್ವರೂಪ ಪಡೆಯಿತು. ಆದರೆ, ಜನರು ಜಾಗೃತರಾಗಿ ತಮಗೆ ಕಪಾಳಮೋಕ್ಷ ಮಾಡಿದರೆ ಹೇಗೆ ಎಂದು ಹೆದರಿದ ಪ್ರಧಾನಿ ನರೇಂದ್ರ ಮೋದಿ ಅವರು, ನರೇಗಾ ಯೋಜನೆಯಿಂದ ಗಾಂಧೀಜಿ ಹೆಸರು ಅಳಿಸಿ ಹೊಸ ವಿವಾದ ಸೃಷ್ಟಿಸಿದರು’ ಎಂದು ಆರೋಪಿಸಿದರು.
‘ಈ ಹಿಂದೆ ನಾಥುರಾಮ್ ಗೋಡ್ಸೆಯು ಗಾಂಧೀಜಿ ಕೊಂದಿದ್ದ. ಈಗ ನರೇಗಾ ಹೆಸರು ಬದಲಿಸುವ ಮೂಲಕ ಕೇಂದ್ರ ಸರ್ಕಾರ ಮತ್ತೊಮ್ಮೆ ಗಾಂಧೀಜಿ ಹತ್ಯೆ ಮಾಡಿದೆ. ಗಾಂಧಿ ಹೆಸರಿದ್ದಲ್ಲಿ ರಾಮ್‌ಜಿ ಹೆಸರು ಬಂದಿದ್ದಕ್ಕೆ ನಾವು ಆಕ್ಷೇಪ ವ್ಯಕ್ತಪಡಿಸಿಲ್ಲ. ನಾವೂ ರಾಮನನ್ನು ನಂಬುತ್ತೇವೆ. ಆದರೆ, ಬಿಜೆಪಿಗರ ಕೈಯಲ್ಲಿ ರಾಮ ಸಿಕ್ಕರೆ ಏನೆಲ್ಲ ಆಗಬಹುದು ಎಂಬುದಕ್ಕೆ ದೊಡ್ಡ ಇತಿಹಾಸವೇ ಇದೆ’ ಎಂದು ಲೇವಡಿ ಮಾಡಿದರು.
‘ನರೇಗಾ ಬದಲಿಗೆ ಕೇಂದ್ರ ಜಾರಿಗೆ ತರುತ್ತಿರುವ ಹೊಸ ಕಾಯ್ದೆ ರದ್ದುಪಡಿಸುವವರೆಗೂ ಹೋರಾಟ ನಿಲ್ಲದು. ಈ ಹೋರಾಟವು ಇಡೀ ದೇಶದಲ್ಲಿ ಚಳವಳಿ ರೂಪ ಪಡೆಯಬೇಕಿದೆ. ಹೊಸ ಕಾಯ್ದೆ ಮೂಲಕ ನರೇಗಾ ಯೋಜನೆ ಹೆಸರಷ್ಟೇ ಬದಲಾಗುತ್ತಿಲ್ಲ. ಬದಲಿಗೆ ಯೋಜನೆ ಆಶಯವೇ ಬುಡಮೇಲು ಮಾಡಲಾಗುತ್ತಿದೆ’ ಎಂದು ದೂರಿದರು.
ಶಾಸಕ ಆಸಿಫ್ ಸೇಠ್, ‘ಯಾವುದೇ ಯೋಜನೆ ಹೆಸರು ಬದಲಿಗೆ ಜನರ ಒಪ್ಪಿಗೆ ಅಗತ್ಯ. ಆದರೆ, ಬಿಜೆಪಿಯವರು ಸಾರ್ವಜನಿಕರ ಅಭಿಪ್ರಾಯ ಕೇಳದೆ ನರೇಗಾ ಯೋಜನೆ ಹೆಸರು ಬದಲಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಶಾಸಕ ಬಾಬಾಸಾಹೇಬ ಪಾಟೀಲ, ‘ಗ್ರಾಮಗಳ ಅಭಿವೃದ್ಧಿಗಾಗಿ ನರೇಗಾ ಮುಂದುವರಿಯಬೇಕಿದೆ’ ಎಂದರು.
ಶಾಸಕ ವಿಶ್ವಾಸ ವೈದ್ಯ, ‘ಹೊಸ ಕಾಯ್ದೆ ಹೆಸರಿನಲ್ಲಿ ನರೇಗಾ ಯೋಜನೆಗೆ ಕಡಿವಾಣ ಹಾಕುವುದನ್ನು ತಡೆಯೋಣ’ ಎಂದರು.
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮುಖಂಡರಾದ ರಾಹುಲ ಜಾರಕಿಹೊಳಿ, ಮೃಣಾಲ್ ಹೆಬ್ಬಾಳಕರ ಮಾತನಾಡಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಧಾಕರ ಬಡಿಗೇರ, ಮಾಜಿ ಸಚಿವ ವೀರಕುಮಾರ ಪಾಟೀಲ, ಪಕ್ಷದ ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಮಂಜುನಾಥ ಭಣೆ, ಗಜಾನನ ಕಾಗಣಿಕರ, ಶಾಮ ಘಾಟಗೆ, ಕಾರ್ತಿಕ ಪಾಟೀಲ, ಅನಂತಕುಮಾರ ಬ್ಯಾಕೋಡ ಇತರರಿದ್ದರು.
ಹೊಸ ಕಾಯ್ದೆ ಜಾರಿ ಹಿಂದೆ ಕೇಂದ್ರದ ಬೇರೆ ಉದ್ದೇಶ ಇದೆ. ಅನುದಾನ ವಿಚಾರವಾಗಿ ರಾಜ್ಯ ಸರ್ಕಾರಗಳಿಗೆ ಸಮಸ್ಯೆ ತಂದೊಡ್ಡುವ ದುರದ್ದೇಶವಿದೆಮಹಾಂತೇಶ ಕೌಜಲಗಿ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.