ADVERTISEMENT

ಬೆಳಗಾವಿ: ಗಣೇಶ ಮೂರ್ತಿ ವಿಸರ್ಜನೆಗಾಗಿ ಈದ್‌–ಮಿಲಾದ್‌ ಮೆರವಣಿಗೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 13:21 IST
Last Updated 25 ಆಗಸ್ಟ್ 2025, 13:21 IST
   

ಬೆಳಗಾವಿ: ವೈಭವದಿಂದ ನಡೆಯುವ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಗೆ ಸೆ.6ರಂದು ಕುಂದಾನಗರಿ ಸಾಕ್ಷಿಯಾಗಲಿದೆ. 

ಇದಕ್ಕೆ ತೊಡಕು ಆಗದಿರಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಅನುಕೂಲವಾಗಲಿ ಎಂಬ ಆಶಯದಿಂದ ಮುಸ್ಲಿಮರು ಸೆ.5ರಂದು ನಡೆಯಬೇಕಿದ್ದ ಈದ್‌–ಮಿಲಾದ್‌ ಮೆರವಣಿಗೆಯನ್ನು ಸೆ.14ಕ್ಕೆ ಮುಂದೂಡಿದ್ದಾರೆ. ಈ ಮೂಲಕ ಸತತ ಎರಡನೇ ವರ್ಷವೂ ಭಾವೈಕ್ಯ ಮೆರೆದಿದ್ದಾರೆ. ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಈ ನಿರ್ಣಯ ಸ್ವಾಗತಿಸಿದ್ದಾರೆ.

ಮಹಾರಾಷ್ಟ್ರದ ಪುಣೆ, ಮುಂಬೈ ಬಿಟ್ಟರೆ, ಅದ್ದೂರಿಯಾಗಿ ಗಣೇಶೋತ್ಸವ ನೆರವೇರುವುದೇ ಬೆಳಗಾವಿಯಲ್ಲಿ. ಈ ಸಲ 370ಕ್ಕೂ ಅಧಿಕ ಸಾರ್ವಜನಿಕ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿದ್ದು, ಸೆ.6ರಂದು ಸಂಜೆಯಿಂದ 7ರಂದು ಮಧ್ಯಾಹ್ನದವರೆಗೂ ಮೆರವಣಿಗೆ ನಡೆಯುವ ಸಾಧ್ಯತೆಯಿದೆ. ಅದರ ಮುನ್ನಾ, ನಗರದ ಹಲವು ಮಾರ್ಗಗಳಲ್ಲಿ ‘ಈದ್‌–ಮಿಲಾದ್‌’ ಮೆರವಣಿಗೆಯನ್ನು ವೈಭವದಿಂದ ನಡೆಸಲು ಮುಸ್ಲಿಮರು ತಯಾರಿ ನಡೆಸಿದ್ದರು. 

ADVERTISEMENT

ಇಲ್ಲಿ ಸೋಮವಾರ ನಡೆದ ಮುಸ್ಲಿಂ ಧರ್ಮಗುರುಗಳು ಹಾಗೂ ಮುಖಂಡರ ಸಭೆಯಲ್ಲಿ ಮೆರವಣಿಗೆ ಮುಂದೂಡುವ ನಿರ್ಣಯ ಕೈಗೊಳ್ಳಲಾಯಿತು.

‘ಈ ವರ್ಷ ಈದ್‌–ಮಿಲಾದ್‌ ಮೆರವಣಿಗೆಯನ್ನು ಸಂಭ್ರಮದಿಂದ ಮಾಡಲು ಮುಸ್ಲಿಮರು ತಯಾರಿ ಮಾಡಿಕೊಂಡಿದ್ದರು. ಮೊದಲು ಗಣೇಶ ಮೂರ್ತಿಗಳ ಮೆರವಣಿಗೆ ಸಡಗರದಿಂದ ನೆರವೇರಲೆಂದು ಅದನ್ನು ಮುಂದೂಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಮಗೂ ನೆರವಾಗಿದ್ದಾರೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಭೂಷಣ ಬೊರಸೆ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.