
ಬೆಳಗಾವಿ: ನಗರದಲ್ಲಿ ಬೀದಿಬದಿ ವ್ಯಾಪಾರ ಮಾಡುವವರಿಂದ ಗುತ್ತಿಗೆದಾರರು ಹೆಚ್ಚುವರಿ ಬಾಡಿಗೆ ವಸೂಲಿ ಮಾಡಿ ಕಿರುಕುಳ ಕೊಡುತ್ತಿದ್ದಾರೆ. ಅಂಗವಿಕಲರನ್ನೂ ಅವರು ಬಿಡುತ್ತಿಲ್ಲ. ನೀವೇನು ಮಾಡುತ್ತಿದ್ದೀರಿ? ಎಂದು ಶಾಸಕ ಆಸಿಫ್ ಸೇಠ್, ಇಲ್ಲಿನ ಪಾಲಿಕೆ ಪರಿಷತ್ ಸಭೆಯಲ್ಲಿ ಮಂಗಳವಾರ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡರು.
ಮೇಯರ್ ಮಂಗೇಶ ಪವಾರ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ಪರಿಷತ್ ಸಭೆಯಲ್ಲಿ ಹೆಚ್ಚುವರಿ ಭೂಬಾಡಿಗೆ ವಸೂಲಿ ವಿಷಯ ಪ್ರತಿಧ್ವನಿಸಿತು.
‘ಜೀವನೋಪಾಯಕ್ಕಾಗಿ ಕೆಲವರು ಹಣ್ಣು, ತರಕಾರಿ ಮತ್ತಿತರ ವಸ್ತು ಮಾರಾಟ ಮಾಡುತ್ತಿದ್ದಾರೆ. ಗುತ್ತಿಗೆದಾರರು ಅವರಿಗೆ, ಅವರಲ್ಲೂ ದೈಹಿಕವಾಗಿ ಅಶಕ್ತರಾದವರಿಗೆ ಕಿರುಕುಳ ಕೊಡುತ್ತಿದ್ದಾರೆ. ಅಧಿಕಾರಿಗಳು ಇದನ್ನು ತಡೆಯದಿರುವುದು ಸರಿಯಲ್ಲ’ ಎಂದು ಸೇಠ್ ಆಕ್ರೋಶ ವ್ಯಕ್ತಪಡಿಸಿದರು.
‘ಕೆಲವು ಪ್ರಕರಣಗಳಲ್ಲಿ ಗುತ್ತಿಗೆದಾರರು ಮಾನವೀಯತೆಯಿಂದ ವರ್ತಿಸಬೇಕು. ಎಲ್ಲದಕ್ಕೂ ನಿಯಮವನ್ನೇ ಅವಲಂಬಿಸಲು ಆಗದು. ಆದರೆ, ಗುತ್ತಿಗೆದಾರರು ಮಾನವೀಯತೆ ಮರೆತು ವರ್ತಿಸುತ್ತಿರುವುದು ಸರಿಯಲ್ಲ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವಿರೋಧ ಗುಂಪಿನ ಎಲ್ಲ ಸದಸ್ಯರೂ ಒತ್ತಾಯಿಸಿದರು.
‘ಹಲವು ಕಷ್ಟಗಳ ಮಧ್ಯೆಯೇ ಕೆಲವು ಅಂಗವಿಕಲರು ದುಡಿಯುತ್ತ, ನಿತ್ಯ ₹100ರಿಂದ ₹200 ಗಳಿಸುತ್ತಾರೆ. ಅದರಲ್ಲೇ ಬದುಕು ಸಾಗಿಸುತ್ತಿದ್ದಾರೆ. ಹೀಗಿರುವಾಗ ಹೆಚ್ಚಿನ ಭೂಬಾಡಿಗೆ ವಸೂಲಿ ಮಾಡುವುದು ಸರಿಯೇ? ಈ ವಿಚಾರದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮಾನವೀಯತೆ ತೋರಿಲ್ಲ’ ಎಂದು ಕೋಪಗೊಂಡರು.
ಗುತ್ತಿಗೆದಾರರ ವಿರುದ್ಧ ದೂರು ನೀಡಲು ಅಂಗವಿಕಲ ವ್ಯಾಪಾರಿಯೊಬ್ಬರು ಪಾಲಿಕೆ ಕಚೇರಿಗೆ ಬಂದಿದ್ದರು. ಈ ವಿಷಯ ಗೊತ್ತಾದ ತಕ್ಷಣ ಸೇಠ್, ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಮತ್ತು ಎಲ್ಲ ಸದಸ್ಯರು, ವ್ಯಾಪಾರಿ ಬಳಿ ತೆರಳಿ ಸಮಸ್ಯೆ ಆಲಿಸಿದರು. ನಂತರ ಮತ್ತೆ ಸಭೆ ಆರಂಭವಾಯಿತು.
ಮಾತು ಮುಂದುವರಿಸಿದ ಸೇಠ್, ‘ಅಂಗವಿಕಲ ವ್ಯಾಪಾರಿಯಿಂದ ಭೂಬಾಡಿಗೆ ಸಂಗ್ರಹಿಸುವ ನಿಯಮ ಸಡಿಲಿಸಬೇಕು’ ಎಂದು ಕೋರಿದರು.
‘ಈ ಬಗ್ಗೆ ಭೂಬಾಡಿಗೆ ಸಂಗ್ರಹಿಸುವವರ ಜತೆಗೆ ಚರ್ಚಿಸಿ ಕ್ರಮ ವಹಿಸುತ್ತೇನೆ’ ಎಂದು ಮಂಗೇಶ ಪವಾರ ಹೇಳಿದರು.
‘ದೈಹಿಕವಾಗಿ ಅಶಕ್ತರಾಗಿರುವ ಮಾರಾಟಗಾರರಿಂದ ಭೂಬಾಡಿಗೆ ಸಂಗ್ರಹಿಸದಂತೆ ಗುತ್ತಿಗೆದಾರರಿಗೆ ಸೂಚನೆ ಕೊಟ್ಟಿದ್ದೇವೆ. ಪ್ರಸ್ತುತ ಎರಡು ಮಾರಾಟ ವಲಯಗಳಿಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಆದರೆ, ಇನ್ನೂ ಅನುಮೋದನೆ ಸಿಕ್ಕಿಲ್ಲ’ ಎಂದು ಪಾಲಿಕೆ ಉಪ ಆಯುಕ್ತೆ(ಕಂದಾಯ) ರೇಷ್ಮಾ ತಾಳಿಕೋಟಿ ವಿವರಿಸಿದರು.
ಆಯುಕ್ತ ಕಾರ್ತಿಕ ಎಂ., ‘ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.
ಉಪಮೇಯರ್ ವಾಣಿ ಜೋಶಿ ಇತರರಿದ್ದರು.
‘ಮಹಾನಗರ ಪಾಲಿಕೆಯಲ್ಲಿ ನಡೆದ ಸಭೆಗಳಲ್ಲಿ ಕೈಗೊಂಡ ಯಾವುದೇ ನಿರ್ಣಯ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ’ ಎಂದು ವಿರೋಧ ಪಕ್ಷದ ಸದಸ್ಯರಾದ ಅಜೀಮ್ ಪಟವೇಗಾರ, ಶಾಹೀದ್‌ಖಾನ್ ಪಠಾಣ ದೂರಿದರು.
‘ನಾವು ಕೇಳಿದ ಯಾವುದೇ ಮಾಹಿತಿಯನ್ನು ಅಧಿಕಾರಿಗಳು ಸ್ಪಷ್ಟವಾಗಿ ನೀಡುತ್ತಿಲ್ಲ. ಸಭೆ ಬಗ್ಗೆ ಮುಂಚಿತವಾಗಿಯೇ ತಿಳಿಸುತ್ತಿಲ್ಲ. ವಿವಿಧ ನೆಪಗಳನ್ನೊಡ್ಡಿ ಜಾರಿಕೊಳ್ಳುತ್ತಿದ್ದಾರೆ’ ಎಂದು ಆಪಾದಿಸಿದರು.
ಈ ಬಗ್ಗೆ ಅಧಿಕಾರಿಗಳು ಸಮಜಾಯಿಷಿ ನೀಡಿದರೂ ಸುಮ್ಮನಾಗದ ಸದಸ್ಯರು, ಅಧಿಕಾರಿಗಳ ವಿರುದ್ಧ ಹರಿಹಾಯ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.