ಬೆಳಗಾವಿಯ ಶಿವಬಸವ ನಗರದ ರಸ್ತೆಯಲ್ಲಿ ಅಪಾರ ಪ್ರಮಾಣದಲ್ಲಿ ನಿಂತಿದ್ದ ನೀರಿನಲ್ಲೇ ಕಾರೊಂದು ಸಾಗಿತು
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿಯಿಂದ ಶನಿವಾರ ಮಧ್ಯಾಹ್ನದವರೆಗೂ ನಿರಂತರ ಮಳೆ ಸುರಿಯಿತು. ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಬಿಡುವು ನೀಡಿದ್ದ ಮಳೆ ಏಕಾಏಕಿ ಆರಂಭವಾಯಿತು. ಇದರಿಂದ ನಗರದ ತಗ್ಗು ಪ್ರದೇಶಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಯಿತು. ವಾಹನ ಸವಾರರು, ಪಾದಚಾರಿಗಳು ಪರದಾಡಿದರು.
ಶುಕ್ರವಾರ ರಾತ್ರಿ ಚುರುಕುಗೊಂಡ ಮಳೆ ಬೆಳಗಾವಿ, ರಾಯಬಾಗ, ಕಾಗವಾಡ, ಸವದತ್ತಿ, ರಾಮದುರ್ಗ, ಚನ್ನಮ್ಮನ ಕಿತ್ತೂರು, ಎಂ.ಕೆ.ಹುಬ್ಬಳ್ಳಿ, ಬೈಲಹೊಂಗಲ, ನಿಪ್ಪಾಣಿಯಲ್ಲಿ ಶುಕ್ರವಾರ ರಾತ್ರಿಯಿಡೀ ಸುರಿದಿದ್ದರಿಂದ ವಾತಾವರಣ ತಂಪೇರಿತು.
ಜತೆಗೆ, ಅಪಾರ ಪ್ರಮಾಣದಲ್ಲಿ ಮಳೆನೀರು ನಿಂತಿದ್ದರಿಂದ ಕೃಷಿಭೂಮಿಗಳು ಕೆರೆಯಂತಾದವು. ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಸುರಿದ ಮಳೆಯಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಕಟಾವು ಹಂತಕ್ಕೆ ಬಂದಿದ್ದ ಬೆಳೆ ಕಳೆದುಕೊಳ್ಳುವ ಆತಂಕ ರೈತರನ್ನು ಕಾಡುತ್ತಿದೆ. ಮತ್ತೊಂದೆಡೆ, ಹಿಂಗಾರು ಹಂಗಾಮಿನಲ್ಲಿ ವರುಣ ಕೈಹಿಡಿಯಬಹುದೆಂಬ ಆಶಾಭಾವವೂ ರೈತ ವಲಯದಲ್ಲಿ ಮೂಡಿದೆ.
ನಗರದ ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿದ್ದು, ವಿದ್ಯುತ್ ಕಂಬಗಳೂ ವಾಲಿವೆ. ಯಾವುದೇ ಅವಘಡ ಸಂಭವಿಸಿಲ್ಲ. ಜೂನ್ ಆರಂಭದಿಂದಲೂ ಉಕ್ಕಿ ಹರಿಯುತ್ತಿರುವ ಜಿಲ್ಲೆಯ ಏಳೂ ನದಿಗಳಲ್ಲಿ ಮತ್ತೆ ಶನಿವಾರ ಹೆಚ್ಚಿನ ರಭಸ ಕಂಡುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.