ADVERTISEMENT

ಬೆಳಗಾವಿ | ಹಲ್ಲೆ ಪ್ರಕರಣ: ಸಂಧಾನ ಸಭೆ ವಿಫಲ; ಪ್ರತಿಭಟನೆ ಘೋಷಣೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 2:32 IST
Last Updated 5 ಜನವರಿ 2026, 2:32 IST
<div class="paragraphs"><p>&nbsp;ಪ್ರಾತಿನಿಧಿಕ ಚಿತ್ರ</p></div>

 ಪ್ರಾತಿನಿಧಿಕ ಚಿತ್ರ

   

ಬೆಳಗಾವಿ: ಬಿಡಿಸಿಸಿ ಬ್ಯಾಂಕ್‌ ನೌಕರರ ಸಂಘದ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಪ್ರತಿಭಟನೆಗೆ ಮುಂದಾಗಿರುವ ನೌಕರರ ಮನವೊಲಿಸಲು, ಇಲ್ಲಿನ ಡಿಸಿಸಿ ಬ್ಯಾಂಕ್‌ ಪ್ರಧಾನ ಕಚೇರಿಯಲ್ಲಿ ಅಧ್ಯಕ್ಷರು ಮತ್ತು ನಿರ್ದೇಶಕರು ಭಾನುವಾರ ನಡೆಸಿದ ಸಭೆ ವಿಫಲವಾಯಿತು.

ಬ್ಯಾಂಕಿನ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ, ಅಪ್ಪಾಸಾಹೇಬ ಕುಲಗೂಡೆ, ಅರವಿಂದ ಪಾಟೀಲ, ವಿರೂಪಾಕ್ಷ ಮಾಮನಿ, ನಾನಾಸಾಹೇಬ ಪಾಟೀಲ ಹಾಗೂ ನೌಕರರ ಸಂಘದ ಪ್ರತಿನಿಧಿಗಳ ಜತೆಗೆ ಸಂಜೆ ಆರಂಭಗೊಂಡ ಸಭೆ 3 ತಾಸಿಗೂ ಅಧಿಕ ಸಮಯ ನಡೆಯಿತು.

ADVERTISEMENT

‘ಗ್ರಾಹಕರ ಹಿತದೃಷ್ಟಿಯಿಂದ ಹೋರಾಟ ಕೈಬಿಟ್ಟು, ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಅಧ್ಯಕ್ಷ ಮತ್ತು ನಿರ್ದೇಶಕರು ಕೋರಿದರು.

ಆದರೆ, ‘ನಿಂಗಪ್ಪ ಕರೆಣ್ಣವರ ಅವರ ಹಲ್ಲೆ ಮಾಡಿದವರ ವಿರುದ್ಧ ಶಿಸ್ತು ಕ್ರಮವಾಗಬೇಕು. ಹಲ್ಲೆ ಮಾಡಿದವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಬೇಡಿಕೆ ಈಡೇರುವವರೆಗೂ ನಾವು ಹೋರಾಟ ಮುಂದುವರಿಸುತ್ತೇವೆ’ ಎಂದು ನೌಕರರ ಸಂಘದವರು ಪಟ್ಟು ಹಿಡಿದರು.

‘ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್‌ನ ಯಾವುದೇ ಶಾಖೆಯಲ್ಲೂ ನೌಕರರು ಸೋಮವಾರ(ಜ.5) ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಬ್ಯಾಂಕ್‌ನ ಬೆಳಗಾವಿ ಪ್ರಧಾನ ಕಚೇರಿಯಲ್ಲಿ ಎಲ್ಲ ನೌಕರರು ಸೇರಿಕೊಂಡು ಪ್ರತಿಭಟಿಸುತ್ತೇವೆ’ ಎಂದು ಸಂಘದ ಉಪಾಧ್ಯಕ್ಷ ಆನಂದ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸವದಿ ಒತ್ತಡ: ದಾಖಲಾಗದ ಪ್ರಕರಣ’

ಗೋಕಾಕ: ಬೆಳಗಾವಿ ಡಿಸಿಸಿ ಬ್ಯಾಂಕ್‌ ನೌಕರರ ಯೂನಿಯನ್ ಅಧ್ಯಕ್ಷ ನಿಂಗರಾಜ (ನಿಂಗಪ್ಪ) ಕರೆಣ್ಣವರ ಮೇಲೆ ಅಥಣಿ ಶಾಸಕ ಲಕ್ಷ್ಮಣ ಸವದಿ ಮತ್ತು ಅವರ ಬೆಂಬಲಿಗರು ನಡೆಸಿದ ಹಲ್ಲೆ ಪ್ರಕರಣದ ಸೂಕ್ತ ತನಿಖೆ ನಡೆಸದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೆಪ್ಪ ತೋಳಿನವರ ಎಚ್ಚರಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಕೀಯ ವೈಷಮ್ಯದಿಂದ ಹಿಂದುಳಿದ ಸಮಾಜದ ಕರೆಣ್ಣವರ ಮೇಲೆ ಹಲ್ಲೆ ನಡೆಸಿದ್ದಾರೆ. ನಿಂಗರಾಜ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರಾಗಿರುವ ಸವದಿಯವರ ಒತ್ತಡದಿಂದಾಗಿ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಬಸಳಿಗುಂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ನಸಲಾಪುರೆ, ಮುಖಂಡರಾದ ಸಿದ್ಲಿಂಗಪ್ಪ ಕಂಬಳಿ, ಲಕ್ಷ್ಮಣ ಮಸಗುಪ್ಪಿ, ಮಂಜುನಾಥ ಸಣ್ಣಕ್ಕಿ, ಲಕ್ಕಪ್ಪ ಮಾಳಗಿ, ವಿಠ್ಠಲ ಗುಂಡಿ, ಗಿರೀಶ ಹಳ್ಳೂರ, ಅವ್ವಣ್ಣ ಮೋಡಿ, ವಿಜಯ ಜಂಬಗಿ, ಲಕ್ಕಪ್ಪ ಹೊಸಕುರಬರ, ಅನೀಲ ತುರಾಯಿದಾರ ಇದ್ದರು.

‘ಕರೆಣ್ಣವರ ಆರೋಪ ಸುಳ್ಳು’

ಅಥಣಿ: ‘ಬಿಡಿಸಿಸಿ ಬ್ಯಾಂಕಿನ ನೌಕರರ ಸಂಘದ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಅವರು, ತಮ್ಮ ಮೇಲೆ ಶಾಸಕ ಲಕ್ಷ್ಮಣ ಸವದಿ, ಅವರ ಪುತ್ರ ಚಿದಾನಂದ ಹಾಗೂ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ’ ಎಂದು ಬಿಡಿಸಿಸಿ ಬ್ಯಾಂಕ್‌ ಅಥಣಿ ಶಾಖೆ ಸಿಬ್ಬಂದಿ ಚೇತನಕುಮಾರ ದಳವಾಯಿ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಿಂಗಪ್ಪ ಕರೆಣ್ಣವರ ಅವರು, ಹೊಸ ವಾಹನ ಖರೀದಿಗಾಗಿ ಪ್ರತಿ ಸಿಬ್ಬಂದಿಯಿಂದ ₹10 ಸಾವಿರಕ್ಕೆ ಬೇಡಿಕೆ ಇರಿಸಿ ಕಿರುಕುಳ ನೀಡುತ್ತಿದ್ದರು. ಹಣ ಕೊಡದಿದ್ದರೆ ವರ್ಗಾವಣೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಇದೇ ವಿಚಾರವಾಗಿ ಚರ್ಚಿಸಲು ಬ್ಯಾಂಕಿನ ನಿರ್ದೇಶಕರೂ ಆಗಿರುವ ಲಕ್ಷ್ಮಣ ಸವದಿ ಅವರ ಮನೆಗೆ ಹೋಗಿದ್ದೆವು. ಆಗ ಈ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಸವದಿ ಹೊರಗೆ ಕಳುಹಿಸಿದ್ದರು’ ಎಂದರು.

‘ಶಾಸಕರ ಮನೆಯಲ್ಲಿ ಶನಿವಾರ ವೈಯಕ್ತಿಕ ಕಾರಣದಿಂದ ಘಟನೆ ಆಗಿದೆಯೇ ಹೊರತು, ಶಾಸಕರು ಮತ್ತು ಅವರ ಪುತ್ರ ಹಲ್ಲೆ ಮಾಡಿಲ್ಲ’ ಎಂದು ಹೇಳಿದರು. ಸಿಬ್ಬಂದಿ ಮಾಯಪ್ಪ ಹಡಲಗಿ, ಮಹೇಶ ಮಾಳಿ, ಶಿವಾನಂದ ಬುರುಡ, ಹನುಮಂತ ಸಂಕ್ರಟ್ಟಿ, ಗೈಬುಸಾ ಮಕಾನದಾರ ಇದ್ದರು.

ಸಮುದಾಯದ ಹೆಸರು ದುರ್ಬಳಕೆ ಬೇಡ:

‘ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೈಯಕ್ತಿಕ ಲಾಭಕ್ಕಾಗಿ ನಮ್ಮ ಸಮುದಾಯದ ಮುಖಂಡ ಸತ್ಯಪ್ಪ ಬಾಗೆಣ್ಣವರ ಅವರು, ಹಾಲುಮತದ ಸಮುದಾಯದ ಹೆಸರು ದುರ್ಬಳಕೆ ಮಾಡಿಕೊಳ್ಳಬಾರದು’ ಎಂದು ಹಾಲುಮತ (ಕುರುಬ) ಸಮಾಜದ ಅಧ್ಯಕ್ಷ ರಾವಸಾಬ ಬೇವನೂರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಶ್ರೀಶೈಲ ಶೆಲ್ಲಪ್ಪಗೋಳ, ಸುರೇಶ ಮಾಯಣ್ಣವರ, ಸುರೇಶ ಪೂಜಾರಿ, ಕಲ್ಲಪ್ಪ ಮೇತ್ರಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.