ADVERTISEMENT

ಬೆಳಗಾವಿ ಬಿಡಿಸಿಸಿ ಚುನಾವಣೆ: ಗ್ರಾಮ ದೇವತೆ ಮೇಲೆ ಆಣೆ– ಪ್ರಮಾಣ

ಹುಕ್ಕೇರಿ ತಾಲ್ಲೂಕಿನಲ್ಲಿ ರಂಗೇರಿದ ಕಣ: ರಮೇಶ ಕತ್ತಿ ಸೋಲಿಸಲು ಒಂದಾದ ಜಾರಕಿಹೊಳಿ– ಜೊಲ್ಲೆ ಕುಟುಂಬಗಳು

ಸಂತೋಷ ಈ.ಚಿನಗುಡಿ
Published 10 ಸೆಪ್ಟೆಂಬರ್ 2025, 2:36 IST
Last Updated 10 ಸೆಪ್ಟೆಂಬರ್ 2025, 2:36 IST
ಹುಕ್ಕೇರಿ ತಾಲ್ಲೂಕಿನ ಗುಡಸ್ ಗ್ರಾಮದಲ್ಲಿ ಗ್ರಾಮಸ್ಥರು ರಮೇಶ ಕತ್ತಿ ಮತ್ತು ಎ.ಬಿ.ಪಾಟೀಲ ಪೆನಲ್ ಬೆಂಬಲಿಸುತ್ತೇವೆ ಎಂದು ಈಚೆಗೆ ಪ್ರಮಾಣ ಮಾಡಿದರು
ಹುಕ್ಕೇರಿ ತಾಲ್ಲೂಕಿನ ಗುಡಸ್ ಗ್ರಾಮದಲ್ಲಿ ಗ್ರಾಮಸ್ಥರು ರಮೇಶ ಕತ್ತಿ ಮತ್ತು ಎ.ಬಿ.ಪಾಟೀಲ ಪೆನಲ್ ಬೆಂಬಲಿಸುತ್ತೇವೆ ಎಂದು ಈಚೆಗೆ ಪ್ರಮಾಣ ಮಾಡಿದರು   

ಬೆಳಗಾವಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಬಿಡಿಸಿಸಿ) ಚುನಾವಣೆ ರಾಜಕೀಯ ಧ್ರುವೀಕರಣಕ್ಕೆ ನಾಂದಿ ಹಾಡಿದೆ. ಮೂರು ದಶಕಗಳ ಕಾಲ ಬ್ಯಾಂಕಿನ ಮೇಲೆ ಪಾರಮ್ಯ ಸಾಧಿಸಿದ್ದ ಕತ್ತಿ ಕುಟುಂಬವನ್ನು ದೂರ ಇಡಲು ಜಾರಕಿಹೊಳಿ ಸಹೋದರರು ಇನ್ನಿಲ್ಲದ ಅಸ್ತ್ರಗಳನ್ನು ಪ್ರಯೋಗಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕತ್ತಿ ಕುಟುಂಬದ ಆಪ್ತರು ‘ಗ್ರಾಮದೇವಿ ಮೇಲೆ ಆಣೆ’ ಮಾಡಲು ತಂತ್ರ ರೂಪಿಸಿದ್ದಾರೆ.

ಅ.19ರಂದು ಈ ಬ್ಯಾಂಕ್‌ ಚುನಾವಣೆ ನಿಗದಿಯಾಗಿದೆ. ಆದರೆ, ತಿಂಗಳ ಹಿಂದಿನಿಂದಲೇ ಇನ್ನಿಲ್ಲದ ‘ಸರ್ಕಸ್‌’ ಆರಂಭವಾಗಿವೆ. ಇಷ್ಟು ವರ್ಷ ಬ್ಯಾಂಕಿನತ್ತ ತಲೆ ಹಾಕದ ಜಾರಕಿಹೊಳಿ ಸಹೋದರರು ಈಗ ಶತಾಯ– ಗತಾಯ ಹಿಡಿತ ಸಾಧಿಸಲು ಮುಂದಾಗಿದ್ದಾರೆ. ಆದರೆ, ತಮ್ಮ ನಾಯಕನನ್ನು ಬಿಟ್ಟುಕೊಡಲು ಒಲ್ಲದ ಹುಕ್ಕೇರಿ ತಾಲ್ಲೂಕಿನ ಹಲವರು ಆಣೆ ಪ್ರಮಾಣಕ್ಕೆ ಮೊರೆ ಹೋಗಿದ್ದಾರೆ. ಮೇಲಾಗಿ, ಇದರ ವಿಡಿಯೊ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲೂ ಹರಿಬಿಟ್ಟಿದ್ದಾರೆ.

‘ಈ ಬಾರಿಯ ಬಿಡಿಸಿಸಿ ಬ್ಯಾಂಕ್‌ ಚುನಾವಣೆ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘ ಹಾಗೂ ಸಹಕಾರ ಸಕ್ಕರೆ ಕಾರ್ಖಾನೆಗಳ ಚುನಾವಣೆಯಲ್ಲಿ ನಾವು ರಮೇಶ ಕತ್ತಿ ಅವರನ್ನೇ ಬೆಂಬಲಿಸುತ್ತೇವೆ ಎಂದು ಗ್ರಾಮದೇವತೆ ಮೇಲೆ ಆಣೆ ಮಾಡುತ್ತೇವೆ’ ಎಂದು ಹಲವು ಗ್ರಾಮಸ್ಥರು ಪ್ರಮಾಣ ಸ್ವೀಕರಿಸುತ್ತಿದ್ದಾರೆ ಎಂದು ಖುದ್ದು ಪಿಕೆಪಿಎಸ್‌ನ ಸದಸ್ಯರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಹುಕ್ಕೇರಿ ತಾಲ್ಲೂಕಿನ ಅಮ್ಮಣಗಿ, ಶಿರಗಾಂವ, ಎಲ್ಲಿಮುನ್ನವಳ್ಳಿ, ಶಿರಹಟ್ಟಿ ಬಿ.ಕೆ, ಶಿರಹಟ್ಟಿ ಕೆ.ಡಿ, ಘೋಡಗೇರಿ, ಸೊಲ್ಲಾಪುರ, ಕಡಹಟ್ಟಿ, ಹುಲ್ಲೋಳಿ ಮುಂತಾದ ಗ್ರಾಮಗಳಲ್ಲಿ ಬಹಿರಂಗವಾಗಿಯೇ ಪ್ರತಿಜ್ಞೆ ಮಾಡಿದ್ದಾರೆ. ಕತ್ತಿ ಕೋಟೆಯನ್ನು ಭೇದಿಸಲು ಮುಂದಾದ ಜಾರಕಿಹೊಳಿ ತಂಡಕ್ಕೆ ಇದು ‘ತಲೆನೋವು’ ತಂದಿದೆ.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ವಿಧಾನ ಪರಿಷತ್‌ ಸದಸ್ಯ ಲಖನ್ ಜಾರಕಿಹೊಳಿ ಎಲ್ಲರೂ ಒಟ್ಟಾಗಿ ಮತಬೇಟೆ ಶುರು ಮಾಡಿದ್ದಾರೆ.

‘ನಾವ್ಯಾರೂ ಚುನಾವಣೆಗೆ ನಿಲ್ಲುವುದಿಲ್ಲ. ಆದರೆ, ಬ್ಯಾಂಕಿನ ಸಂಪೂರ್ಣ ಆಡಳಿತ ನಮ್ಮ ಬೆಂಬಲಿಗರ ಕೈಯಲ್ಲೇ ಇರುತ್ತದೆ’ ಎಂದು ಶಾಸಕ ಬಾಲಚಂದ್ರ ಬಹಿರಂಗವಾಗಿಯೇ ಹೇಳಿದ್ದಾರೆ. ಇದು ಜಿಲ್ಲೆಯ ರಾಜಕೀಯ ಧ್ರುವೀಕರಣಕ್ಕೆ ನಾಂದಿ ಹಾಡುವುದು ಖಚಿತಪಡಿಸಿದ್ದಾರೆ.

577 ಸಹಕಾರ ಸಂಘಗಳವರು ಭಾಗಿ

ಬಿಡಿಸಿಸಿಯ 16 ಸ್ಥಾನಗಳ ಪೈಕಿ 12 ಗೆಲ್ಲುತ್ತೇವೆ ಎಂಬ ವಿಶ್ವಾಸ ಬಾಲಚಂದ್ರ ಜಾರಕಿಹೊಳಿ ಅವರದು. ಜಿಲ್ಲೆಯ 853 ಇತರೇ ಸಹಕಾರ ಸಂಘಗಳ ಪೈಕಿ ಸುಮಾರು 577 ಸಹಕಾರ ಸಂಘಗಳ ಸದಸ್ಯರು ಗೋಕಾಕದಲ್ಲಿ ನಡೆದ ಪ‍್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಜಿಲ್ಲೆಯ 15 ತಾಲ್ಲೂಕುಗಳಲ್ಲಿಯೂ ಓಡಾಡುತ್ತಿರುವ ಜಾರಕಿಹೊಳಿ ಸಹೋದರರು ಬೇರುಮಟ್ಟದಲ್ಲಿ ಮತಗಳನ್ನು ಗಟ್ಟಿಗೊಳಿಸುವ ಯತ್ನ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.