ADVERTISEMENT

ಬೆಳಗಾವಿ: ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಆಗ್ರಹಿಸಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 14:54 IST
Last Updated 13 ಜನವರಿ 2020, 14:54 IST

ಬೆಳಗಾವಿ: ‘ನೆರೆ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡಬೇಕು. ಹಲಗಾ-ಮಚ್ಚೆ ಬೈಪಾಸ್‌ ಕಾಮಗಾರಿ ರದ್ದುಗೊಳಿಸಬೇಕು’ ಎನ್ನುವುದು ಸೇರದಿಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರಿಗೆ ಮನವಿ ಸಲ್ಲಿಸಿದರು.

‘ಸಂತ್ರಸ್ತರನ್ನು ಗುರುತಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಎಲ್ಲವನ್ನೂ ಕಳೆದುಕೊಂಡಿದ್ದರೂ ಪರಿಹಾರ ಸಿಗದವರಿಗೆ ನ್ಯಾಯ ಒದಗಿಸಬೇಕು. ಪ್ರವಾಹ, ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಬೇಕಾಗುವಷ್ಟು ಮರಳನ್ನು ಜಿಲ್ಲಾಡಳಿತದಿಂದಲೇ ಪೂರೈಸಬೇಕು’ ಎಂದು ಒತ್ತಾಯಿಸಿದರು.

‘ಹಲಗಾ-ಮಚ್ಚೆ ಬೈಪಾಸ್‌ ನಿರ್ಮಾಣದಿಂದ ರೈತರು ಫಲವತ್ತಾದ ಜಮೀನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ರೈತರ ಹಿತದೃಷ್ಟಿಯಿಂದ ಈ ಕಾಮಗಾರಿ ನಿಲ್ಲಿಸಬೇಕು. ಸ್ವಾಧೀನಪಡಿಸಿಕೊಂಡಿರುವ ಜಮೀನು ವಾಪಸ್‌ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಜಿಲ್ಲೆಯ ಎಲ್ಲ ರಾಸಾಯನಿಕ ರಸಗೊಬ್ಬರ ಅಂಗಡಿಗಳಲ್ಲೂ ದರ ಪಟ್ಟಿ ಪ್ರಕಟಿಸಬೇಕು. ಫಸಲ್ ಬೀಮಾ ಯೋಜನೆ ಸಮೀಕ್ಷೆಯನ್ನು ರೈತರ ಉಪಸ್ಥಿತಿಯಲ್ಲಿಯೇ ನಡೆಸಬೇಕು. ಏಜೆಂಟರ ಹಾವಳಿ ತಪ್ಪಿಸಬೇಕು. ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಸತ್ಯಪ್ಪ ಮಲ್ಲಾಪುರೆ, ಕಾರ್ಯಾಧ್ಯಕ್ಷ ರವಿ ಸಿದ್ದಮ್ಮನವರ, ಉಪಾಧ್ಯಕ್ಷ ಗೋಪಾಲ ಕುಕನೂರ, ಪ್ರಧಾನ ಕಾರ್ಯದರ್ಶಿ ಮಲ್ಲು ದೇಸಾಯಿ, ಮುಖಂಡರಾದ ತ್ಯಾಗರಾಜ ಕದಂ, ರಾಜು ಮರವೆ, ಭರಮು ಖೇಮಲಾಪುರೆ, ಶಿವಾನಂದ ದೊಡವಾಡ, ಮಹಾದೇವ ಮಡಿವಾಳರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.