ADVERTISEMENT

ಬಿಡಿಸಿಸಿ: ಹಿಡಿತ ಸಾಧಿಸಿದ ‘ಜೆ’ ಕಂಪನಿ

ಲಿಂಗಾಯತ ಜಾತಿ ದಾಳ ಬೀಸಿದ ಜಾರಕಿಹೊಳಿ ಸಹೋದರರು, ಪ್ರಾಥಮಿಕ ಸದಸ್ಯತ್ವ ಇಲ್ಲದಿದ್ದರೂ ಬ್ಯಾಂಕ್‌ ಮೇಲೆ ಹಿಡಿತ

ಸಂತೋಷ ಈ.ಚಿನಗುಡಿ
Published 11 ನವೆಂಬರ್ 2025, 0:34 IST
Last Updated 11 ನವೆಂಬರ್ 2025, 0:34 IST
<div class="paragraphs"><p>ಬೆಳಗಾವಿಯಲ್ಲಿ ಸೋಮವಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅಣ್ಣಾಸಾಹೇಬ ಜೊಲ್ಲೆ, ಉಪಾಧ್ಯಕ್ಷರಾದ ಭರಮಗೌಡ ಕಾಗೆ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಗೆಲುವಿನ ನಗೆ ಬೀರಿದರು&nbsp; </p></div>

ಬೆಳಗಾವಿಯಲ್ಲಿ ಸೋಮವಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅಣ್ಣಾಸಾಹೇಬ ಜೊಲ್ಲೆ, ಉಪಾಧ್ಯಕ್ಷರಾದ ಭರಮಗೌಡ ಕಾಗೆ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಗೆಲುವಿನ ನಗೆ ಬೀರಿದರು 

   

ಪ್ರಜಾವಾಣಿ ಚಿತ್ರ

ಬೆಳಗಾವಿ: ಜಿಲ್ಲೆಯ ರಾಜಕಾರಣದ ಮೇಲೆ ನೇರ ಪ್ರಭಾವ ಬೀರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ (ಬಿಡಿಸಿಸಿ) ಬ್ಯಾಂಕ್‌ ಮೇಲೆ ಹಿಡಿತ ಸಾಧಿಸುವಲ್ಲಿ ಜಾರಕಿಹೊಳಿ ಸಹೋದರರು ಸಫಲವಾದರು. ಕುಟುಂಬದ 30 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಹಕಾರ ಕ್ಷೇತ್ರಕ್ಕೆ ನುಗ್ಗಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ, ವಿಧಾನ ಪರಿಷತ್‌ ಸದಸ್ಯ ಲಖನ್‌ ಜಾರಕಿಹೊಳಿ ಮತ್ತು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಇವರಲ್ಲಿ ಯಾರೊಬ್ಬರೂ ಡಿಸಿಸಿ ಬ್ಯಾಂಕ್‌ನ ಪ್ರಾಥಮಿಕ ಸದಸ್ಯರೂ ಆಗಿಲ್ಲ. ಆದರೆ, ಇಡೀ ಬ್ಯಾಂಕಿನ ಚಟುವಟಿಕೆಗಳನ್ನು ‘ನಿಯಂತ್ರಿಸಿದರು’. ಕುಟುಂಬದ ಹೊಸ ತಲೆಮಾರು, ರಮೇಶ ಅವರ ಪುತ್ರ ಅಮರನಾಥ ಮತ್ತು ಸತೀಶ ಪುತ್ರ ರಾಹುಲ್‌ ಅವರನ್ನು ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿಸಿದರು.

ಈ ಚುನಾವಣೆ ‘ಜೆ’ ಕಂಪನಿ (ಜಾರಕಿಹೊಳಿ ಮತ್ತು ಜೊಲ್ಲೆ) ಹಾಗೂ ‘ಕೆ’ ಕಂಪನಿ (ಕತ್ತಿ) ಮಧ್ಯೆ ನೇರ ‍ಪೈಪೋಟಿಗೆ ಸಾಕ್ಷಿಯಾಯಿತು. 16 ನಿರ್ದೇಶಕ ಸ್ಥಾನಗಳ ಪೈಕಿ 11 ಸ್ಥಾನಗಳನ್ನು ಈ ಬಣ ಗೆದ್ದಿತು. ಕತ್ತಿ ಬಣದಲ್ಲಿ ರಮೇಶ ಕತ್ತಿ, ಮಲ್ಲಣ್ಣ ಯಾದವಾಡ, ಶಾಸಕರಾದ ಲಕ್ಷ್ಮಣ ಸವದಿ, ಭರಮಗೌಡ ಕಾಗೆ, ಗಣೇಶ ಹುಕ್ಕೇರಿ ಗೆದ್ದರು. ಸೋಮವಾರ ನಡೆದ ಚುನಾವಣೆ ಕಾಲಕ್ಕೆ ಭರಮಗೌಡ ಹಾಗೂ ಗಣೇಶ ಕೂಡ ‘ಜೆ’ ಕಂಪನಿ ಸೇರುವ ಮೂಲಕ ಕತ್ತಿ ಬಣವನ್ನು ಮತ್ತಷ್ಟು ಬಡ ಮಾಡಿದರು.

ಜಾತಿ ದಾಳ: ಚುನಾವಣೆ ಘೋಷಣೆಗೂ ಮೊದಲೇ ‘ಲಿಂಗಾಯತರನ್ನೇ ಅಧ್ಯಕ್ಷ, ಉಪಾಧ್ಯಕ್ಷ ಮಾಡುತ್ತೇವೆ’ ಎಂದು ಜಾರಕಿಹೊಳಿ ಸಹೋದರರು ಪ್ರಚಾರ ಮಾಡಿದರು. ಈ ಜಾತಿ ದಾಳ ಎಸೆದು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು (ಟಿಎಪಿಸಿಎಂಎಸ್‌) ತೆಕ್ಕೆಗೆ ತೆಗೆದುಕೊಂಡರು. 16 ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡುವುದಕ್ಕೂ ಜಾತಿ ಪ್ರಭಾವ ಬೀರಿತು.

ಖುದ್ದು ಸತೀಶ ಜಾರಕಿಹೊಳಿ ಎರಡು ತಿಂಗಳಿಂದ ಜಿಲ್ಲೆಯಲ್ಲೇ ಬೀಡು ಬಿಟ್ಟಿದ್ದರು. ಹಳ್ಳಿ–ಹಳ್ಳಿಗಳನ್ನು ಸುತ್ತಿ ಮತಬಲ ಹೆಚ್ಚಿಸಿಕೊಂಡರು. ಇದು ಗೆಲುವಿನ ದಡ ಸೇರಿಸಿತು.

ಮತಗಳ ಬೇರು: ಸುಮಾರು ₹8,500 ಕೋಟಿ ದುಡಿಯುವ ಬಂಡವಾಳ ಹೊಂದಿದ ಈ ಬ್ಯಾಂಕ್‌, ₹5,200 ಕೋಟಿಗೂ ಅಧಿಕ ಸಾಲ ನೀಡಿದೆ. 5 ಲಕ್ಷಕ್ಕೂ ಹೆಚ್ಚು ಕೃಷಿ ಕುಟುಂಬಗಳು ಪ್ರತ್ಯಕ್ಷ–‍ ಪರೋಕ್ಷವಾಗಿ ಇದರ ನೆರವು ಪಡೆದಿವೆ. ಹೀಗಾಗಿ, ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿ ಚುನಾವಣೆಯವರೆಗೆ ಎಲ್ಲದರ ಮೇಲೂ ಬ್ಯಾಂಕ್‌ ಪರಿಣಾಮ ಬೀರುತ್ತದೆ.

‘ಬೇರು ಮಟ್ಟದಲ್ಲೇ ಮತಗಳನ್ನು ಗಟ್ಟಿಗೊಳಿಸಬೇಕು ಎಂಬ ಉಪಾಯದಿಂದ ಜಾರಕಿಹೊಳಿ ಸಹೋದರರು ಸಹಕಾರ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ’ ಎಂದು ಹಿರಿಯ ಸಹಕಾರಿಗಳು ವಿಶ್ಲೇಷಣೆ ಮಾಡುತ್ತಾರೆ.

ಆಗ ದುಷ್ಮನ್‌– ಈಗ ದೋಸ್ತಿ

2024ರ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಲ್ಲಿ ಅಣ್ಣಾಸಾಹೇಬ ಜೊಲ್ಲೆ ಅವರು ಪ್ರಿಯಾಂಕಾ ಜಾರಕಿಹೊಳಿ ಎದುರು ಸೋತರು. ಆಗ ರಮೇಶ ಕತ್ತಿ ಜೊತೆ ದೋಸ್ತಿ ಮಾಡಿ ಅಣ್ಣಾಸಾಹೇಬ ಅವರನ್ನು ಸೋಲಿಸಿದರು. ಈಗ ಬ್ಯಾಂಕ್‌ ಚುನಾವಣೆಯಲ್ಲಿ ಜೊಲ್ಲೆ ಅವರೊಂದಿಗೆ ಸ್ನೇಹ ಮಾಡಿ ಕತ್ತಿ ಅವರ ಹಿಡಿತದಿಂದ ಬ್ಯಾಂಕ್‌ ಕಿತ್ತುಕೊಂಡರು.

ಲೋಕಸಭೆ ಚುನಾವಣೆಯಲ್ಲಿ ರಮೇಶ ಕತ್ತಿಯೇ ತಮ್ಮ ಸೋಲಿಗೆ ಕಾರಣವಾದರು ಎಂಬ ಸೇಡಿನಿಂದ ಅಣ್ಣಾಸಾಹೇಬ ಕೂಡ ವೈರಿ ಪಡೆ (ಜಾರಕಿಹೊಳಿ) ಸೇರಿಕೊಂಡರು. ಅವರ ನೆರವಿನೊಂದಿಗೆ ಕತ್ತಿ ಅವರನ್ನು ಬ್ಯಾಂಕಿನ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿದರು. ಚುನಾವಣೆ ಪೂರ್ವ ಮಾತಿನಂತೆ ಜೊಲ್ಲೆ ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದರು. 20 ವರ್ಷ ಅಧ್ಯಕ್ಷರಾಗಿದ್ದ ರಮೇಶ ಕತ್ತಿ ಈಗ ನಿರ್ದೇಶಕರಾಗಿ ಮಾತ್ರ ಮುಂದುವರಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.